ಯುಪಿ ಆಸ್ಪತ್ರೆಯಲ್ಲಿ ಅಮಾನುಷ ಘಟನೆ: ಗಂಭೀರವಾಗಿ ಗಾಯಗೊಂಡ ವ್ಯಕ್ತಿ, ಸೋರುತ್ತಿದ್ದ ರಕ್ತ ನೆಕ್ಕಿದ ನಾಯಿ, ವಿಡಿಯೋ!

ತುರ್ತು ಚಿಕಿತ್ಸಾ ವಿಭಾಗದಲ್ಲಿ ತೀವ್ರವಾಗಿ ಗಾಯಗೊಂಡು ನೆಲದ ಮೇಲೆ ಬಿದ್ದಿದ್ದ ವ್ಯಕ್ತಿಯ ತಲೆಯಿಂದ ಹರಿಯುತ್ತಿದ್ದ ರಕ್ತವನ್ನು ನಾಯಿ ನೆಕ್ಕುತ್ತಿರುವುದನ್ನು ತೋರಿಸುವ ವಿಡಿಯೋದಲ್ಲಿ ಆರೋಗ್ಯ ಸೇವೆಯಲ್ಲಿ ಸುಧಾರಣೆಯಾಗಿದೆ ಎಂಬ ಉತ್ತರಪ್ರದೇಶ ಸರ್ಕಾರದ ಹೇಳಿಕೆಗಳು ನೆಲಕಚ್ಚುವಂತೆ ಮಾಡಿದೆ.
ಪ್ರತ್ಯಕ್ಷ ದೃಶ್ಯ
ಪ್ರತ್ಯಕ್ಷ ದೃಶ್ಯ

ಲಖನೌ: ತುರ್ತು ಚಿಕಿತ್ಸಾ ವಿಭಾಗದಲ್ಲಿ ತೀವ್ರವಾಗಿ ಗಾಯಗೊಂಡು ನೆಲದ ಮೇಲೆ ಬಿದ್ದಿದ್ದ ವ್ಯಕ್ತಿಯ ತಲೆಯಿಂದ ಹರಿಯುತ್ತಿದ್ದ ರಕ್ತವನ್ನು ನಾಯಿ ನೆಕ್ಕುತ್ತಿರುವುದನ್ನು ತೋರಿಸುವ ವಿಡಿಯೋದಲ್ಲಿ ಆರೋಗ್ಯ ಸೇವೆಯಲ್ಲಿ ಸುಧಾರಣೆಯಾಗಿದೆ ಎಂಬ ಉತ್ತರಪ್ರದೇಶ ಸರ್ಕಾರದ ಹೇಳಿಕೆಗಳು ನೆಲಕಚ್ಚುವಂತೆ ಮಾಡಿದೆ. 

ಕುಶಿನಗರ ಜಿಲ್ಲಾ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು ಅಲ್ಲಿ ತೆಗೆದಿದ್ದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ನೋಡಿಕೊಳ್ಳಲು ಯಾರೂ ಇಲ್ಲದ ಪ್ರಜ್ಞಾಹೀನ ಸ್ಥಿತಿಯಲ್ಲಿ ಜಿಲ್ಲಾ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ನೆಲದ ಮೇಲೆ ವ್ಯಕ್ತಿಯೊಬ್ಬರು ಮಲಗಿರುವುದನ್ನು ಕಾಣಬಹುದಾಗಿದೆ.

