ಗುಜರಾತ್'ನಲ್ಲಿ ರಾಜಕೀಯ ಹೈಡ್ರಾಮಾ: ಎಎಪಿ ಅಭ್ಯರ್ಥಿಯಿಂದ ನಾಮಪತ್ರ ವಾಪಸ್; ಬಿಜೆಪಿ 'ಅಪಹರಿಸಿತ್ತು' ಎಂದು ಆಪ್ ಆರೋಪ

ಗುಜರಾತ್ ರಾಜ್ಯದಲ್ಲಿ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ರಾಜಕೀಯ ಹೈಡ್ರಾಮಾ ಶುರುವಾಗಿದೆ. ಅಪಹರಕ್ಕೊಳಗಾಗಿದ್ದಾರೆಂದು ಹೇಳಲಾಗುತ್ತಿದ್ದ ಗುಜರಾತ್‌ನ ಆಮ್ ಆದ್ಮಿ ಪಕ್ಷದ ಸೂರತ್ ಪೂರ್ವ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಬುಧವಾರ ತಮ್ಮ ನಾಮಪತ್ರವನ್ನು ಹಿಂಪಡೆದುಕೊಂಡಿದ್ದಾರೆ.
ನಾಮಪತ್ರ ವಾಪಸ್ ಪಡೆದ ಆಪ್ ಅಭ್ಯರ್ಥಿ ಹಾಗೂ ಕೇಜ್ರಿವಾಲ್.
ನಾಮಪತ್ರ ವಾಪಸ್ ಪಡೆದ ಆಪ್ ಅಭ್ಯರ್ಥಿ ಹಾಗೂ ಕೇಜ್ರಿವಾಲ್.

ಅಹ್ಮದಾಬಾದ್: ಗುಜರಾತ್ ರಾಜ್ಯದಲ್ಲಿ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ರಾಜಕೀಯ ಹೈಡ್ರಾಮಾ ಶುರುವಾಗಿದೆ. ಅಪಹರಕ್ಕೊಳಗಾಗಿದ್ದಾರೆಂದು ಹೇಳಲಾಗುತ್ತಿದ್ದ ಗುಜರಾತ್‌ನ ಆಮ್ ಆದ್ಮಿ ಪಕ್ಷದ ಸೂರತ್ ಪೂರ್ವ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಬುಧವಾರ ತಮ್ಮ ನಾಮಪತ್ರವನ್ನು ಹಿಂಪಡೆದುಕೊಂಡಿದ್ದು, ಈ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಕ್ಷದ ಅಧ್ಯಕ್ಷ ಅರವಿಂದ ಕೇಜ್ರಿವಾಲ್ ಆವರು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ಇದಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು, ಎಎಪಿ ಅಭ್ಯರ್ಥಿ ಕಾಂಚನ್ ಜರಿವಾಲಾ ಅವರನ್ನು ಬಿಜೆಪಿ ಅಪಹರಿಸಿದೆ. ಕಾಂಚನ್ ಜರಿವಾಲಾ ಅವರು ಸೂರತ್‌ನಿಂದ (ಪೂರ್ವ) ಎಎಪಿ ಅಭ್ಯರ್ಥಿಯಾಗಿದ್ದಾರೆ. ಗುಜರಾತ್ ರಾಜ್ಯ ಚುನಾವಣೆಯಲ್ಲಿ ಸೋಲುವ ಭೀತಿ ಬಿಜೆಪಿಗೆ ಎದುರಾಗಿದೆ. ಹೀಗಾಗಿ ನಮ್ಮ ಪಕ್ಷದ ಅಭ್ಯರ್ಥಿಯನ್ನು ಅಪಹರಿಸಿದೆ ಎಂದು ಹೇಳಿದ್ದರು.

ನಿನ್ನೆಯಿಂದ ಕಾಂಚನ್ ಹಾಗೂ ಅವರ ಕುಟುಂಬದವರು ನಾಪತ್ತೆಯಾಗಿದ್ದಾರೆ. ನಾಮಪತ್ರ ಪರಿಶೀಲನೆಗೆ ತೆರಳಿದ್ದರು. ನಾಮಪತ್ರ ಪರಿಶೀಲನೆ ಮುಗಿಸಿ ಕಚೇರಿಯಿಂದ ಹೊರ ಬಂದ ಕ್ಷಣದಲ್ಲೇ ಬಿಜೆಪಿಯ ಗೂಂಡಾಗಳು ಅವರನ್ನು ಕರೆದೊಯ್ದಿದ್ದಾರೆ. ಈಗ ಅವರು ಎಲ್ಲಿದ್ದಾರೆಂಬುದು ನಮಗೆ ಗೊತ್ತಿಲ್ಲ. ಇದು ಅಪಾಯಕಾರಿ, ಇದು ಕೇವಲ ಅಭ್ಯರ್ಥಿಯ ಅಪಹರಣವಲ್ಲ, ಪ್ರಜಾಪ್ರಭುತ್ವದ ಅಪಹರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಸಾಮಾಜಿಕ ಜಾಲತಾಣದ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದ ಕೇಜ್ರಿವಾಲ್ ಅವರು, "ನಮ್ಮ ಪಕ್ಷದ ಅಭ್ಯರ್ಥಿ ಕಾಂಚನ್ ಜರಿವಾಲಾ ಮತ್ತು ಅವರ ಕುಟುಂಬ ನಿನ್ನೆಯಿಂದ ನಾಪತ್ತೆಯಾಗಿದೆ, ಮೊದಲು, ಬಿಜೆಪಿ ಅವರ ನಾಮಪತ್ರವನ್ನು ತಿರಸ್ಕರಿಸಲು ಪ್ರಯತ್ನಿಸಿತು. ನಂತರ ಅವರ ನಾಮಪತ್ರವನ್ನು ಸ್ವೀಕರಿಸಲಾಯಿತು. ಬಳಿಕ ನಾಮಪತ್ರವನ್ನು ಹಿಂತೆಗೆದುಕೊಳ್ಳುವಂತೆ ಒತ್ತಡ ಹೇರಲಾಯಿತು. ಇದೀಗ ಅವರನ್ನು ಅಪಹರಣ ಮಾಡಲಾಗಿದೆಯೇ? ಎಂದು ಪ್ರಶ್ನಿಸಿದ್ದರು.

