ಇದುವರೆಗೂ ಜಾಕ್ವೆಲಿನ್ ಫರ್ನಾಂಡೀಸ್ ಬಂಧಿಸಿಲ್ಲ ಏಕೆ? ಒಬ್ಬೊಬ್ಬರಿಗೆ ಒಂದೊಂದು ನೀತಿಯೇ? ಇ.ಡಿ ಗೆ ಕೋರ್ಟ್ ತಪರಾಕಿ
ನವದೆಹಲಿ: ಜಾರಿ ನಿರ್ದೇಶನಾಲಯ ‘ಪಿಕ್ ಅಂಡ್ ಚೂಸ್’ ನೀತಿಯನ್ನು ಅಳವಡಿಸಿಕೊಂಡಿದೆ ಎಂದು ದೆಹಲಿ ನ್ಯಾಯಾಲಯವು ಶುಕ್ರವಾರ ತರಾಟೆಗೆ ತೆಗೆದುಕೊಂಡಿದೆ.
200 ಕೋಟಿ ರೂ. ಮನಿ ಲಾಂಡರಿಂಗ್ ಪ್ರಕರಣದಲ್ಲಿ ಆರೋಪಿ ಸುಕೇಶ್ ಚಂದ್ರಶೇಖರ್ ಅವರ ವಿರುದ್ಧ ಲುಕ್ ಔಟ್ ಸುತ್ತೋಲೆ ಹೊರಡಿಸಿದ್ದರೂ ಸಂಸ್ಥೆಯು ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರನ್ನು ಏಕೆ ಬಂಧಿಸಲಿಲ್ಲ ಎಂದು ಪ್ರಶ್ನಿಸಿದೆ.
ವಂಚಕ ಸುಕೇಶ್ ಚಂದ್ರಶೇಖರ್ ಜತೆಗೆ ನಂಟು ಹೊಂದಿದ ಆರೋಪ ಹೊತ್ತಿರುವ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಜಾಮೀನಿಗೆ ವಿರೋಧ ವ್ಯಕ್ತಪಡಿಸಿದ ಜಾರಿ ನಿರ್ದೇಶನಾಲಯವನ್ನು ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಮೂರು ದಿನದ ಅಂತರದಲ್ಲಿ ಎರಡನೇ ಬಾರಿಗೆ ಕೇಂದ್ರೀಯ ತನಿಖಾ ಸಂಸ್ಥೆ ಕಾರ್ಯವೈಖರಿಗೆ ಕೋರ್ಟ್ ಅಸಮಾಧಾನ ಹೊರ ಹಾಕಿದೆ.
ನೋಟಿಸ್ ನೀಡಿದ್ದರೂ ನಟಿಯನ್ನು ಏಕೆ ಬಂಧಿಸಲಿಲ್ಲ? ಒಬ್ಬೊಬ್ಬರಿಗೆ ಒಂದೊಂದು ನೀತಿ ಏಕೆ" ಎಂದು ನ್ಯಾಯಾಧೀಶರು ಪ್ರಶ್ನೆ ಮಾಡಿದ್ದಾರೆ. ನಟಿಯ ಜಾಮೀನು ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ನ್ಯಾಯಾಲಯ, ಶುಕ್ರವಾರ ತೀರ್ಪು ನೀಡುವ ಸಾಧ್ಯತೆ ಇದೆ.
200 ಕೋಟಿ ರೂ. ಸುಲಿಗೆ ಪ್ರಕರಣದ ಆರೋಪಿ ಸುಕೇಶ್ ಚಂದ್ರಶೇಖರ್, ನಟಿ ಜಾಕ್ವೆಲಿನ್ ಅವರಿಗೆ 7.14 ಕೋಟಿ ರೂ. ಮೌಲ್ಯದ ಉಡುಗೊರೆ ನೀಡಿದ್ದಾನೆ ಎಂದು ತನಿಖಾ ಸಂಸ್ಥೆ ಆರೋಪಿಸಿದೆ. "ಕೋಟ್ಯಂತರ ಅವ್ಯವಹಾರದ ತನಿಖೆಗೆ ನಟಿ ಸಹಕಾರ ನೀಡುತ್ತಿಲ್ಲ. ದೇಶ ಬಿಟ್ಟು ಓಡಿ ಹೋಗುವ ಪ್ರಯತ್ನ ಮಾಡಿದ್ದಾರೆ. ಹೀಗಾಗಿ ಜಾಮೀನು ಮಂಜೂರು ಮಾಡಬಾರದು" ಎಂದು ಜಾರಿ ನಿರ್ದೇಶನಾಲಯದ ಪರ ವಕೀಲರು ವಾದಿಸಿದರು.
ಎಲ್‌ಒಸಿ ನೀಡಿದ್ದರೂ ನೀವು (ಇಡಿ) ತನಿಖೆಯ ಸಮಯದಲ್ಲಿ ಜಾಕ್ವೆಲಿನ್ ಅವರನ್ನು ಏಕೆ ಬಂಧಿಸಿಲ್ಲ? ಇತರ ಆರೋಪಿಗಳು ಜೈಲಿನಲ್ಲಿದ್ದಾರೆ. ‘ಪಿಕ್ ಅಂಡ್ ಚೂಸ್’ ನೀತಿಯನ್ನು ಏಕೆ ಅಳವಡಿಸಿಕೊಳ್ಳಬೇಕು, ”ಎಂದು ನ್ಯಾಯಾಲಯವು ತನಿಖಾ ಸಂಸ್ಥೆಯನ್ನು ಕೇಳಿದೆ.
ನಟಿ ದೇಶ ತೊರೆಯುವುದನ್ನು ತಡೆಯಲು ವಿಮಾನ ನಿಲ್ದಾಣಗಳಲ್ಲಿ ಲುಕ್‌ಔಟ್ ಸುತ್ತೋಲೆ (ಎಲ್‌ಒಸಿ) ಹೊರಡಿಸಲಾಗಿದೆ ಎಂದು ಸಂಸ್ಥೆ ನ್ಯಾಯಾಲಯಕ್ಕೆ ತಿಳಿಸಿದೆ. ಈಗಾಗಲೇ ತನಿಖೆ ಪೂರ್ಣಗೊಂಡು ಚಾರ್ಜ್ ಶೀಟ್ ಸಲ್ಲಿಕೆಯಾಗಿರುವುದರಿಂದ ಆಕೆಯ ಕಸ್ಟಡಿ ಅಗತ್ಯವಿಲ್ಲ ಎಂದು 50,000 ವೈಯಕ್ತಿಕ ಬಾಂಡ್ ಮೇಲೆ ನ್ಯಾಯಾಲಯವು ಸೆಪ್ಟೆಂಬರ್ 26 ರಂದು ಮಧ್ಯಂತರ ಜಾಮೀನು ನೀಡಿತ್ತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