ಅಗ್ನಿಪಥ್ ಯೋಜನೆ ವಿರುದ್ಧ ಅರ್ಜಿ: ಸುಪ್ರೀಂ ಕೋರ್ಟ್ ಗೆ ಕೇವಿಯೆಟ್ ಸಲ್ಲಿಸಿದ ಕೇಂದ್ರ
ಕೇಂದ್ರ ಸರ್ಕಾರದ ಹೊಸ ಸೇನಾ ನೇಮಕಾತಿ ಅಗ್ನಿಪಥ್ ಯೋಜನೆ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಸಂಬಂಧ ಯಾವುದೇ ಆದೇಶವನ್ನು ಹೊರಡಿಸುವ ಮೊದಲು ತನ್ನ ವಾದವನ್ನು ಆಲಿಸಬೇಕು...
Published: 21st June 2022 07:36 PM | Last Updated: 21st June 2022 07:36 PM | A+A A-

ಸುಪ್ರೀಂ ಕೋರ್ಟ್
ನವದೆಹಲಿ: ಕೇಂದ್ರ ಸರ್ಕಾರದ ಹೊಸ ಸೇನಾ ನೇಮಕಾತಿ ಅಗ್ನಿಪಥ್ ಯೋಜನೆ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಸಂಬಂಧ ಯಾವುದೇ ಆದೇಶವನ್ನು ಹೊರಡಿಸುವ ಮೊದಲು ತನ್ನ ವಾದವನ್ನು ಆಲಿಸಬೇಕು ಎಂದು ಕೋರಿ ಕೇಂದ್ರ ಸರ್ಕಾರ ಮಂಗಳವಾರ ಸುಪ್ರೀಂ ಕೋರ್ಟ್ ಗೆ ಕೇವಿಯೆಟ್ ಸಲ್ಲಿಸಿದೆ.
ಜೂನ್ 14 ರಂದು ಘೋಷಿಸಲಾದ ಅಗ್ನಿಪಥ್ ಯೋಜನೆ ಅಡಿ 17 ವರೆ ವರ್ಷದಿಂದ 21 ವರ್ಷದೊಳಗಿನ ಯುವಕರನ್ನು ನಾಲ್ಕು ವರ್ಷಗಳ ಅವಧಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ ಮತ್ತು ಅವರಲ್ಲಿ ಶೇಕಡಾ 25 ರಷ್ಟ ಜನರನ್ನು ಇನ್ನೂ 15 ವರ್ಷಗಳವರೆಗೆ ಉಳಿಸಿಕೊಳ್ಳುವ ಅವಕಾಶವಿದೆ.
ಇದನ್ನು ಓದಿ: ಅಗ್ನಿಪಥ್: ನಾಲ್ಕು ವರ್ಷದ ಅವಧಿ ಕಡಿಮೆಯಾಯಿತು- ಮಾಜಿ ಸೇನಾ ಮುಖ್ಯಸ್ಥ ಜನರಲ್ ವಿ.ಪಿ ಮಲೀಕ್
ಅಗ್ನಿಪಥ್ ಯೋಜನೆ ವಿರೋಧಿಸಿ ದೇಶಾದ್ಯಂತ ಭಾರೀ ಪ್ರತಿಭಟನೆಗಳು ನಡೆಯುತ್ತಿದ್ದು, ಏತನ್ಮಧ್ಯೆ ಸೋಮವಾರ ಅಗ್ನಿಪಥ್ ಯೋಜನೆ ಮರುಪರಿಶೀಲಿಸುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಸುಪ್ರೀಂ ಕೋರ್ಟ್‌ಗೆ ಹೊಸ ಅರ್ಜಿ ಸಲ್ಲಿಸಲಾಗಿದೆ.
ವಕೀಲ ಹರ್ಷ್ ಅಜಯ್ ಸಿಂಗ್ ಅವರು ಅಗ್ನಿಪಥ್ ಯೋಜನೆ ವಿರುದ್ಧ ಪಿಐಎಲ್ ಸಲ್ಲಿಸಿದ್ದು, ಅಗ್ನಿಪಥ್ ಯೋಜನೆ, ರಾಷ್ಟ್ರೀಯ ಭದ್ರತೆ ಮತ್ತು ಸೇನೆಯ ಮೇಲೆ ಅದರಿಂದಾಗುವ ಪರಿಣಾಮದ ಕುರಿತು ಪರಿಶೀಲಿಸಲು ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿ ರಚಿಸಬೇಕು ಎಂದು ಮನವಿ ಮಾಡಿದ್ದಾರೆ.
ಮತ್ತೊಂದು ಪಿಐಎಲ್‌ನಲ್ಲಿ ವಕೀಲ ಎಂ.ಎಲ್.ಶರ್ಮಾ ಅವರು, ‘ಅಗ್ನಿಪಥ’ ಯೋಜನೆಯ ಮೂಲಕ ಶತಮಾನದಷ್ಟು ಹಳೆಯದಾದ ಸೇನಾ ನೇಮಕಾತಿ ಕ್ರಮವನ್ನು ಕೇಂದ್ರ ಸರ್ಕಾರ ಕೈಬಿಟ್ಟಿದೆ. ಸಂಸತ್ತಿನ ಅನುಮೋದನೆ ಇಲ್ಲದ ಈ ಕ್ರಮ ಸಂವಿಧಾನಬಾಹಿರ’ ಎಂದಿದ್ದಾರೆ.