ಸಿಧು ಮೂಸೆವಾಲಾ ಕೊಲೆ ಪ್ರಕರಣ: ಪೊಲೀಸ್ ಕಸ್ಟಡಿಯಿಂದ ಪರಾರಿಯಾದ ಗ್ಯಾಂಗ್‌ಸ್ಟರ್ ದೀಪಕ್ ಟಿನು
ಚಂಡೀಗಢ: ಸಿಧು ಮೂಸೆವಾಲಾ ಹತ್ಯೆ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ಗ್ಯಾಂಗ್‌ಸ್ಟರ್ ದೀಪಕ್ ಟಿನು ಎಂಬಾತ ಶನಿವಾರ ರಾತ್ರಿ ಪಂಜಾಬ್‌ನ ಮಾನ್ಸಾ ಜಿಲ್ಲೆಯ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಂಡಿದ್ದಾನೆ ಎಂದು ಅಧಿಕೃತ ಮೂಲಗಳು ಭಾನುವಾರ ತಿಳಿಸಿವೆ.
ಮತ್ತೊಂದು ಪ್ರಕರಣದಲ್ಲಿ ದೀಪಕ್ ಟಿನುವನ್ನು ಮಾನ್ಸಾ ಪೊಲೀಸರು ‘ಪ್ರೊಡಕ್ಷನ್ ವಾರಂಟ್’ ಮೇಲೆ ಗೋಯಿಂದ್‌ವಾಲ್ ಸಾಹಿಬ್ ಜೈಲಿನಿಂದ ಕರೆತರುವಾಗ ಶನಿವಾರ ರಾತ್ರಿ ಆತ ಪರಾರಿಯಾಗಿದ್ದಾನೆ. ಆತನ ಪತ್ತೆಗಾಗಿ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೀಪಕ್ ಟಿನು, ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್‌ನ ಆಪ್ತನಾಗಿದ್ದು, ಪಂಜಾಬಿ ಗಾಯಕ ಸಿಧು ಮೂಸೆವಾಲಾ ಕೊಲೆ ಪ್ರಕರಣದಲ್ಲಿ ಆರೋಪಿಯೂ ಆಗಿದ್ದಾನೆ.
ಟಿನುನನ್ನು ಪತ್ತೆ ಹಚ್ಚಲು ನಾವು ಕಾರ್ಯಪ್ರವೃತ್ತರಾಗಿದ್ದೇವೆ. ಶೀಘ್ರದಲ್ಲೇ ಆತನನ್ನು ನಾವು ಬಂಧಿಸುತ್ತೇವೆ ಎಂದು ಬಟಿಂಡಾ ರೇಂಜ್‌ನ ಇನ್‌ಸ್ಪೆಕ್ಟರ್ ಜನರಲ್ ಮುಖ್ವಿಂದರ್ ಸಿಂಗ್ ಛಿನಾ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಮೇ 29 ರಂದು ಪಂಜಾಬ್‌ನ ಮಾನ್ಸಾ ಜಿಲ್ಲೆಯಲ್ಲಿ ಸಿಧು ಮೂಸೆವಾಲಾ ಎಂದೇ ಜನಪ್ರಿಯರಾಗಿರುವ ಶುಭದೀಪ್ ಸಿಂಗ್ ಸಿಧು ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಮಾನ್ಸಾದ ಜವಾಹರ್ ಕೆ ಗ್ರಾಮಕ್ಕೆ ಸ್ನೇಹಿತರು ಮತ್ತು ಸೋದರ ಸಂಬಂಧಿಯೊಂದಿಗೆ ತೆರಳುತ್ತಿದ್ದಾಗ ಅವರ ಜೀಪ್ ಮೇಲೆ ತಂಡವೊಂದು ಗುಂಡಿನ ಮಳೆ ಸುರಿಸಿತ್ತು.
ಹತ್ಯೆಯ ನಂತರ, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಸದಸ್ಯ ಗೋಲ್ಡಿ ಬ್ರಾರ್ ಎಂಬಾತ ಈ ಕೊಲೆಯ ಹೊಣೆಯನ್ನು ಹೊತ್ತುಕೊಂಡಿದ್ದ.
ಕೊಲೆ ಪ್ರಕರಣದಲ್ಲಿ ಸಲ್ಲಿಕೆಯಾಗಿರುವ ಚಾರ್ಜ್ ಶೀಟ್‌ನಲ್ಲಿ ಉಲ್ಲೇಖಿಸಲಾಗಿರುವ 24 ಆರೋಪಿಗಳಲ್ಲಿ ಟಿನು ಕೂಡ ಒಬ್ಬ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