ಉತ್ತರಪ್ರದೇಶ: ದುರ್ಗಾಪೂಜೆ ಆರತಿ ಮಾಡುತ್ತಿರುವಾಗ ಪೆಂಡಾಲ್ಗೆ ಬೆಂಕಿ; ಮೂವರ ದುರ್ಮರಣ, 60 ಮಂದಿಗೆ ಗಾಯ
ಉತ್ತರ ಪ್ರದೇಶದ ಭಾದೋಹಿ ಜಿಲ್ಲೆಯ ಔರಾಯ್ ಪಟ್ಟಣದಲ್ಲಿ ಹಾಕಲಾಗಿದ್ದ ದುರ್ಗಾ ಪೂಜೆ ಪೆಂಡಾಲ್ಗೆ ಬೆಂಕಿ ಬಿದ್ದು ಇಬ್ಬರು ಮಕ್ಕಳು ಸೇರಿ ಮೂವರು ದಾರುಣವಾಗಿ ಮೃತಪಟ್ಟಿದ್ದು, ಸುಮಾರು 60 ಮಂದಿ ಗಾಯಗೊಂಡಿದ್ದಾರೆ.
Published: 03rd October 2022 11:04 AM | Last Updated: 03rd October 2022 11:04 AM | A+A A-

ದುರ್ಗಾ ಪೂಜೆ ಪೆಂಡಾಲ್ ಗೆ ಬೆಂಕಿ
ಭದೋಹಿ: ಉತ್ತರ ಪ್ರದೇಶದ ಭಾದೋಹಿ ಜಿಲ್ಲೆಯ ಔರಾಯ್ ಪಟ್ಟಣದಲ್ಲಿ ಹಾಕಲಾಗಿದ್ದ ದುರ್ಗಾ ಪೂಜೆ ಪೆಂಡಾಲ್ಗೆ ಬೆಂಕಿ ಬಿದ್ದು ಇಬ್ಬರು ಮಕ್ಕಳು ಸೇರಿ ಮೂವರು ದಾರುಣವಾಗಿ ಮೃತಪಟ್ಟಿದ್ದು, ಸುಮಾರು 60 ಮಂದಿ ಗಾಯಗೊಂಡಿದ್ದಾರೆ.
ರಾತ್ರಿ 9.30ರ ಸುಮಾರಿಗೆ ಆರತಿ ಮಾಡುವಾಗ ಈ ಘಟನೆ ನಡೆದಿದೆ. ಘಟನೆ ವೇಳೆ ಸುಮಾರು 300 ರಿಂದ 400 ಮಂದಿ ಪೆಂಡಾಲ್ ಕೆಳಗಿದ್ದರು. ಮೇಲ್ನೋಟಕ್ಕೆ ವಿದ್ಯುತ್ ಶಾರ್ಟ್ ಸಕ್ರ್ಯೂಟ್ ಬೆಂಕಿ ಅವಘಡಕ್ಕೆ ಕಾರಣ ಎಂದು ಕಾಣಿಸುತ್ತದೆ ಎಂದು ಅಗ್ನಿಶಾಮಕ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಲಖನೌದಿಂದ 280 ಕಿಮೀ ದೂರದಲ್ಲಿರುವ ಈ ಪಟ್ಟಣದಲ್ಲಿ ನವರಾತ್ರಿ ಪ್ರಾರಂಭವಾದಾಗಿನಿಂದಲೂ ದುರ್ಗಾ ಪೂಜೆ ನಡೆಸಲಾಗುತ್ತಿತ್ತು. ದೊಡ್ಡ ಪೆಂಡಾಲ್ ಹಾಕಿ, ದುರ್ಗಾ ದೇವಿ ವಿಗ್ರಹ ಇಟ್ಟು ಪೂಜೆ, ಆರತಿ ನಡೆಸಲಾಗುತ್ತಿತ್ತು. ಹಾಗೇ ಅ.2ರಂದೂ ಅಲ್ಲಿ ಸುಮಾರು 150 ಮಂದಿ ಸೇರಿದ್ದರು. ಸಪ್ತಮಿ ದಿನವಾಗಿದ್ದರಿಂದ ಕಾಳರಾತ್ರಿ ದೇವಿ ಪೂಜೆ ಅದ್ದೂರಿಯಾಗಿಯೇ ನಡೆದಿತ್ತು. ಕೊನೆಯಲ್ಲಿ ಆರತಿ ಮಾಡುವಾಗ ಪೆಂಡಾಲ್ಗೆ ಬೆಂಕಿ ತಗುಲಿದೆ.
ಈ ಅವಘಡದಲ್ಲಿ 12 ವರ್ಷದ ಅಂಕುಶ್ ಸೋನಿ ಮತ್ತು 10 ವರ್ಷದ ನವೀನ್ ಕುಮಾರ್ , 47ವರ್ಷದ ಜಯಾ ದೇವಿ ಸಾವನ್ನಪ್ಪಿದ್ದಾರೆ. ಸುಮಾರು 60 ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅದರಲ್ಲಿ 22 ಜನರ ಸ್ಥಿತಿ ಗಂಭೀರವಾಗಿದೆ ಎಂದು ಜಿಲ್ಲಾಧಿಕಾರಿ ಗೌರಾಂಗ್ ರಾಠಿ ಮಾಹಿತಿ ನೀಡಿದ್ದಾರೆ.