'ದಿ ಕಾಶ್ಮೀರ್ ಫೈಲ್ಸ್' ಅಸಭ್ಯ ಚಿತ್ರ ಎಂದ ನಡಾವ್ ಲಪಿಡ್ ವಿರುದ್ಧ ಅನುಪಮ್ ಖೇರ್ ಕಿಡಿ

ಸಾಕಷ್ಟು ಮೆಚ್ಚುಗೆ ಪಡೆದು, ಸಂಚಲನ ಮೂಡಿಸಿದ್ದ 'ದಿ ಕಾಶ್ಮೀರ್ ಫೈಲ್ಸ್' ಚಿತ್ರವನ್ನು ಅಶ್ಲೀಲವಾಗಿದೆ ಎಂದು ಹೇಳಿದ್ದ ಇಸ್ರೇಲ್ ಸಿನಿಮಾ ನಿರ್ಮಾಪಕ ನಡಾವ್ ಲಪಿಡ್ ಅವರ ವಿರುದ್ಧ ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಅವರು ತೀವ್ರವಾಗಿ ಕಿಡಿಕಾರಿದ್ದಾರೆ.
ಅನುಪಮ್ ಖೇರ್
ಅನುಪಮ್ ಖೇರ್

ನವದೆಹಲಿ: ಸಾಕಷ್ಟು ಮೆಚ್ಚುಗೆ ಪಡೆದು, ಸಂಚಲನ ಮೂಡಿಸಿದ್ದ 'ದಿ ಕಾಶ್ಮೀರ್ ಫೈಲ್ಸ್' ಚಿತ್ರವನ್ನು ಅಶ್ಲೀಲವಾಗಿದೆ ಎಂದು ಹೇಳಿದ್ದ ಇಸ್ರೇಲ್ ಸಿನಿಮಾ ನಿರ್ಮಾಪಕ ನಡಾವ್ ಲಪಿಡ್ ಅವರ ವಿರುದ್ಧ ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಅವರು ತೀವ್ರವಾಗಿ ಕಿಡಿಕಾರಿದ್ದಾರೆ.

ನವೆಂಬರ್ 28 ರಂದು ನಡೆದ ಐಎಫ್‌ಎಫ್‌ಐ ಸಮಾರೋಪ ಸಮಾರಂಭದಲ್ಲಿ, ಲಪಿಡ್ 'ದಿ ಕಾಶ್ಮೀರ್ ಫೈಲ್ಸ್' ಅನ್ನು "ಪ್ರಚಾರ, ಅಸಭ್ಯ ಚಿತ್ರ" ಎಂದು ಕರೆದಿದ್ದರು. ಅಂತಹ ಪ್ರತಿಷ್ಠಿತ ಚಲನಚಿತ್ರೋತ್ಸವದ ಸ್ಪರ್ಧಾತ್ಮಕ ವಿಭಾಗದಲ್ಲಿ ಈ ಚಿತ್ರವನ್ನು ನೋಡಿ "ಆಘಾತಗೊಂಡಿದ್ದೇನೆ" ಎಂದು ಹೇಳಿದ್ದರು.

ಲಪಿಡ್ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿರುವ ಅನುಪಮ್ ಖೇರ್ ಅವರು, ನಡಾವ್ ಲಪಿಡ್ ಅವರು ಚಿತ್ರವನ್ನು  "ಪ್ರಚಾರ, ಅಸಭ್ಯ" ಎಂದು ಕರೆಯುವುದು "ನಾಚಿಕೆಗೇಡಿನ ಸಂಗತಿ" ಎಂದು ಹೇಳಿದ್ದಾರೆ.

"ಹತ್ಯಾಕಾಂಡ ಸರಿಯಾಗಿರುವುದಾದರೆ, ಕಾಶ್ಮೀರಿ ಪಂಡಿತರ ನಿರ್ಗಮನವೂ ಸರಿಯಿದೆ. ಇದು ಪೂರ್ವ ಯೋಜಿತ ಎಂದು ತೋರುತ್ತದೆ. ಏಕೆಂದರೆ ಹೇಳಿಕೆ ಬಳಿಕ ಟೂಲ್ ಕಿಟ್ ಗ್ಯಾಂಗ್ ಸಕ್ರಿಯವಾಗಿದೆ. ಲಪಿಡ್ ಅವರು, ಹತ್ಯಾಕಾಂಡದಿಂದ ಬಳಲುತ್ತಿರುವ ಯಹೂದಿಗಳ ಸಮುದಾಯದಿಂದ ಬಂದಿದ್ದರೂ ಈ ರೀತಿಯ ಹೇಳಿಕೆ ನೀಡುವುದು ನಾಚಿಕೆಗೇಡಿನ ಸಂಗತಿ ಎಂದು ತಿಳಿಸಿದ್ದಾರೆ.

ಲಪಿಡ್ ಅವರು ತಮ್ಮ ಹೇಳಿಕೆ ಮೂಲಕ ಹತ್ಯಾಕಾಂಡದಿಂದ ನೋವು ಅನುಭವಿಸಿದ್ದ ಜನರ ಮನಸ್ಸನ್ನೂ ನೋಯಿಸಿದ್ದಾರೆ. ವೇದಿಕೆಯಲ್ಲಿ ತಮ್ಮ ಗುರಿಯನ್ನು ಪೂರ್ಣಗೊಳಿಸಿಕೊಳ್ಳುವ ಸಲುವಾಗಿ ಲಪಿಡ್ ಅವರು ಸಾವಿರಾರು ಜನರ ನೋವನ್ನು ಬಳಸದಂತೆ ದೇವರು ಅವರಿಗೆ ಬುದ್ಧಿ ನೀಡಲಿ ಎಂದು ನಾನು ಹೇಳುತ್ತೇನೆಂದು ಹೇಳಿದ್ದಾರೆ.

ಇದಷ್ಟೇ ಅಲ್ಲದೆ, ಲಪಿಡ್ ಹೇಳಿಕೆ ಖಂಡಿಸಿ ಅನುಪಮ್ ಖೇರ್ ಅವರು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿಯೂ ಟ್ವೀಟ್ ಮಾಡಿದ್ದಾರೆ.

"ಸುಳ್ಳಿನ ಎತ್ತರ ಎಷ್ಟೇ ಇರಲಿ.. ಸತ್ಯಕ್ಕೆ ಹೋಲಿಸಿದರೆ ಅದು ಯಾವಾಗಲೂ ಚಿಕ್ಕದಾಗಿರುತ್ತದೆ ಎಂದು ಹೇಳಿದ್ದಾರೆ. ಅಲ್ಲದೆ, ತಮ್ಮ ಟ್ವೀಟ್‌ನೊಂದಿಗೆ 'ದಿ ಕಾಶ್ಮೀರ್ ಫೈಲ್ಸ್' ಮತ್ತು ಸ್ಟೀವನ್ ಸ್ಪೀಲ್‌ಬರ್ಗ್ ಅವರ 'ಶಿಂಡ್ಲರ್ಸ್ ಲಿಸ್ಟ್' ಚಿತ್ರಗಳನ್ನೂ ಲಗತ್ತಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com