ವಿಡಿಯೋ ವೈರಲ್ ಆದ ನಂತರ ಎಚ್ಚೇತ್ತ ಜಿಲ್ಲಾ ಅಧಿಕಾರಿಗಳು, ರೋಗಿಯನ್ನು ದಾಖಲಿಸಿಕೊಳ್ಳಲು ವಿಫಲರಾದ ಇಬ್ಬರು ವಾರ್ಡ್ ಬಾಯ್‌ಗಳು ಮತ್ತು ಇಬ್ಬರು ಸಫಾಯಿ ಕರ್ಮಚಾರಿಗಳು ಸೇರಿದಂತೆ ಆರು ಆರೋಗ್ಯ ಕಾರ್ಯಕರ್ತರನ್ನು ವಜಾಗೊಳಿಸಿದ್ದಾರೆ. ಕುಶಿನಗರ ಜಿಲ್ಲಾ ಮ್ಯಾಜಿಸ್ಟ್ರೇಟ್ ಎಸ್ ರಾಜಲಿಂಗಂ ಅವರು ಇಂತಹ ಘಟನೆಗೆ ಕಾರಣರಾದ ಆರೋಗ್ಯ ಕಾರ್ಯಕರ್ತರನ್ನು ವಜಾಗೊಳಿಸಲಾಗಿದೆ. ಅಲ್ಲದೆ ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಏತನ್ಮಧ್ಯೆ, ರೋಗಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಗೋರಖ್‌ಪುರದ ಬಿಆರ್‌ಡಿ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ ಎಂದು ಹೇಳಿದರು. ಈ ಘಟನೆಯು ಆರೋಗ್ಯ ಇಲಾಖೆಯ ಘನತೆಗೆ ಕಳಂಕ ತಂದಿದೆ. ಈ ಪ್ರಕರಣದಲ್ಲಿ ತುರ್ತು ವೈದ್ಯಕೀಯ ಅಧಿಕಾರಿ(ಇಎಂಒ) ವಿರುದ್ಧದ ವರದಿಯನ್ನು ಲಖನೌಗೆ ಕಳುಹಿಸಲಾಗಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಹೇಳಿದರು.

'ಇದಲ್ಲದೆ, ಉಪ ಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಅವರು ಸಮಸ್ಯೆಯ ಬಗ್ಗೆ ಗಮನ ಹರಿಸಿರುವುದರಿಂದ ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧೀಕ್ಷಕರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು. ರೋಗಿಯೊಂದಿಗೆ ಇರಲು ವಿಫಲರಾದ ವೈದ್ಯರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಕುಶಿನಗರ ಸಿಎಂಒ ಸತೇಂದ್ರ ಕುಮಾರ್ ವರ್ಮಾ ಹೇಳಿದ್ದಾರೆ.

ಆಸ್ಪತ್ರೆ ದಾಖಲೆಗಳ ಪ್ರಕಾರ, ಗಾಯಗೊಂಡ ವ್ಯಕ್ತಿಯನ್ನು ಕುಶಿನಗರ ಜಿಲ್ಲೆಯ ಜಥಾನ್ ಬಜಾರ್‌ನ 24 ವರ್ಷದ ಬಿಟ್ಟು ಎಂದು ಗುರುತಿಸಲಾಗಿದೆ. ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಅವರನ್ನು ಆಂಬ್ಯುಲೆನ್ಸ್‌ ಮೂಲಕ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿತ್ತು.

ಅಪಘಾತಕ್ಕೀಡಾದವರಿಗೆ ತಕ್ಷಣದ ಚಿಕಿತ್ಸೆ ನೀಡಲು ವಿಫಲವಾದ ಹಿನ್ನೆಲೆಯಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್, ಸ್ಟಾಫ್ ನರ್ಸ್ ಸರ್ವಿಸ್ ಪ್ರೊವೈಡರ್ ಸುನೀಲ್ ಕುಶ್ವಾಹ, ಅಡ್ಹಾಕ್ ಎನ್‌ಎಚ್‌ಎಂ ರಾಮಶಿಶ್ ಯಾದವ್, ವಾರ್ಡ್ ಬಾಯ್ ಸೇವಾ ಪೂರೈಕೆದಾರ ವಿಜಯ್ ಬಹದ್ದೂರ್ ಕುಶ್ವಾಹ ಮತ್ತು ಮನ್‌ಹರನ್ ಶುಕ್ಲಾ, ಸ್ವೀಪರ್‌ಗಳಾದ ಅರ್ಜುನ್ ಕುಶ್ವಾಹ ಮತ್ತು ಮುಖೇಶ್ ಕುಮಾರ್ ವಜಾ ಮಾಡಿದ್ದಾರೆ.

ಇದೇ ಅಲ್ಲದೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರು, ಲಖನೌದ ಆರೋಗ್ಯ ಇಲಾಖೆಗೆ ಇತರ ಇಬ್ಬರು ವೈದ್ಯರೊಂದಿಗೆ ತುರ್ತು ವೈದ್ಯಕೀಯ ಅಧಿಕಾರಿ ವಿರುದ್ಧ ಪ್ರತಿಕೂಲ ವರದಿಯನ್ನು ಕಳುಹಿಸಿದ್ದಾರೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com