ಅಗ್ನಿಪಥ್: ಅಗ್ನಿವೀರರಿಗೆ ಬಿಜೆಪಿ ಕಚೇರಿಯಲ್ಲಿ ಗಾರ್ಡ್‌ ಕೆಲಸ: ವಿಜಯವರ್ಗೀಯ ವಿವಾದ

ಬಿಜೆಪಿ ಕಚೇರಿಯಲ್ಲಿ ಭದ್ರತಾ ಸಿಬ್ಬಂದಿ ನೇಮಕ ಮಾಡಿಕೊಳ್ಳುವ ಪ್ರಸಂಗ ಬಂದರೆ, ಅಗ್ನಿವೀರರಿಗೆ ನಾನು ಆದ್ಯತೆ ನೀಡುತ್ತೇನೆ ಎಂದು ಹೇಳುವ ಮೂಲಕ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯ ವಿವಾದಕ್ಕೀಡಾಗಿದ್ದಾರೆ.
ವಿಜಯವರ್ಗೀಯ
ವಿಜಯವರ್ಗೀಯ

ಇಂದೋರ್: ಬಿಜೆಪಿ ಕಚೇರಿಯಲ್ಲಿ ಭದ್ರತಾ ಸಿಬ್ಬಂದಿ ನೇಮಕ ಮಾಡಿಕೊಳ್ಳುವ ಪ್ರಸಂಗ ಬಂದರೆ, ಅಗ್ನಿವೀರರಿಗೆ ನಾನು ಆದ್ಯತೆ ನೀಡುತ್ತೇನೆ ಎಂದು ಹೇಳುವ ಮೂಲಕ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯ ವಿವಾದಕ್ಕೀಡಾಗಿದ್ದಾರೆ.

‘ಬಿಜೆಪಿ ಕಚೇರಿಯಲ್ಲಿ ಭದ್ರತಾ ಸಿಬ್ಬಂದಿ ನೇಮಕ ಮಾಡಿಕೊಳ್ಳುವ ಪ್ರಸಂಗ ಬಂದರೆ, ಅಗ್ನಿವೀರರಿಗೆ ನಾನು ಆದ್ಯತೆ ನೀಡುತ್ತೇನೆ’ ಎಂದು ವಿಜಯವರ್ಗೀಯ ಅವರು ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಭಾನುವಾರ ಹೇಳಿದ್ದಾರೆ. ಕೇಂದ್ರ ಸರ್ಕಾರದ ‘ಅಗ್ನಿಪಥ’ ಯೋಜನೆಯನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ವಿಜಯವರ್ಗೀಯ ಅವರು ನೀಡಿದ ಹೇಳಿಕೆಗೆ ವಿವಿಧ ವಲಯಗಳಿಂದ ಭಾರಿ ವಿರೋಧ ವ್ಯಕ್ತವಾಗುತ್ತಿದ್ದು, ಈ ಹೇಳಿಕೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ‌

ವಿಪಕ್ಷಗಳಿಂದ ತೀವ್ರ ವಿರೋಧ
ಸಾಮಾಜಿಕ ಜಾಲತಾಣಗಳಲ್ಲಿ ವಿಜಯವರ್ಗೀಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಬಿಜೆಪಿ ಮುಖಂಡ ವರುಣ್ ಗಾಂಧಿ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸೇರಿದಂತೆ ರಾಜಕೀಯ ಮುಖಂಡರು ಈ ಹೇಳಿಕೆಯನ್ನು ಖಂಡಿಸಿದ್ದಾರೆ. ರಕ್ಷಣಾ ಪಡೆಗಳನ್ನು ಅಪಮಾನಿಸಿದ ವಿಜಯವರ್ಗೀಯ ಕ್ಷಮೆ ಕೇಳಬೇಕು ಎಂದು ಮಧ್ಯಪ್ರದೇಶ ಕಾಂಗ್ರೆಸ್ ಘಟಕ ಆಗ್ರಹಿಸಿದೆ. 

‘ಅಗ್ನಿವೀರರಿಗೆ ಬಿಜೆಪಿ ಕಚೇರಿಯಲ್ಲಿ ‘ಸೆಕ್ಯುರಿಟಿ ಗಾರ್ಡ್’ ಕೆಲಸ ನೀಡುವುದಾಗಿ ವಿಜಯವರ್ಗೀಯ ಹೇಳಿದ್ದಾರೆ. 2019ರಲ್ಲಿ ಬಿಜೆಪಿ ಆರಂಭಿಸಿದ್ದ ‘ನಾನೂ ಚೌಕಿದಾರ’ ಅಭಿಯಾನದ ಅರ್ಥ ಏನು ಎಂಬುದು ಈಗ ಸ್ಪಷ್ಟಗೊಂಡಿದೆ’ ಎಂದು ಕಾಂಗ್ರೆಸ್ ಮುಖಂಡ ಜೈರಾಂ ರಮೇಶ್ ಹೇಳಿದ್ದಾರೆ.  

ಸ್ಪಷ್ಟನೆ ನೀಡಿದ ವಿಜಯವರ್ಗೀಯ
ತಮ್ಮ ಹೇಳಿಕೆಗೆ ವ್ಯಕ್ತವಾದ ತೀವ್ರ ಟೀಕೆಗೆ ಸ್ಪಷ್ಟನೆ ನೀಡಲು ಯತ್ನಿಸಿದ ವಿಜಯವರ್ಗೀಯ ಅವರು, ಇದರ ಹಿಂದೆ ಟೂಲ್‌ಕಿಟ್ ತಂಡ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ‘ಅಗ್ನಿವೀರರು ತಮ್ಮ ಸೇವಾವಧಿ ಪೂರ್ಣಗೊಳಿಸಿದ ಬಳಿಕ ಅವರ ಸೇವೆಯನ್ನು ಯಾವ ಕ್ಷೇತ್ರದಲ್ಲಿ ಬೇಕಾದರೂ ಬಳಸಿಕೊಳ್ಳಬಹುದು ಎಂಬ ಅರ್ಥದಲ್ಲಿ ನಾನು ಹೇಳಿಕೆ ನೀಡಿದ್ದೆ. ‘ನಾಲ್ಕು ವರ್ಷಗಳ ಸೇವಾವಧಿ ಪೂರ್ಣಗೊಳಿಸಿ ಹೊರಬರುವ ಅಗ್ನಿವೀರರಿಗೆ 11 ಲಕ್ಷ ರೂ ಹಣದ ಜೊತೆಗೆ ಅಗ್ನಿವೀರ ಎಂಬ ಪಟ್ಟ ಸಿಗುತ್ತದೆ. ತರಬೇತಿಯ ಅವಧಿಯಲ್ಲಿ ಅಗ್ನಿವೀರರಲ್ಲಿ ಶಿಸ್ತು, ವಿಧೇಯತೆ ಮೊದಲಾದ ಗುಣಗಳು ಬೆಳೆಯುತ್ತವೆ. ಇದು ಸೇನಾ ತರಬೇತಿಯ ಭಾಗವೂ ಹೌದು. ಸೇನಾ ತರಬೇತಿಯಲ್ಲಿ ಶಿಸ್ತಿಗೆ ಮೊದಲ ಸ್ಥಾನವಿದ್ದರೆ, ಆದೇಶಗಳನ್ನು ಪಾಲಿಸುವುದು ಎರಡನೇ ಕರ್ತವ್ಯವಾಗಿರಲಿದೆ’ ಎಂದು ವಿಜಯವರ್ಗೀಯ ಸುದ್ದಿಗೋಷ್ಠಿಯಲ್ಲಿ ವಿವರಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com