ನವದೆಹಲಿ: 2023 ರ ಜಿ-20 ಶೃಂಗಸಭೆಯ ಅಧ್ಯಕ್ಷತೆಯನ್ನು ಭಾರತಕ್ಕೆ ಹಸ್ತಾಂತರಿಸಲಾಗಿದ್ದು, ಕಾಂಗ್ರೆಸ್ ಈ ವಿಷಯದಲ್ಲೂ ಕುಹಕವಾಡಿದೆ.
ಜಿ-20ಯ ಮುಂದಿನ ಶೃಂಗಸಭೆಗೆ ಭಾರತ ಆತಿಥ್ಯ ವಹಿಸುತ್ತಿರುವ ವಿಷಯವನ್ನಿಟ್ಟುಕೊಂಡು ಪ್ರಧಾನಿ ಮೋದಿ ಅವರನ್ನು ಲೇವಡಿ ಮಾಡಿರುವ ಕಾಂಗ್ರೆಸ್, 2023 ರ ಜಿ-20 ಶೃಂಗಸಭೆಯನ್ನು ಜಗತ್ತಿನ ಶ್ರೇಷ್ಠ ಈವೆಂಟ್ ಮ್ಯಾನೇಜರ್ (ಪ್ರಧಾನಿ ಮೋದಿ) ಲೋಕಸಭಾ ಚುನಾವಣೆಗೆ ಯಶಸ್ವಿಯಾಗಿ ಬಳಸಿಕೊಳ್ಳಲಿದ್ದಾರೆ ಎಂದು ಹೇಳಿದೆ.
ಇಂಡೋನೇಷ್ಯಾದ ಬಾಲಿಯಲ್ಲಿ ಮುಕ್ತಾಯಗೊಂಡ ಪ್ರಸಕ್ತ ಸಾಲಿನ ಜಿ-20 ಶೃಂಗಸಭೆಯಲ್ಲಿ ಮುಂದಿನ ಅಧ್ಯಕ್ಷತೆಯನ್ನು ಭಾರತಕ್ಕೆ ಹಸ್ತಾಂತರಿಸಲಾಯಿತು.
ಜಿ-20ಯ ಅಧ್ಯಕ್ಷತೆಯನ್ನು ಭಾರತ ಡಿ.1 ರಿಂದ ವಹಿಸಿಕೊಳ್ಳಲಿದೆ. ಮುಂದಿನ ಜಿ-20 ನಾಯಕರ ಶೃಂಗಸಭೆ 2023 ರ ಸೆ.9-10 ರಂದು ನವದೆಹಲಿಯಲ್ಲಿ ನಡೆಯಲಿದೆ.
ಸಂವಹನ ವಿಭಾಗದ ಉಸ್ತುವಾರಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದು, ಜಿ-20 ಎಂಬುದು 19 ಪ್ರಮುಖ ಆರ್ಥಿಕತೆಗಳ ಒಕ್ಕೂಟವಾಗಿದ್ದು, 1999 ರಲ್ಲಿ ಯುರೋಪಿಯನ್ ಯೂನಿಯನ್ ನ್ನು ಸ್ಥಾಪಿಸಲಾಯಿತು. 2008 ರಿಂದ ಶೃಂಗಸಭೆಯನ್ನು ಸರತಿಯ ಪ್ರಕಾರ ಪ್ರತಿ ಸದಸ್ಯ ರಾಷ್ಟ್ರಗಳಲ್ಲಿ ನಡೆಸಲಾಗುತ್ತಿದೆ. ಪ್ರತಿಯೊಂದು ರಾಷ್ಟ್ರಕ್ಕೂ ಈ ಅವಕಾಶ ಸಿಗಲಿದ್ದು, 2023 ರಲ್ಲಿ ಭಾರತವೂ ಆತಿಥ್ಯ ವಹಿಸುತ್ತಿದೆ ಎಂದು ಹೇಳಿದ್ದಾರೆ.
ಈ ಹಿಂದೆ ನಡೆದ ಶೃಂಗಸಭೆಗಳಂತೆಯೇ ಈ ಶೃಂಗಸಭೆಯನ್ನೂ ಸ್ವಾಗತಿಸಬೇಕು, 100 ಕ್ಕೂ ಹೆಚ್ಚು ರಾಷ್ಟ್ರಗಳನ್ನೊಳಗೊಂಡ ಅಲಿಪ್ತ ಶೃಂಗಸಭೆ 1983 ರಲ್ಲಿ ನವದೆಹಲಿಯಲ್ಲಿ ನಡೆದಿತ್ತು ಹಾಗೂ ಅದಾದ ಬಳಿಕ ಕಾಮನ್ ವೆಲ್ತ್ ಶೃಂಗಸಭೆಯೂ ನಡೆದಿತ್ತು ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.
ಆದರೆ 2023 ರ ಜಿ-20 ಶೃಂಗಸಭೆಯನ್ನು ಲೋಕಸಭಾ ಚುನಾವಣೆಗಾಗಿ ಜಗತ್ತಿನ ಶ್ರೇಷ್ಠ ಈವೆಂಟ್ ಮ್ಯಾನೇಜರ್ ಪ್ರಚಾರಕ್ಕೆ ಬಳಸಿಕೊಳ್ಳಲಿದ್ದು ಜನರ ನೈಜ ವಿಷಯಗಳನ್ನು ಮರೆಮಾಚುತ್ತಾರೆ ಎಂದು ಜೈರಾಮ್ ರಮೇಶ್ ಪ್ರಧಾನಿ ಮೋದಿ ಹೆಸರು ಹೇಳದೇ ವ್ಯಂಗ್ಯವಾಡಿದ್ದಾರೆ.
Advertisement