'ನನಗೆ 37 ಶಾಸಕರ ಬೆಂಬಲವಿದೆ' ಎಂದ ಏಕನಾಥ್ ಶಿಂಧೆ: 'ಸದನದಲ್ಲಿ ಸಾಬೀತುಪಡಿಸಿ' ಎಂದ ಶರದ್ ಪವಾರ್
ಗುವಾಹಟಿಯ ಹೊಟೇಲ್ ಮುಂದೆ ಗುಂಪಿನಲ್ಲಿ ಫೋಟೋ ತೆಗೆದುಕೊಂಡು ಶಿವಸೇನೆಯ ಬಂಡಾಯ ನಾಯಕ ಏಕನಾಥ್ ಶಿಂಧೆ ತಮಗೆ 37 ಶಾಸಕರ ಬೆಂಬಲವಿದೆ ಎಂದು ತೋರಿಸಿದ್ದಾರೆ. ಆ ಮೂಲಕ ಪಕ್ಷಾಂತರ ವಿರೋಧಿ ಕಾನೂನಿನಿಂದ ತಪ್ಪಿಸಿಕೊಳ್ಳುವ ಆಲೋಚನೆ ಏಕನಾಥ್ ಶಿಂಧೆಯದ್ದು. ನಿನ್ನೆ ಗುವಾಹಟಿಯಲ್ಲಿ ತೆಗೆದ ಗ್ರೂಪ್ ಫೋಟೋದಲ್ಲಿ 9 ಸ್ವತಂತ್ರ ಶಾಸಕರೂ ಇದ್ದಾರೆ.
Published: 24th June 2022 09:02 AM | Last Updated: 24th June 2022 01:40 PM | A+A A-

ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಎನ್ ಸಿಪಿ ನಾಯಕ ಶರದ್ ಪವಾರ್
ಮುಂಬೈ: ಗುವಾಹಟಿಯ ಹೊಟೇಲ್ ಮುಂದೆ ಗುಂಪಿನಲ್ಲಿ ಫೋಟೋ ತೆಗೆದುಕೊಂಡು ಶಿವಸೇನೆಯ ಬಂಡಾಯ ನಾಯಕ ಏಕನಾಥ್ ಶಿಂಧೆ ತಮಗೆ 37 ಶಾಸಕರ ಬೆಂಬಲವಿದೆ ಎಂದು ತೋರಿಸಿದ್ದಾರೆ. ಆ ಮೂಲಕ ಪಕ್ಷಾಂತರ ವಿರೋಧಿ ಕಾನೂನಿನಿಂದ ತಪ್ಪಿಸಿಕೊಳ್ಳುವ ಆಲೋಚನೆ ಏಕನಾಥ್ ಶಿಂಧೆಯದ್ದು. ನಿನ್ನೆ ಗುವಾಹಟಿಯಲ್ಲಿ ತೆಗೆದ ಗ್ರೂಪ್ ಫೋಟೋದಲ್ಲಿ 9 ಸ್ವತಂತ್ರ ಶಾಸಕರೂ ಇದ್ದಾರೆ.
ಆದರೆ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಬೆಂಬಲಕ್ಕೆ ನಿಂತಿದ್ದು, ವಿಧಾನಸಭೆಯಲ್ಲಿ ವಿಶ್ವಾಸ ಮತದಲ್ಲಿ ಮಾತ್ರ ಸಂಖ್ಯಾ ಬಲವನ್ನು ಸಾಬೀತುಪಡಿಸಬಹುದು ಎಂದು ನಿನ್ನೆ ಹೇಳಿದ್ದಾರೆ. ಶಿಂಧೆಯವರ ಈ ರಾಜಕೀಯದಾಟದ ಹಿಂದೆ ಬಿಜೆಪಿ ನಾಯಕರ ಕೈವಾಡವಿದೆ ಎಂದು ಅವರು ಆರೋಪಿಸಿದ್ದಾರೆ.
ಬಂಡಾಯ ಶಾಸಕರನ್ನು ಮತ್ತೆ ಮುಂಬೈಗೆ ಕರೆದು ಮನವೊಲಿಸಿ ಶತಾಯಗತಾಯ ಸರ್ಕಾರವನ್ನು ಉಳಿಸಿಕೊಳ್ಳಬೇಕೆಂಬ ಪ್ರಯತ್ನದಲ್ಲಿ ಮಹಾ ವಿಕಾಸ್ ಅಘಾಡಿ ಸರ್ಕಾರವಿದೆ. ಇನ್ನೊಂದೆಡೆ 24 ಗಂಟೆಯೊಳಗೆ ಬಂದು ಉದ್ಧವ್ ಠಾಕ್ರೆಯವರನ್ನು ಭೇಟಿ ಮಾಡಿದರೆ ಮೈತ್ರಿಯಿಂದ ಹೊರಬರುತ್ತೇವೆ ಎಂಬ ಹೊಸ ಮನವೊಲಿಕೆಯ ಪ್ರಯತ್ನವನ್ನು ಮುಂದಿಟ್ಟಿದ್ದಾರೆ ಶಿವಸೇನೆ ನಾಯಕ ಸಂಜಯ್ ರಾವತ್.
