ಕೇರಳ: ನಡು ರಸ್ತೆಯಲ್ಲಿ ಅಪ್ರಾಪ್ತ ಬಾಲಕಿಯನ್ನು ಎತ್ತಿ ನೆಲಕ್ಕೆ ಅಪ್ಪಳಿಸಿದ್ದ ವ್ಯಕ್ತಿಯ ಬಂಧನ
ಕೇರಳದಲ್ಲಿ ಅಪ್ರಾಪ್ತೆಯೊಬ್ಬಳನ್ನು ನೆಲಕ್ಕೆ ಅಪ್ಪಳಿಸುತ್ತಿರುವ ವಿಡಿಯೋ ವೈರಲ್ ಆಗಿದ್ದ ಪ್ರಕರಣದಲ್ಲಿ ಮೃಗೀಯ ವರ್ತನೆ ತೋರಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ.
Published: 19th November 2022 03:34 PM | Last Updated: 19th November 2022 03:34 PM | A+A A-

ಅಪ್ರಾಪ್ತ ಬಾಲಕಿಯನ್ನು ನೆಲಕ್ಕೆ ಅಪ್ಪಳಿಸಿದ್ದ ವ್ಯಕ್ತಿ (ಸಿಸಿಟಿವಿ ದೃಶ್ಯ)
ತಿರುವನಂತಪುರಂ: ಕೇರಳದಲ್ಲಿ ಅಪ್ರಾಪ್ತೆಯೊಬ್ಬಳನ್ನು ನೆಲಕ್ಕೆ ಅಪ್ಪಳಿಸುತ್ತಿರುವ ವಿಡಿಯೋ ವೈರಲ್ ಆಗಿದ್ದ ಪ್ರಕರಣದಲ್ಲಿ ಮೃಗೀಯ ವರ್ತನೆ ತೋರಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ.
ಕಾಸರಗೋಡು ಜಿಲ್ಲೆಯಲ್ಲಿ ಪೊಲೀಸರು ವ್ಯಕ್ತಿಯನ್ನು ಬಂಧಿಸಿದ್ದು, ಆರೋಪಿಯನ್ನು ಅಬೂಬಕರ್ ಸಿದ್ದಿಕಿ ಎಂದು ಗುರುತಿಸಲಾಗಿದ್ದು, ಆತನನ್ನು ಡ್ರಗ್ ವ್ಯಸನಿ ಎಂದು ಹೇಳಲಾಗುತ್ತಿದೆ. ಮಂಗಲಪಾಡಿಯ ಮಜೇಶ್ವರಂ ನಲ್ಲಿ ಕೆಲವು ದಿನಗಳ ಹಿಂದೆ ಅಪ್ರಾಪ್ತ ಬಾಲಕಿಯೊಬ್ಬರು ಮದರಸಾದಿಂದ ಮನೆಗೆ ತೆರಳಲು ತನ್ನ ಸಂಬಂಧಿಕರಿಗಾಗಿ ಕಾಯುತ್ತಿದ್ದಾಗ, ಹಿಜಾಬ್ ಧರಿಸಿದ್ದ ಬಾಲಕಿಯತ್ತ ನಡೆದು ಬಂದ ವ್ಯಕ್ತಿ ಆಕೆಯನ್ನು ಥಳಿಸಿದ್ದ. ಅಷ್ಟೇ ಅಲ್ಲದೇ ನೆಲಕ್ಕೆ ಅಪ್ಪಳಿಸಿದ್ದಾನೆ. ಈ ಘಟನೆಯ ಬಳಿಕ ದುಷ್ಕೃತ್ಯ ಎಸಗಿದ್ದ ವ್ಯಕ್ತಿ ಅಲ್ಲಿ ಏನೂ ಆಗಿಯೇ ಇಲ್ಲವೆಂಬಂತೆ ನಡೆದು ಹೋಗಿದ್ದ.
ಅಪ್ರಾಪ್ತ ಬಾಲಕಿ ಅಘಾತಕ್ಕೊಳಗಾಗಿ ತನಗೇನಾಯಿತು ಎಂಬುದನ್ನು ಹೇಳಿಕೊಳ್ಳುವುದಕ್ಕೂ ಆಗದ ಸ್ಥಿತಿ ತಲುಪಿದ್ದಳು. ಈ ಬಳಿಕ ಆಕೆಯ ಸಂಬಂಧಿಕರಿಗೆ ನಡೆದ ಘಟನೆಯನ್ನು ವಿವರಿಸಿ ಯಾರೋ ಅಪರಿಚಿತ ವ್ಯಕ್ತಿ ತನ್ನನ್ನು ಥಳಿಸಿದ್ದಾನೆ ಎಂದು ಹೇಳಿದ್ದಳು.
ಬಾಹ್ಯ ಗಾಯಗಳೇನು ಆಗದೇ ಇದ್ದರೂ ಬಾಲಕಿಗೆ ವಿಸ್ತೃತ ಆರೋಗ್ಯ ತಪಾಸಣೆ ನಡೆಸಲಾಗಿದೆ. ಈ ಘಟನೆಯ ವೀಡಿಯೋ ಸಿಸಿಟಿವಿಯಲ್ಲಿ ದಾಖಲಾಗಿ ವೈರಲ್ ಆಗತೊಡಗಿತ್ತು. ಪೋಕ್ಸೋ ಕಾಯ್ದೆಯಡಿ ಹಾಗೂ ಹತ್ಯೆ ಯತ್ನದ ಆರೋಪದಡಿ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ.