51 ಮಾಜಿ ಮತ್ತು ಹಾಲಿ ಸಂಸದರು ಪಿಎಂಎಲ್‌ಎ ಅಡಿ ವಿಚಾರಣೆ ಎದುರಿಸುತ್ತಿದ್ದಾರೆ: ಸುಪ್ರೀಂಗೆ ಮಾಹಿತಿ
ಜಾರಿ ನಿರ್ದೇಶನಾಲಯ(ಇಡಿ) 51 ಮಾಜಿ ಮತ್ತು ಹಾಲಿ ಸಂಸದರ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‌ಎ)ಯಡಿ ಪ್ರಕರಣ ದಾಖಲಿಸಿದ್ದು, ವಿಚಾರಣೆ ಎದುರಿಸುತ್ತಿದ್ದಾರೆ ಎಂದು ಸುಪ್ರೀಂ ಕೋರ್ಟ್‌ಗೆ ಮಾಹಿತಿ...
Published: 15th November 2022 07:36 PM | Last Updated: 15th November 2022 08:30 PM | A+A A-

ಸುಪ್ರೀಂ ಕೋರ್ಟ್
ನವದೆಹಲಿ: ಜಾರಿ ನಿರ್ದೇಶನಾಲಯ(ಇಡಿ) 51 ಮಾಜಿ ಮತ್ತು ಹಾಲಿ ಸಂಸದರ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‌ಎ)ಯಡಿ ಪ್ರಕರಣ ದಾಖಲಿಸಿದ್ದು, ವಿಚಾರಣೆ ಎದುರಿಸುತ್ತಿದ್ದಾರೆ ಎಂದು ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಲಾಗಿದೆ.
ಆದರೆ, ಈ 51 ಸಂಸದರಲ್ಲಿ ಎಷ್ಟು ಮಂದಿ ಹಾಲಿ ಮತ್ತು ಎಷ್ಟು ಮಾಜಿ ಸಂಸದರು(ಎಂಪಿಗಳು) ಇದ್ದಾರೆ ಎಂಬುದನ್ನು ವರದಿಯಲ್ಲಿ ಉಲ್ಲೇಖಿಸಿಲ್ಲ.
2002ರ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿಯಲ್ಲಿ 71 ಶಾಸಕರು(ಎಂಎಲ್‌ಎ) ಹಾಗೂ ವಿಧಾನ ಪರಿಷತ್ ಸದಸ್ಯರು(ಎಂಎಲ್‌ಸಿ) ಆರೋಪಿಗಳಾಗಿದ್ದಾರೆ ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ವರದಿಯಲ್ಲಿ ತಿಳಿಸಲಾಗಿದೆ.
ಸಂಸದರು ಮತ್ತು ಶಾಸಕರ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳ ತ್ವರಿತ ವಿಲೇವಾರಿ ಅರ್ಜಿಯಲ್ಲಿ ಅಮಿಕಸ್ ಕ್ಯೂರಿಯಾಗಿ ನೇಮಕಗೊಂಡಿರುವ ಹಿರಿಯ ವಕೀಲ ವಿಜಯ್ ಹನ್ಸಾರಿಯಾ ಅವರು ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ.
ಹಾಲಿ ಮತ್ತು ಮಾಜಿಗಳು ಸೇರಿದಂತೆ ಒಟ್ಟು 121 ಸಂಸದರು ಮತ್ತು ಶಾಸಕರ ವಿರುದ್ಧ ಕೇಂದ್ರೀಯ ತನಿಖಾ ಸಂಸ್ಥೆ(ಸಿಬಿಐ) ದಾಖಲಿಸಿದ ಪ್ರಕರಣಗಳು ಬಾಕಿ ಉಳಿದಿವೆ ಎಂದು ವರದಿ ತಿಳಿಸಿದೆ.