ಪಂಜಾಬ್ ಫಲಿತಾಂಶ: ಸೋಲುಂಡ ಕ್ಯಾಪ್ಟನ್, ಜನಾದೇಶ ಒಪ್ಪಿದ ಸಿಧು, ಆಪ್ ಅಪ್ಪಿದ ಪಂಜಾಬಿಗಳು!

ಪಂಚರಾಜ್ಯ ಚುನಾವಣೆಗಳ ಪೈಕಿ ಉತ್ತರ ಪ್ರದೇಶ ಹೊರತುಪಡಿಸಿ ಅತ್ಯಂತ ಕುತೂಹಲ ಕೆರಳಿಸಿದ್ದು ಪಂಜಾಬ್. ಒಂದೆಡೆ ರೈತರ ಹೋರಾಟ.. ಮತ್ತೊಂದೆಡೆ ಆಡಳಿತರೂಢ ಕಾಂಗ್ರೆಸ್ ನಲ್ಲಿದ್ದ ಕಿತ್ತಾಟ...
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಆಪ್ ಸಿಎಂ ಅಭ್ಯರ್ಥಿ ಭಗವಂತ್ ಮಾನ್
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಆಪ್ ಸಿಎಂ ಅಭ್ಯರ್ಥಿ ಭಗವಂತ್ ಮಾನ್
Updated on

ಚಂಡೀಗಢ: ಪಂಚರಾಜ್ಯ ಚುನಾವಣೆಗಳ ಪೈಕಿ ಉತ್ತರ ಪ್ರದೇಶ ಹೊರತುಪಡಿಸಿ ಅತ್ಯಂತ ಕುತೂಹಲ ಕೆರಳಿಸಿದ್ದು ಪಂಜಾಬ್. ಒಂದೆಡೆ ರೈತರ ಹೋರಾಟ.. ಮತ್ತೊಂದೆಡೆ ಆಡಳಿತರೂಢ ಕಾಂಗ್ರೆಸ್ ನಲ್ಲಿದ್ದ ಕಿತ್ತಾಟ… ಹೀಗಾಗಿ, ಎಲ್ಲ ರಾಜಕೀಯ ಪಂಡಿತರ ಲೆಕ್ಕಾಚಾರಗಳನ್ನು ಉಲ್ಟಾ ಮಾಡಿರುವ ಪಂಜಾಬಿಗಳು, ಆಪ್ ಪಕ್ಷಕ್ಕೆ ಮುದ್ರೆ ಒತ್ತಿದ್ದಾರೆ.

ಪಂಜಾಬ್ ನಲ್ಲಿ ಮತ್ತೊಮ್ಮೆ ಅಧಿಕಾರ ಹಿಡಿಯಬೇಕೆಂಬ ಕಾರಣದಿಂದ ಕಾಂಗ್ರೆಸ್ ಹಿರಿಯ ನಾಯಕರು, ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರನ್ನು ಮುಖ್ಯಮಂತ್ರಿ ಗದ್ದುಗೆಯಿಂದ ಇಳಿಸಿ, ಚನ್ನಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ್ದರು. ಆದರೆ, ರಾಜ್ಯ ಘಟಕದ ಅಧ್ಯಕ್ಷ ನವಜೋತ್ ಸಿಧು ಅವರ ಮೇಲಾಟ ಹಾಗೂ ಕಾಂಗ್ರೆಸ್ ನ ಲೆಕ್ಕಾಚಾರದ ಫೇಲ್ಯೂವರ್ ನಿಂದಾಗಿ ಕಾಂಗ್ರೆಸ್ ಪಕ್ಷವನ್ನು ಸಿಂಗ್ ಗಳು ದೂರ ಇಟ್ಟಿದ್ದಾರೆ.

