
ಸಿಎಂ ಉದ್ಧವ್ ಠಾಕ್ರೆ-ಎನ್ ಸಿಪಿ ನಾಯಕ ಶರದ್ ಪವಾರ್
ಮುಂಬೈ: ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ ಸರ್ಕಾರ ಅಸ್ತಿತ್ವದಲ್ಲಿರುವುದು ಇನ್ನು 2-3 ದಿನಗಳಷ್ಟೇ ಎಂದು ಕೇಂದ್ರ ಸಚಿವ ರಾವ್ ಸಾಹೇಬ್ ದನ್ವೆ ಹೇಳಿದ್ದಾರೆ.
ಎನ್ ಸಿಪಿ ಸಚಿವ ರಾಜೇಶ್ ಟೋಪೆ ಅವರಿದ್ದ ಕೃಷಿ ಇಲಾಖೆ ಕಾರ್ಯಕ್ರಮದಲ್ಲಿ ಮಾತನಾಡಿರುವ ಕೇಂದ್ರ ಸಚಿವರು ನಾವು ಅಂದರೆ ಬಿಜೆಪಿಯವರು ವಿಪಕ್ಷದಲ್ಲಿರುವುದು ಇನ್ನು 2-3 ದಿನಗಳಷ್ಟೇ, ಆದ್ದರಿಂದ ಎಂವಿಎ ಸರ್ಕಾರ ಬಾಕಿ ಇರುವ ಅಭಿವೃದ್ಧಿ ಕೆಲಸಗಳನ್ನು ಅತಿ ಶೀಘ್ರವಾಗಿ ಮುಕ್ತಾಯಗೊಳಿಸಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಅಸ್ಸಾಂ ಬಿಜೆಪಿ ಸಚಿವರಿಂದ ಗುವಾಹಟಿ ಹೋಟೆಲ್ ನಲ್ಲಿ ಶಿವಸೇನೆ ಬಂಡಾಯ ಶಾಸಕರ ಭೇಟಿ
ಸಮಯ ಹೆಚ್ಚು ಇಲ್ಲ. ಈ ಸರ್ಕಾರ ಅಸ್ತಿತ್ವದಲ್ಲಿರುವುದು ಇನ್ನು 2-3 ದಿನಗಳಷ್ಟೇ. ಈ ಬಂಡಾಯಕ್ಕೂ ಬಿಜೆಪಿಗೂ ಸಂಬಂಧವಿಲ್ಲ. ಅಭಿವೃದ್ಧಿಗಾಗಿ ಅನುದಾನವನ್ನು ಎನ್ ಸಿಪಿ ಹಾಗೂ ಕಾಂಗ್ರೆಸ್ ಹೆಚ್ಚು ಪಡೆಯುತ್ತಿದ್ದವು ಆದ್ದರಿಂದ ಶಿವಸೇನೆ ಬಂಡಾಯ ಶಾಸಕರು ಉದ್ಧವ್ ವಿರುದ್ಧ ಅಸಮಾಧಾನ ಹೊಂದಿದ್ದರು ಎಂದು ಕೇಂದ್ರ ಕಲ್ಲಿದ್ದಲು, ಗಣಿ, ರೈಲ್ವೆ ಖಾತೆ ರಾಜ್ಯ ಸಚಿವರು ತಿಳಿಸಿದ್ದಾರೆ.
ಶಿಂಧೆ ಬಣದ ಶಾಸಕರು ಬಿಜೆಪಿಯೊಂದಿಗೆ ವಿಲೀನಗೊಳ್ಳಲಿದ್ದಾರಾ? ಎಂಬ ಪ್ರಶ್ನೆಗೆ ಉತ್ತರಿಸಿರುವ ಕೇಂದ್ರ ಸಚಿವರು, ಈಗ ಅಂತಹ ಯಾವುದೇ ಪ್ರಸ್ತಾವನೆಗಳೂ ಇಲ್ಲ. ಯಾರಾದರೂ ಪಕ್ಷ ಸೇರುವುದಾದರೆ ಬಿಜೆಪಿ ಕೇಂದ್ರ ನಾಯಕರು ನಿರ್ಧಾರ ಕೈಗೊಳ್ಳಲಿದ್ದಾರೆ, ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳ್ಳುವ ಯಾವುದೇ ಸಾಧ್ಯತೆಯೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.