ಗೂಂಡಾಗಳು ಮತ್ತು ಪೊಲೀಸರ ಬಲದ ಮೇಲೆ ಅಭ್ಯರ್ಥಿಗಳನ್ನು ಅಪಹರಿಸಿ ಅವರ ನಾಮಪತ್ರ ವಾಪಸ್ ಪಡೆದುಕೊಳ್ಳುವಂತೆ ಮಾಡಲಾಗುತ್ತಿದೆ. ಈ ರೀತಿಯ ಸಾರ್ವಜನಿಕ ಗೂಂಡಾಗಿರಿ ಭಾರತದಲ್ಲಿ ಹಿಂದೆಂದೂ ಕಂಡಿರಲಿಲ್ಲ. ಈ ರೀತಿಯಾದರೆ ಚುನಾವಣೆಯ ಪ್ರಯೋಜನವೇನು? ಪ್ರಜಾಪ್ರಭುತ್ವ ಮುಗಿದ ಕತೆ ಎಂದು ಹೇಳಿದ್ದಾರೆ.

ಈ ಎಲ್ಲಾ ಬೆಳವಣಿಗೆ ನಡುವಲ್ಲೇ ಸೂರತ್ ಪೂರ್ವದ ಅಭ್ಯರ್ಥಿ ಕಾಂಚನ್ ಜರಿವಾಲಾ ಅವರು ಬುಧವಾರ ಭಾರೀ  ಪೊಲೀಸ್ ರಕ್ಷಣೆಯಲ್ಲಿ ಚುನಾವಣಾಧಿಕಾರಿಯ ಕಚೇರಿಗೆ ಹಾಜರಾಗಿದ್ದು, ನಾಮಪತ್ರವನ್ನು ಹಿಂಪಡೆದುಕೊಂಡಿದ್ದಾರೆ.

ಗುಜರಾತ್ ರಾಜ್ಯ ಎಎಪಿ ಅಧ್ಯಕ್ಷ ಗೋಪಾಲ್ ಇಟಾಲಿಯಾ ಮಾತನಾಡಿ, “ನಮ್ಮ ಸೂರತ್ ಪೂರ್ವದ ಅಭ್ಯರ್ಥಿ ಕಾಂಚನ್ ಜರಿವಾಲಾ ಅವರು ಬುಧವಾರ ಭಾರೀ  ಪೊಲೀಸ್ ರಕ್ಷಣೆಯಲ್ಲಿ ಚುನಾವಣಾಧಿಕಾರಿಯ ಕಚೇರಿಗೆ ಹಾಜರಾಗಿದ್ದರು ಹಾಗೂ "ಬಿಜೆಪಿ ಗೂಂಡಾಗಳಿಂದ " ಸುತ್ತುವರೆದಿದ್ದ ಅವರು  ಆಡಳಿತ ಪಕ್ಷದ ಒತ್ತಡದ ಮೇರೆಗೆ ತಮ್ಮ ಉಮೇದುವಾರಿಕೆಯನ್ನು ಹಿಂಪಡೆದಿದ್ದಾರೆಂದು ಹೇಳಿದ್ದಾರೆ.

ಮಾಧ್ಯಮದವರು ಜರಿವಾಲಾ ಅವರನ್ನು ಪ್ರಶ್ನಿಸಿದಾಗ, ಅವರ ಸುತ್ತಲೂ ಇದ್ದ ವ್ಯಕ್ತಿಗಳು ಅವರನ್ನು ಆತುರದಿಂದ ಹೊರಗೆ ಕರೆದುಕೊಂಡು ಹೋದರು. ಇದೀಗ ಜರಿವಾಲಾ ನಾಪತ್ತೆಯಾಗಿದ್ದಾರೆ ಹಾಗೂ ಚುನಾವಣೆಯಿಂದ ದೂರ ಉಳಿಯುವಂತೆ ಒತ್ತಡ ಹೇರಿದ ಬಿಜೆಪಿ ಗೂಂಡಾಗಳು ಅವರನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ ಎಂದು ಆರೋಪಿಸಿದ್ದಾರೆ.

182 ಸದಸ್ಯ ಬಲದ ಗುಜರಾತ್ ವಿಧಾನಸಭೆಗೆ ಡಿಸೆಂಬರ್ 1 ಮತ್ತು 5 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಡಿಸೆಂಬರ್ 8 ರಂದು ಮತ ಎಣಿಕೆ ನಡೆಯಲಿದೆ. ಸೂರತ್ ಪೂರ್ವ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ತನ್ನ ಹಾಲಿ ಶಾಸಕ ಅರವಿಂದ್ ರಾಣಾ ಅವರನ್ನು ಕಣಕ್ಕಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com