ಇನ್ನೊಂದೆಡೆ ರಾಷ್ಟ್ರೀಯ ನೀತಿ ಹಾಗೂ ಕೃಷಿ ಕಾಯ್ದೆಯಿಂದ ಮಂಕಾಗಿದ್ದ ಬಿಜೆಪಿ ನೆಲದಿಂದ ಮೇಲೇಳಲೆ ಇಲ್ಲ. ಈ ಎಲ್ಲದರ ನಡುವೆ ಹೊಸ ಹುಮ್ಮಸ್ಸು… ಹುರುಪಿನೊಂದಿಗೆ ಕಣಕ್ಕಿಳಿದಿದ್ದ ಅರವಿಂದ್ ಕೇಜ್ರಿವಾಲ್ ಅವರ ಮ್ಯಾಜಿಕ್ ನಿಂದಾಗಿ ಆಮ್ ಆದ್ಮಿ ಪಾರ್ಟಿ ರಾಜ್ಯಪಾಲರ ನಿವಾಸದ ಕದ ತಟ್ಟುವಂತಾಗಿದೆ. ಇದಕ್ಕೆಲ್ಲ ಕಾರಣ ಚುನಾವಣೆಗೂ ಪೂರ್ವ ಭಗವಂತ್ ಮಾನ್ ಅವರನ್ನು ಮುಖ್ಯಮಂತ್ರಿ ಹುದ್ದೆಯ ಅಭ್ಯರ್ಥಿ ಎಂದು ಘೋಷಿಸಿದ್ದು ಆಪ್ ಗೆ ಪ್ಲಸ್ ಪಾಯಿಂಟ್ ಆಗಿದೆ ಎಂಬುದು ರಾಜಕೀಯ ಪಂಡಿತರ ವಿಶ್ಲೇಷಣೆ.

ಪಂಜಾಬ್ ನಲ್ಲಿ ಒಟ್ಟು 117 ಕ್ಷೇತ್ರಗಳಿದ್ದು, ಈ ಪೈಕಿ 59 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಅದರಂತೆ ಮಧ್ಯಾಹ್ನ 2 ಗಂಟೆ ಸುಮಾರಿಗೆ ಪಂಜಾಬ್ ಮತ ಎಣಿಕೆಯ ಟ್ರೆಂಡಿಂಗ್ ನೋಡಿದ್ರೆ ಆಮ್ ಆದ್ಮಿ ಪಾರ್ಟಿ 84 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, 8ರಲ್ಲಿ ಗೆಲುವನ್ನು ಸಾಧಿಸಿದೆ. ಇನ್ನೊಂದೆಡೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷ 17ರಲ್ಲಿ ಮುನ್ನಡೆ ಸಾಧಿಸಿದ್ದು, 1ರಲ್ಲಿ ಗೆಲುವು ಕಂಡಿದೆ. ಮತ್ತೊಂದೆಡೆ ರಾಷ್ಟ್ರೀಯ ಪಕ್ಷವಾಗಿರುವ ಬಿಜೆಪಿ 1 ಕ್ಷೇತ್ರದಲ್ಲಿ ಮಾತ್ರ ಮುನ್ನಡೆಯಲ್ಲಿ ಇದೆ. ಉಳಿದಂತೆ ಶಿರೋಮಣಿ ಅಕಾಲಿದಳ 3 ಹಾಗೂ ಪಕ್ಷೇತರರು 2 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.

ಸದ್ಯ ಚಂಡೀಗಢದಲ್ಲಿ ಎಎಪಿ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸುತ್ತಿದ್ದಾರೆ. ಈ ಮಧ್ಯೆ, ಕ್ಯಾಪ್ಟನ್ ಅಮರಿಂದರ್ ಸಿಂಗ್ ಪಟಿಯಾಲ ಅರ್ಬನ್ ನಿಂದ ಸೋತಿದ್ದಾರೆ. ಬಳಿಕ ಜನರ ನಿರ್ಧಾರವನ್ನು ನಾನು ವಿನಮ್ರತೆಯಿಂದ ಸ್ವೀಕರಿಸುತ್ತೇನೆ ಎಂದು ಕ್ಯಾಪ್ಟನ್ ಅಮರಿಂದರ್ ಸಿಂಗ್ ಹೇಳಿದ್ದಾರೆ.

ಪಂಜಾಬಿಗಳು ಕೋಮು ಮತ್ತು ಜಾತಿ ರೇಖೆಗಳನ್ನು ಮೀರಿ ಮತ ಚಲಾಯಿಸುವ ಮೂಲಕ ಪಂಜಾಬಿತನ ನಿಜವಾದ ಮನೋಭಾವವನ್ನು ತೋರಿಸಿದ್ದಾರೆ ಎಂದು ಹೇಳಿದ್ದಾರೆ.

ರಾಜಕೀಯ ಮೇಲಾಟ ನಡೆಸಿದ್ದ ನವಜೋತ್ ಸಿಧು ಸೋಲಿನ ಬಗ್ಗೆ ಪ್ರತಿಕ್ರಿಯಿಸಿದ್ದು, ಜನರ ಧ್ವನಿಯೇ ದೇವರ ಧ್ವನಿ ಪಂಜಾಬ್ ಜನತೆಯ ಆದೇಶವನ್ನು ವಿನಮ್ರತೆಯಿಂದ ಸ್ವೀಕರಿಸುತ್ತೇನೆ ಎಂದು ಸಿಧು ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com