ಇದನ್ನೂ ಓದಿ: ಮಹಾರಾಷ್ಟ್ರ ಸರ್ಕಾರ ಬಿಕ್ಕಟ್ಟು: ರಾಜ್ಯಪಾಲ ಕೊಶ್ಯಾರಿ, ಸ್ಪೀಕರ್ ಪಾತ್ರವೇನು?
ಇದಕ್ಕೆ ಸಮಾನಾಂತರವಾಗಿ, ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗದ ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಉಪಸಭಾಪತಿಗೆ ಶಿವಸೇನೆ ಮನವಿ ಮಾಡಿದೆ ಎನ್ನಲಾಗಿದೆ. ಬಂಡಾಯಗಾರರು, “ನಾವು ಪಕ್ಷದ ಅಧ್ಯಕ್ಷರ ಬದಲಾವಣೆಯನ್ನು ಬಯಸುವುದಿಲ್ಲ; ವಿವಿಧ ಕಾರಣಗಳಿಗಾಗಿ ಅಸ್ವಾಭಾವಿಕ ಅಘಾಡಿ ಮೈತ್ರಿಯಿಂದ ಹೊರಬಂದು ಬಿಜೆಪಿ ಜೊತೆ ಸೇರಲು ಇಚ್ಛಿಸುತ್ತೇವೆ ಎಂದಿದ್ದಾರೆ.
ಕೇಂದ್ರ ಜಾರಿ ಸಂಸ್ಥೆಗಳಿಂದ ಕಿರುಕುಳವನ್ನು ನಿಲ್ಲಿಸಬೇಕೆಂದು ನಾವು ಬಯಸುತ್ತೇವೆ.ಎನ್ ಸಿಪಿ ನಮ್ಮ ರಾಜಕೀಯ ಎದುರಾಳಿ. ಹೊಸ ಅಸೆಂಬ್ಲಿ ಚುನಾವಣೆಗಳು ನಡೆದಾಗ, ಎನ್‌ಸಿಪಿ ಮತ್ತು ಕಾಂಗ್ರೆಸ್ ನಮ್ಮ ಸಾಂಪ್ರದಾಯಿಕ ವೈರಿಗಳಾಗಿರುವುದರಿಂದ ಮುಂದಿನ ಚುನಾವಣೆಯಲ್ಲಿ ಶಿವಸೇನೆ ಹೆಚ್ಚಿನ ಮತಗಳನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಶಿವಸೇನೆಗೆ ಬಿಜೆಪಿ ಮಿತ್ರ ಪಕ್ಷವಾಗಿದ್ದಾಗ ಮತಗಳ ವರ್ಗಾವಣೆ ಸುಗಮವಾಗಿತ್ತು. ಬಿಜೆಪಿ ಒಂದು ದೊಡ್ಡ ಪಕ್ಷ, ಆದ್ದರಿಂದ ಅದರ ಜೊತೆ ಉತ್ತಮ ಸಂಬಂಧ ಇಟ್ಟುಕೊಳ್ಳುವುದು ಮುಖ್ಯ ಎನ್ನುತ್ತಾರೆ ಶಿವಸೇನೆ ಬಂಡಾಯ ಶಾಸಕರು.
ಇದನ್ನೂ ಓದಿ: 'ಮಹಾ' ಸಂಘರ್ಷ; ಏಕನಾಥ್ ಶಿಂಧೆ ಸೇರಿ 12 ರೆಬೆಲ್ ಶಾಸಕರ ಅನರ್ಹತೆಗೆ ಶಿವಸೇನೆ ಅರ್ಜಿ
ಈ ಬಗ್ಗೆ ಪ್ರತಿಕ್ರಿಯಿಸಿರುವ ಶಿವಸೇನೆ ನಾಯಕ ಸಂಜಯ್ ರಾವತ್, ಕೇಂದ್ರ ತನಿಖಾ ಸಂಸ್ಥೆಗಳಾದ ಸಿಬಿಐ, ಇಡಿ, ಆದಾಯ ತೆರಿಗೆ ಇಲಾಖೆಯ ದಾಳಿಗೆ ಹೆದರುವವರು ನಿಜವಾದ ಶಿವಸೇನೆಯ ಸೈನಿಕರಲ್ಲ ಎಂದಿದ್ದಾರೆ.
ಈ ಮಧ್ಯೆ ಶಿಂಧೆಯವರ ಬೆಂಬಲಿಗರ ಸಂಖ್ಯೆ ಹೆಚ್ಚುತ್ತಿದೆ. ಆರಂಭದಲ್ಲಿ ಗುಜರಾತ್ ನ ಸೂರತ್ ಗೆ ಹೋಗಿದ್ದ ಸಂದರ್ಭದಲ್ಲಿ 20 ಶಾಸಕರ ಬೆಂಬಲವಿತ್ತು. ನಂತರ ಅಲ್ಲಿಂದ ಗುವಾಹಟಿಗೆ ತೆರಳುವಾಗ ಬೆಂಬಲಿಗ ಶಾಸಕರ ಸಂಖ್ಯೆ 22ಕ್ಕೇರಿತು. ನಿನ್ನೆ ಮತ್ತೆ ನಾಲ್ವರು ಶಾಸಕರು ಸೇರ್ಪಡೆಯಾಗಿದ್ದಾರೆ. ಒಟ್ಟು 37 ಶಾಸಕರ ಬೆಂಬಲ ಅವರಿಗಿದೆ.