ದಾಳಿಯ ವೇಳೆ ಉತ್ತರ ಪ್ರದೇಶದ ಪೊಲೀಸರ ಗುಂಡೇಟಿಗೆ ಬಿಜೆಪಿ ನಾಯಕನ ಪತ್ನಿ ಸಾವು, ಗ್ರಾಮಸ್ಥರ ಆಕ್ರೋಶ

ಆರೋಪಿಯೊಬ್ಬನನ್ನು ಹಿಡಿಯಲು ಉತ್ತರಾಖಂಡದ ಉಧಮ್ ಸಿಂಗ್ ನಗರ ಜಿಲ್ಲೆಯಲ್ಲಿ ಸ್ಥಳೀಯ ಬಿಜೆಪಿ ಮುಖಂಡರೊಬ್ಬರ ನಿವಾಸದ ಮೇಲೆ ಉತ್ತರ ಪ್ರದೇಶ ಪೊಲೀಸರು ನಡೆಸಿದ ದಾಳಿಯಲ್ಲಿ ದುರಂತ ಸಂಭವಿಸಿದ್ದು, ಬಿಜೆಪಿ ಮುಖಂಡರ ಪತ್ನಿ ಪೊಲೀಸರ ಗುಂಡಿಗೆ ಬಲಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.
ಗುರ್ತಾಜ್ ಭುಲ್ಲರ್ ಮತ್ತು ಗುರುಪ್ರೀತ್ ಕೌರ್‌
ಗುರ್ತಾಜ್ ಭುಲ್ಲರ್ ಮತ್ತು ಗುರುಪ್ರೀತ್ ಕೌರ್‌

ಉಧಮ್ ಸಿಂಗ್ ನಗರ: ಆರೋಪಿಯೊಬ್ಬನನ್ನು ಹಿಡಿಯಲು ಉತ್ತರಾಖಂಡದ ಉಧಮ್ ಸಿಂಗ್ ನಗರ ಜಿಲ್ಲೆಯಲ್ಲಿ ಸ್ಥಳೀಯ ಬಿಜೆಪಿ ಮುಖಂಡರೊಬ್ಬರ ನಿವಾಸದ ಮೇಲೆ ಉತ್ತರ ಪ್ರದೇಶ ಪೊಲೀಸರು ನಡೆಸಿದ ದಾಳಿಯಲ್ಲಿ ದುರಂತ ಸಂಭವಿಸಿದ್ದು, ಬಿಜೆಪಿ ಮುಖಂಡರ ಪತ್ನಿ ಪೊಲೀಸರ ಗುಂಡಿಗೆ ಬಲಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.

ಉಧಮ್ ಸಿಂಗ್ ನಗರದ ಕಾಶಿಪುರ ಪ್ರದೇಶದ ಭರತ್‌ಪುರ ಗ್ರಾಮದಲ್ಲಿ ಬುಧವಾರ ಈ ಘಟನೆ ನಡೆದಿದ್ದು, ಕೋಪಗೊಂಡ ಗ್ರಾಮಸ್ಥರು ಪೊಲೀಸ್ ತಂಡವನ್ನು ಥಳಿಸಿದ್ದಾರೆ ಎಂದು ವರದಿಯಾಗಿದೆ.

ಮಾಹಿತಿಯ ಪ್ರಕಾರ, ವಿವಿಧ ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿ ಭುಲ್ಲರ್ ಅವರ ನಿವಾಸದಲ್ಲಿ ತಲೆಮರೆಸಿಕೊಂಡಿರುವ  ಕುರಿತು ಮಾಹಿತಿ ಲಭ್ಯವಾಗಿತ್ತು. ಆತನನ್ನು ಬಂಧಿಸಲೆಂದು ಉತ್ತರ ಪ್ರದೇಶ ಪೊಲೀಸರ ತಂಡವು ಬುಧವಾರ ಸಂಜೆ ಕುಂದಾ ಪೊಲೀಸ್ ಠಾಣಾ ವ್ಯಾಪ್ತಿಯ ಭರತ್‌ಪುರ ಗ್ರಾಮದಲ್ಲಿ ಬಿಜೆಪಿಯ ಸ್ಥಳೀಯ ಪ್ರದೇಶ ಬ್ಲಾಕ್ ಅಧ್ಯಕ್ಷ ಗುರ್ತಾಜ್ ಭುಲ್ಲರ್ ಅವರ ನಿವಾಸದ ಮೇಲೆ ದಾಳಿ ನಡೆಸಿತು.

ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಬಿಜೆಪಿ ಮುಖಂಡನ ಪತ್ನಿಗೆ ಗುಂಡೇಟು ತಗುಲಿ ಮೃತಪಟ್ಟಿದ್ದಾರೆ. ಉತ್ತರ ಪ್ರದೇಶ ಪೊಲೀಸ್ ಸಿಬ್ಬಂದಿ ಹಾರಿಸಿದ ಗುಂಡು ಭುಲ್ಲರ್ ಅವರ ಪತ್ನಿ ಗುರುಪ್ರೀತ್ ಕೌರ್‌ಗೆ ತಗುಲಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ನಂತರ ಹೆಚ್ಚಿನ ಸಂಖ್ಯೆಯ ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿ, ಉತ್ತರ ಪ್ರದೇಶ ಪೊಲೀಸ್ ಸಿಬ್ಬಂದಿಯನ್ನು ಹಿಡಿದು, ಅವರಿಗೆ ಥಳಿಸಿದ್ದಾರೆ. ಪೊಲೀಸರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಉತ್ತರಾಖಂಡದ ಸ್ಥಳೀಯ ಪೊಲೀಸ್ ಠಾಣೆಯ ತಂಡವು ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ನಿಯೋಜಿಸಿದೆ.

ಪರಿಸ್ಥಿತಿ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಇತರ ಜಿಲ್ಲೆಗಳಿಂದ ಪಡೆಗಳನ್ನು ಕರೆಸಲಾಗಿದೆ. ಎರಡೂ ಕಡೆಯಿಂದ ಗುಂಡಿನ ಚಕಮಕಿ ನಡೆದಿದ್ದು, ಮಹಿಳೆ ಮೃತಪಟ್ಟಿದ್ದಾರೆ ಮತ್ತು ಉತ್ತರ ಪ್ರದೇಶ ಪೊಲೀಸ್‌ನ ಮೂವರು ಕಾನ್‌ಸ್ಟೆಬಲ್‌ಗಳು ಗಾಯಗೊಂಡಿದ್ದಾರೆ ಎಂದು ಉಧಮ್ ಸಿಂಗ್ ನಗರದ ಎಸ್‌ಎಸ್‌ಪಿ ಮಂಜುನಾಥ್ ಟಿ.ಸಿ. ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com