ತಮಿಳುನಾಡಿನ ಕರೂರ್‌ನಲ್ಲಿ ಸೆಪ್ಟಿಕ್ ಟ್ಯಾಂಕ್‌ಗೆ ಇಳಿದಿದ್ದ ಮೂವರು ಕಾರ್ಮಿಕರು ಉಸಿರುಗಟ್ಟಿ ಸಾವು

ಕರೂರಿನ ನಿರ್ಮಾಣ ಹಂತದ ಮನೆಯೊಂದರ ಸೆಪ್ಟಿಕ್ ಟ್ಯಾಂಕ್‌ಗೆ ಜೋಡಿಸಲಾಗಿದ್ದ ಮರದ ಹಲಗೆಗಳನ್ನು ತೆಗೆಯಲು ಇಳಿದ ಮೂವರು ಕಾರ್ಮಿಕರು ಉಸಿರುಗಟ್ಟಿ ಮೃತಪಟ್ಟಿರುವ ಘಟನೆ ಮಂಗಳವಾರ ನಡೆದಿದೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಕರೂರು: ಇಲ್ಲಿನ ನಿರ್ಮಾಣ ಹಂತದ ಮನೆಯೊಂದರ ಸೆಪ್ಟಿಕ್ ಟ್ಯಾಂಕ್‌ಗೆ ಜೋಡಿಸಲಾಗಿದ್ದ ಮರದ ಹಲಗೆಗಳನ್ನು ತೆಗೆಯಲು ಇಳಿದ ಮೂವರು ಕಾರ್ಮಿಕರು ಉಸಿರುಗಟ್ಟಿ ಮೃತಪಟ್ಟಿರುವ ಘಟನೆ ಮಂಗಳವಾರ ನಡೆದಿದೆ.

ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಮೂಲಗಳ ಪ್ರಕಾರ, ಸುಕ್ಕಲಿಯೂರಿನ ಗಾಂಧಿನಗರದಲ್ಲಿರುವ ಮನೆಯ ಆವರಣದಲ್ಲಿ ಸೆಪ್ಟಿಕ್ ಟ್ಯಾಂಕ್ ನಿರ್ಮಿಸಲಾಗಿದೆ.

ಮಂಗಳವಾರ ಕಟ್ಟಡ ಕಾರ್ಮಿಕರಾದ ಮೋಹನ್ ರಾಜ್ (23) ಮತ್ತು ರಾಜೇಶ್ (37) ಸೆಪ್ಟಿಕ್ ಟ್ಯಾಂಕ್ ಒಳಗೆ ಜೋಡಿಸಲಾಗಿದ್ದ ಮರದ ಹಲಗೆಗಳನ್ನು ತೆಗೆಯಲು ಇಳಿದಿದ್ದಾರೆ. ಇದ್ದಕ್ಕಿದ್ದಂತೆ ಇಬ್ಬರೂ ಟ್ಯಾಂಕ್ ಒಳಗಿನಿಂದ ಕೂಗಲು ಪ್ರಾರಂಭಿಸಿದ್ದಾರೆ. ಅವರ ಕಿರುಚಾಟ ಕೇಳಿ ಸಮೀಪದಲ್ಲೇ ಕೆಲಸ ಮಾಡುತ್ತಿದ್ದ ಅದೇ ಕಟ್ಟಡದ ಸಹ ಕಾರ್ಮಿಕ ಶಿವಕುಮಾರ್ (35) ಸ್ಥಳಕ್ಕೆ ಧಾವಿಸಿದಾಗ ಅವರು ಟ್ಯಾಂಕ್‌ನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ಕಂಡಿದ್ದಾರೆ. ಅವರಿಬ್ಬರನ್ನು ಉಳಿಸಲು ಅವರೂ ಕೂಡ ಟ್ಯಾಂಕ್‌ಗೆ ಇಳಿದು ಅವರು ಕೂಡ ಪ್ರಾಣ ಕಳೆದುಕೊಂಡಿದ್ದಾರೆ.

ಈ ಕುರಿತು ಸ್ಥಳೀಯರು ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಅವರು ಮೂವರನ್ನು ಹೊರತೆಗೆದು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ (ಜಿಎಂಸಿಎಚ್) ಕಳುಹಿಸಿದ್ದಾರೆ. ಆದರೆ, ಆ ವೇಳೆಗಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಕರೂರು ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಸುಂದರವತನಂ ಅವರು ಸ್ಥಳ ಪರಿಶೀಲನೆ ನಡೆಸಿ ಕಟ್ಟಡ ಮಾಲೀಕ ಗುಣಶೇಖರನ್‌ ಅವರನ್ನು ವಿಚಾರಣೆ ನಡೆಸಿದ್ದಾರೆ.

ಎಂಟು ಅಡಿ ಎತ್ತರದ ಹೊಸದಾಗಿ ನಿರ್ಮಿಸಲಾದ ಸೆಪ್ಟಿಕ್ ಟ್ಯಾಂಕ್‌ನಲ್ಲಿ ಮೊಣಕಾಲು ಆಳದ ನೀರು ತುಂಬಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಮಳೆ ನೀರು ಟ್ಯಾಂಕ್‌ಗೆ ಹರಿದು ಹೋಗಿರಬಹುದು. ತೇವಾಂಶದ ಕಾರಣ ಹಳೆಯ ಮರದ ಹಲಗೆಗಳು ಈ ನೀರಿನಲ್ಲಿ ಬಿದ್ದಿವೆ. ಟ್ಯಾಂಕ್ ತುಂಬಾ ಹೊತ್ತು ಮುಚ್ಚಿದ್ದರಿಂದ ಹಲಗೆಗಳು ನೆನೆದು ಟ್ಯಾಂಕ್ ಒಳಗಿನ ಗಾಳಿಯು ಹಾನಿಕಾರಕವಾಗಿದೆ. ಇದರ ಪರಿಣಾಮವಾಗಿ ಕಾರ್ಮಿಕರು ಉಸಿರುಗಟ್ಟಿ ಸತ್ತಿರಬಹುದು.

ಘಟನಾ ಸ್ಥಳಕ್ಕೆ ಆರ್‌ಡಿಒ ರುಬೀನಾ ಹಾಗೂ ಕರೂರು ನಗರ ಪಾಲಿಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಾಂಥೋನಿಮಲೈ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com