ಪಶ್ಚಿಮ ಬಂಗಾಳ: ಹಲವಾರು ಕಚ್ಚಾ ಬಾಂಬ್‌ಗಳು ಸ್ಫೋಟ, ನಾಲ್ವರಿಗೆ ಗಾಯ, ಒಬ್ಬರ ಸ್ಥಿತಿ ಗಂಭೀರ

ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಜಗದ್ದಲ್ ಪ್ರದೇಶದಲ್ಲಿ ಭಾನುವಾರ ಮುಂಜಾನೆ ಹಲವಾರು ಬಾಂಬ್‌ಗಳು ಸ್ಫೋಟಗೊಂಡಿದ್ದು, ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ. ಈ ಪೈಕಿ ಒಬ್ಬರ ಸ್ಥಿತಿ ಗಂಭೀರವಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಜಗದ್ದಲ್ ಪ್ರದೇಶದಲ್ಲಿ ಭಾನುವಾರ ಮುಂಜಾನೆ ಹಲವಾರು ಬಾಂಬ್‌ಗಳು ಸ್ಫೋಟಗೊಂಡಿದ್ದು, ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ. ಈ ಪೈಕಿ ಒಬ್ಬರ ಸ್ಥಿತಿ ಗಂಭೀರವಾಗಿದೆ.

ಬ್ಯಾರಕ್‌ಪೋರ್ ಪೊಲೀಸ್ ಕಮಿಷನರೇಟ್‌ನ ಅಧಿಕಾರಿಯೊಬ್ಬರು ನೀಡಿರುವ ಮಾಹಿತಿ ಪ್ರಕಾರ, ಶನಿವಾರ ರಾತ್ರಿ ಮದುವೆ ಮಂಟಪದಲ್ಲಿ ಸಂಗೀತ ನುಡಿಸುವ ವಿಚಾರದಲ್ಲಿ ಮದುವೆ ಮನೆಯವರು ಮತ್ತು ಸ್ಥಳೀಯ ನಿವಾಸಿಗಳ ನಡುವೆ ವಾಗ್ವಾದ ನಡೆದಿದೆ. ಭಾನುವಾರ ಮುಂಜಾನೆ ಮದುವೆ ಸಭಾಂಗಣದ ಮುಂದೆ ಹಲವಾರು ಕಚ್ಚಾ ಬಾಂಬ್‌ಗಳು ಸ್ಫೋಟಗೊಂಡಿದ್ದು, ನಾಲ್ವರು ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಈ ಪ್ರದೇಶದಲ್ಲಿ ಪೊಲೀಸರು ದಾಳಿ ನಡೆಸಿದ್ದು, ಘಟನೆಗೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದೆ. ದಾಳಿಯ ವೇಳೆ ಈ ಪ್ರದೇಶದಿಂದ ಇನ್ನೂ ಎರಡು ಸ್ಫೋಟಗೊಳ್ಳದ ಬಾಂಬ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

2023ರಲ್ಲಿ ನಡೆಯಲಿರುವ ಪಂಚಾಯತ್ ಚುನಾವಣೆಗೆ ಮುನ್ನ ರಾಜ್ಯದಾದ್ಯಂತ ಟಿಎಂಸಿ ಬಾಂಬ್‌ಗಳನ್ನು ಸಂಗ್ರಹಿಸಿದೆ ಎಂದು ಬಿಜೆಪಿ ಆರೋಪಿಸಿದ್ದರಿಂದ ಈ ಘಟನೆಯು ರಾಜಕೀಯ ಕೆಸರೆರೆಚಾಟಕ್ಕೆ ಕಾರಣವಾಗಿದ್ದು, ಬಿಜೆಪಿ ಸುಳ್ಳು ಆರೋಪಗಳನ್ನು ಮಾಡುತ್ತಿದೆ ಎಂದು ಟಿಎಂಸಿ ಹೇಳಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಸುಕಾಂತ ಮಜುಂದಾರ್ ಸುದ್ದಿಗಾರರೊಂದಿಗೆ ಮಾತನಾಡಿ, ಸ್ಥಳೀಯ ಟಿಎಂಸಿ ಮುಖಂಡರು ಈ ಪ್ರದೇಶದಲ್ಲಿ ಬಾಂಬ್‌ಗಳನ್ನು ಸಂಗ್ರಹಿಸಿದ್ದಾರೆ ಮತ್ತು ವಿವಾದ ಉಂಟಾದಾಗ ಆಡಳಿತ ಪಕ್ಷದ ಕಿಡಿಗೇಡಿಗಳು ಬಾಂಬ್‌ಗಳನ್ನು ಎಸೆಯುತ್ತಾರೆ ಎಂದು ಆರೋಪಿಸಿದ್ದಾರೆ.

ಟಿಎಂಸಿ ರಾಜ್ಯ ವಕ್ತಾರ ಜಯಪ್ರಕಾಶ್ ಮಜುಂದಾರ್ ಮಾತನಾಡಿ, ಬಿಜೆಪಿ, ಟಿಎಂಸಿ ವಿರುದ್ಧ ಸುಳ್ಳು ಆರೋಪ ಮಾಡುತ್ತಿದೆ. ನಮ್ಮ ಕಾರ್ಯಕರ್ತರು ಇಂತಹ ಘಟನೆಗಳಲ್ಲಿ ಭಾಗಿಯಾಗಿಲ್ಲ. ನಮ್ಮ ಪಕ್ಷ ಇಂತಹ ಯಾರೊಂದಿಗೂ ಒಡನಾಟ ಹೊಂದಿಲ್ಲ. ಪೊಲೀಸರು ಈ ಬಗ್ಗೆ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com