ಉತ್ತರ ಪ್ರದೇಶ: ಘಟಾನುಘಟಿಗಳ ಶತಪ್ರಯತ್ನದ ಹೊರತಾಗಿಯೂ ಅಖಿಲೇಶ್ ಸೈಕಲ್ 'ಪಂಕ್ಚರ್' ಆಗಿದ್ದು ಹೇಗೆ?
ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ತಮ್ಮ ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ರಾಜಕೀಯ ಜೀವನದ ವಿವಿದ ಮಜಲುಗಳನ್ನು ದಾಟಿ ಅಂತಿಮವಾಗಿ ಪ್ರಬದ್ಧ ರಾಜಕಾರಣಿಯಾಗಿದ್ದಾರೆ.
Published: 11th March 2022 11:29 AM | Last Updated: 11th March 2022 04:12 PM | A+A A-

ಅಖಿಲೇಶ್ ಯಾದವ್
ಲಕ್ನೋ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಆಡಳಿತಾರೂಢ ಬಿಜೆಪಿ ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸತತ ಎರಡನೇ ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಆಯ್ಕೆಯಾಗುವ ಮೂಲಕವೂ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.
ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ತಮ್ಮ ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ರಾಜಕೀಯ ಜೀವನದ ವಿವಿದ ಮಜಲುಗಳನ್ನು ದಾಟಿ ಅಂತಿಮವಾಗಿ ಪ್ರಬದ್ಧ ರಾಜಕಾರಣಿಯಾಗಿದ್ದಾರೆ.
2000ನೇ ಇಸವಿಯಲ್ಲಿ ತಮ್ಮ 27ನೇ ವಯಸ್ಸಿಗೆ ಸಂಸತ್ ಪ್ರವೇಶಿಸಿದ ಅತ್ಯಂತ ಕಿರಿಯ ಸಂಸದರಾಗಿದ್ದ ಅಖಿಲೇಶ್ ಯಾದವ್ 2012 ರಲ್ಲಿ 32ನೇ ವಯಸ್ಸಿಗೆ ಸಿಎಂ ಪಟ್ಟ ಅಲಂಕರಿಸಿದ್ದ ಅತಿ ಕಿರಿಯರಾಗಿದ್ದರು. ಹಲವು ಸೋಲುಗಳ ನಡುವೆ ಅಖಿಲೇಶ್ ಸದ್ಯ ಒಂದು ಹಂತ ತಲುಪಿದ್ದಾರೆ.
47ನೇ ವಯಸ್ಸಿನಲ್ಲಿ ಅಖಿಲೇಶ್ಯಾದವ್ ತಮ್ಮ ಜೀವನದ ಅತ್ಯಂತ ನಿರ್ಣಾಯಕ ಚುನಾವಣೆ ಎದುರಿಸಿದ್ದಾರೆ. ತಮ್ಮ ತಂದೆಯ ನೆರಳಿನಿಂದ ಹೊರಬಂದು ಉತ್ತರ ಪ್ರದೇಶದಲ್ಲಿ ಸ್ವತಂತ್ರ್ಯವಾದ ಇಮೇಜ್ ಗಳಿಸಿಕೊಂಡು ರಾಜಕೀಯವಾಗಿ ತಮ್ಮನ್ನು ಪ್ರಬಲಗೊಳಿಸಿಕೊಳ್ಳುತ್ತಿದ್ದಾರೆ.
2022ರ ವಿಧಾನಸಭೆ ಚುನಾವಣೆ ಅಖಿಲೇಶ್ ಅವರಿಗೆ ಸಿಎಂ ಹುದ್ದೆ ದೊರಕಿಸಿಕೊಡದಿರಬಹುದು,ಆದರೆ ಕಠಿಣ ಪರೀಕ್ಷೆಯೊಂದರಲ್ಲಿ ಹೋರಾಡಿದ್ದಾರೆ. ಸಣ್ಣ ಸಣ್ಣ ಜಾತಿ ಆಧಾರಿತ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವ ಮೂಲಕ ಪ್ರಬಲ ಬಿಜೆಪಿಯನ್ನು ತನ್ನದೇ ತಂತ್ರಗಾರಿಕೆ ಮೂಲಕ ಸೋಲಿಸುವ ರಾಜಕೀಯ ಪ್ರಬುದ್ಧತೆ ತೋರಿದ್ದಾರೆ.
ಇದನ್ನೂ ಓದಿ: ಉತ್ತರ ಪ್ರದೇಶ ಜನ ಜಾತಿ, ಧರ್ಮ ರಾಜಕೀಯದ ಸಮಾಧಿ ಮಾಡಿದ್ದಾರೆ: ಯೋಗಿ ವಿಜಯೋತ್ಸವ ಭಾಷಣ
ಕುಟುಂಬ ರಾಜಕೀಯದ ಪಕ್ಷ ಎಂಬ ಟ್ಯಾಗ್ ಕಿತ್ತೊಗೆಯಲು ಮುಂದಾಗಿರುವ ಅಖಿಲೇಶ್ ತಮ್ಮ ಕುಟುಂಬ ಸದಸ್ಯರಿಗೆ ಟಿಕೆಟ್ ನಿರಾಕರಿಸಿದರು. ತಮ್ಮ ಪಕ್ಷಕ್ಕಿರುವ ಗೂಂಡಾಗಿರಿ ಟ್ಯಾಗ್ ತೊಡೆದು ಹಾಕಲು ಪಕ್ಷದ ಕಾರ್ಯಕರ್ತರನ್ನು ಶಿಸ್ತುಬದ್ಧಗೊಳಿಸಲು ಪ್ರಯತ್ನಿಸಿದರು. ರ್ಯಾಲಿಗಳಲ್ಲಿ ಬೃಹತ್ ಜನ ಸಮುದಾಯವನ್ನು ಸೆಳೆದು ಮತಗಳಾಗಿ ಪರಿವರ್ತಿಸಿದರು.
ಪಕ್ಷದಲ್ಲಿನ ಹಿರಿಯರನ್ನು ಭೇಟಿ ಮಾಡಿ ಚುನಾವಣೆಗಾಗಿ ಕೆಲಸ ಮಾಡುವಂತೆ ಪ್ರೇರೇಪಿಸಿದ ಅಖಿಲೇಶ್ ತಮ್ಮ ಚಿಕ್ಕಪ್ಪ ಶಿವಪಾಲ್ ಯಾದವ್ ಮನವೊಲಿಸಿ ಎಸ್ ಪಿ ಟಿಕೆಟ್ ನಿಂದ ಸ್ಪರ್ಧಿಸುವಂತೆ ಮಾಡಿದರು. 2017 ರ ವಿಧಾನಸಬೆ ಮತ್ತು 2019 ರ ಲೋಕಸಭೆ ಚುನಾವಣೆಗಳ ಹೀನಾಯ ಸೋಲಿನ ನಂತರ 2022 ರ ಚುನಾವಣೆಗೆ ಹೊಸ ಮಾರ್ಗ ಸೂಚಿ ರಚಿಸಿದ್ದರು.
ದೇಶದ ಅತ್ಯಂತ ದೊಡ್ಡ ರಾಜ್ಯವಾಗಿರುವ ಉತ್ತರ ಪ್ರದೇಶದ ಉದ್ದಗಲಕ್ಕೂ ಓಡಾಡಿದ್ದ ಅಖಿಲೇಶ್ ಯಾದವ್, ಮತದಾರರನ್ನು ತಲುಪಲು ಹಾಗೂ ಅವರ ಬೆಂಬಲ ಪಡೆಯಲು ಹರಸಾಹಸ ಪಟ್ಟಿದ್ದರು. ಕಳೆದ ಸಲ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದ್ದ ಅವರು, ಈ ಬಾರಿ ಮೈತ್ರಿ ಸಾಹಸಕ್ಕೆ ಮುಂದಾಗಿರಲಿಲ್ಲ.
ಬಿಜೆಪಿ ವಿರೋಧಿ ಮತಗಳನ್ನು ಕ್ರೋಡೀಕರಿಸುವಲ್ಲಿ ಸಮಾಜವಾದಿ ಪಕ್ಷ ಸಫಲವಾಗಿದ್ದರೂ, ಬಿಜೆಪಿಗೆ ದೊರೆತ ಜನಾದೇಶದ ಸಮೀಪ ತಲುಪಲೂ ಸಾಧ್ಯವಾಗಿಲ್ಲ. ಬಿಜೆಪಿ ಶೇ 41ರಷ್ಟು ಮತಗಳನ್ನು ಪಡೆದಿದ್ದರೆ, ಎಸ್‌ಪಿ ಶೇ 32ರಷ್ಟು ಮತಗಳನ್ನು ಗಳಿಸಿದೆ.