ವಿಮಾನದಲ್ಲಿ ಹೊಗೆ ಎಂದ ಪ್ರಯಾಣಿಕರು, ದೇವರಲ್ಲಿ ಪ್ರಾರ್ಥಿಸಿ ಎಂದ ಸ್ಪೈಸ್ ಜೆಟ್ ಸಿಬ್ಬಂದಿ!!

ಇತ್ತೀಚಿಗೆ ಹೈದರಾಬಾದ್ ನಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದ ಸ್ಪೈಸ್ ಜೆಟ್ ವಿಮಾನ ಇದೀಗ ಭಾರಿ ಸುದ್ದಿಗೆ ಗ್ರಾಸವಾಗಿದ್ದು, ವಿಮಾನದಲ್ಲಿ ಹೊಗೆ ಎಂದು ಪ್ರಯಾಣಿಕರು ಆತಂಕ ವ್ಯಕ್ತಪಡಿಸಿದರೆ, ವಿಮಾನದ ಸಿಬ್ಬಂದಿ ದೇವರಲ್ಲಿ ಪ್ರಾರ್ಥಿಸಿ ಎಂದಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ಸ್ಪೈಸ್ ಜೆಟ್ ವಿಮಾನದಲ್ಲಿ ಹೊಗೆ
ಸ್ಪೈಸ್ ಜೆಟ್ ವಿಮಾನದಲ್ಲಿ ಹೊಗೆ

ಹೈದರಾಬಾದ್: ಇತ್ತೀಚಿಗೆ ಹೈದರಾಬಾದ್ ನಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದ ಸ್ಪೈಸ್ ಜೆಟ್ ವಿಮಾನ ಇದೀಗ ಭಾರಿ ಸುದ್ದಿಗೆ ಗ್ರಾಸವಾಗಿದ್ದು, ವಿಮಾನದಲ್ಲಿ ಹೊಗೆ ಎಂದು ಪ್ರಯಾಣಿಕರು ಆತಂಕ ವ್ಯಕ್ತಪಡಿಸಿದರೆ, ವಿಮಾನದ ಸಿಬ್ಬಂದಿ ದೇವರಲ್ಲಿ ಪ್ರಾರ್ಥಿಸಿ ಎಂದಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ಹೌದು.. ಗೋವಾ-ಹೈದರಾಬಾದ್ ಮಾರ್ಗದ ಸ್ಪೈಸ್‌ಜೆಟ್ ವಿಮಾನದಲ್ಲಿ ಮಾರ್ಗ ಮಧ್ಯೆ ಹೊಗೆ ತುಂಬಿಕೊಂಡಿದ್ದು, ಇದರಿಂದ ಗಾಬರಿಯಾದ ಪ್ರಯಾಣಿಕರು ಕೂಡಲೇ ವಿಮಾನದ ಸಿಬ್ಬಂದಿಗೆ ವಿಷಯ ತಿಳಿಸಿದ್ದಾರೆ. ಆದರೆ ಅದಾಗಲೇ ಅಪಾಯ ಮುನ್ಸೂಚನೆಯನ್ನು ಎಟಿಸಿ ಟವರ್ ಗೆ ನೀಡಿದ್ದ ಸಿಬ್ಬಂದಿ ವಿಮಾನವನ್ನು ಹೈದರಾಬಾದ್ ನಲ್ಲಿ ತುರ್ತು ಭೂಸ್ಪರ್ಶ ಮಾಡಲು ಸನ್ನದ್ಧರಾಗಿದ್ದರು. ಈ ವೇಳೆ ಪ್ರಯಾಣಿಕರ ಆತಂಕ ಶಮನಕ್ಕೆ ಮುಂದಾದ ಸಿಬ್ಬಂದಿ ದೇವರ ಪ್ರಾರ್ಥಿಸಿಕೊಳ್ಳಿ ಎಂದು ಹೇಳಿದ್ದಾರೆ. ಈ ಕುರಿತ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ಇನ್ನು ಘಟನೆ ಸಂಬಂಧ ಸ್ಪಷ್ಟನೆ ನೀಡಿರುವ ಸ್ಪೈಸ್ ಜೆಟ್ ವಿಮಾನಯಾನ ಸಂಸ್ಥೆ, ತನ್ನ ಕ್ಯೂ400 ವಿಮಾನವು ಅಕ್ಟೋಬರ್ 12 ರಂದು ತನ್ನ ಗಮ್ಯಸ್ಥಾನದಲ್ಲಿ ಸುರಕ್ಷಿತವಾಗಿ ಇಳಿಯಿತು ಮತ್ತು ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಇಳಿಸಲಾಗಿದೆ ಎಂದು ಸಮರ್ಥಿಸಿಕೊಂಡಿದೆ.

ಆದರೆ ತುರ್ತು ಭೂಸ್ಪರ್ಶವೇಳೆ ಓರ್ವ ಮಹಿಳಾ ಪ್ರಯಾಣಿಕರು ಗಾಯಗೊಂಡಿದ್ದಾರೆ ಎನ್ನಲಾಗಿದ್ದು, ಅವರನ್ನು ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ವೈದ್ಯಕೀಯ ಕೇಂದ್ರಕ್ಕೆ ರವಾನಿಸಲಾಗಿದೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ. 

ವಿಮಾನದ ಕ್ಯಾಬಿನ್ ನಲ್ಲಿ ಹೊಗೆ ತುಂಬಿಕೊಂಡಿದ್ದ ಕಾರಣ ಮಹಿಳೆ ಉಸಿರಾಟದ ತೊಂದರೆ ಅನುಭವಿಸಿದ್ದರು. ಬಳಿಕ ಅವರನ್ನು ಜುಬಿಲಿ ಹಿಲ್ಸ್‌ನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿ ಡಿಸ್ಚಾರ್ಜ್ ಮಾಡಲಾಗಿದೆ ಎನ್ನಲಾಗಿದೆ.  

ದೇವರಲ್ಲಿ ಪ್ರಾರ್ಥಿಸಿ ಎಂದ ಸಿಬ್ಬಂದಿ
ಇನ್ನು ಎಸ್‌ಜೆ (ಸ್ಪೈಸ್ ಜೆಟ್) 3735 ವಿಮಾನದಲ್ಲಿ ಹೊಗೆ ತುಂಬಿದ ಘಟನೆಯನ್ನು ವಿವರಿಸಿದ ಪ್ರಯಾಣಿಕರೊಬ್ಬರು,  ತಮ್ಮ ಜೀವ ಭಯದಲ್ಲಿದೆ ಎಂದಾಗ ಅವರು (ಸಿಬ್ಬಂದಿ ಸದಸ್ಯರು) ನಮಗೆ ದೇವರನ್ನು ಪ್ರಾರ್ಥಿಸಲು ಹೇಳಿದರು ... ನಮ್ಮ ಕುಟುಂಬಗಳಿಗಾಗಿ ಪ್ರಾರ್ಥಿಸಿ ...ಎಂದು ಹೇಳಿದರು. ಇದು ನಿಜಕ್ಕೂ ಆಘಾತಕಾರಿ ಮತ್ತು ದುಃಖಕರವಾಗಿತ್ತು. ನನ್ನ ಅನೇಕ ಸಹ-ಪ್ರಯಾಣಿಕರು ಭಯಭೀತರಾದರು ಮತ್ತು ಕಿರುಚಲು ಪ್ರಾರಂಭಿಸಿದರು ಎಂದು ಹೈದರಾಬಾದ್‌ನ ಐಟಿ ವೃತ್ತಿಪರ ಶ್ರೀಕಾಂತ್ ಎಂ ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ. 

ಅಂತೆಯೇ ವಿಮಾನದ ಒಳಗೆ ತೆಗೆದ ಛಾಯಾಚಿತ್ರಗಳು ಮತ್ತು ವೀಡಿಯೊಗಳನ್ನು ಅವರು ಹಂಚಿಕೊಂಡಿದ್ದು, ವಿಡಿಯೋವನ್ನು ಕೂಡಲೇ ಡಿಲೀಟ್ ಮಾಡುವಂತೆ ಸಿಬ್ಬಂದಿ ಕೇಳಿದರು. ಆದರೆ ನಾನು ಮಾಡಲಿಲ್ಲ. ಈ ವೇಳೆ ನನ್ನ ಫೋನ್ ಕಸಿದುಕೊಂಡರು ಎಂದು ಶ್ರೀಕಾಂತ್ ಹೇಳಿದ್ದಾರೆ.

ಅಂತೆಯೇ ಇದೇ ವಿಚಾರವಾಗಿ ತಮ್ಮ ಅನುಭವ ಹಂಚಿಕೊಂಡಿರುವ ಮತ್ತೋರ್ವ ಪ್ರಯಾಣಿಕ ಖಾಸಗಿ ಕಂಪನಿ ಉದ್ಯೋಗಿ ಅನಿಲ್ ಪಿ ಅವರು, ವಿಮಾನದ ವಾಶ್ ರೂಂನಲ್ಲಿ ಏನೋ ಆಗಿತ್ತು. ಸಿಬ್ಬಂದಿ ಮೌನವಾಗಿ ಮಾತನಾಡುವುದನ್ನು ನಾವು ಕೇಳಿದ್ದೇವೆ. ಇದಾದ ಕೇವಲ 20 ನಿಮಿಷಗಳ ಅವಧಿಯಲ್ಲಿ ಇಡೀ ವಿಮಾನದೊಳಗೆ ಹೊಗೆ ತುಂಬಿಕೊಂಡಿತು. ಇದಾದ ಕೂಡಲೇ ವಿಮಾನದಲ್ಲಿ ಲೈಟ್ ಗಳು ಆನ್ ಆದವು. ಈ ವೇಳೆ ವಿಮಾನದಲ್ಲಿ ಮಾತನಾಡುವುದನ್ನು ನಿಲ್ಲಿಸಿ, ಸೀಟ್ ಬಿಟ್ಟು ಎಲ್ಲಿಗೂ ಹೋಗಬೇಡಿ ಎಂದ ಸಿಬ್ಬಂದಿ, ವಿಮಾನ ತುರ್ತು ಭೂಸ್ಪರ್ಶವಾದ ಕೂಡಲೇ ತುರ್ತು ಬಾಗಿಲು ತೆರೆದ ತಕ್ಷಣ ಜಿಗಿದು ಓಡಿ ಎಂದರು ಎಂದು ಹೇಳಿದ್ದಾರೆ.

DGCA ಇತ್ತೀಚೆಗೆ ಸ್ಪೈಸ್‌ಜೆಟ್ ವಿಮಾನಗಳ ಮೇಲಿನ 50% ಮಿತಿಯನ್ನು ಇನ್ನೊಂದು ತಿಂಗಳು ವಿಸ್ತರಿಸಿದ್ದು, ವರದಿಯ ಪ್ರಕಾರ, ಈ ವರ್ಷ ವಿಮಾನಯಾನ ಸಂಸ್ಥೆಯು ಕನಿಷ್ಠ ಎಂಟು ವಿಮಾನ ಸಂಬಂಧಿತ ಅವಘಡ ಘಟನೆಗಳನ್ನು ನಡೆದಿವೆ. ಹಾಲಿ ಪ್ರಕರಣದ ಕುರಿತೂ ಡಿಸಿಜಿಎ ತನಿಖೆಗೆ ಆದೇಶ ನೀಡಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com