'ಪಿಎಂ ಕಿಸಾನ್ ಸಮ್ಮಾನ್ ಸಮ್ಮೇಳನ'ಕ್ಕೆ ಪ್ರಧಾನಿ ಮೋದಿ ಚಾಲನೆ: 12ನೇ ಕಂತಿನ ಹಣ ಬಿಡುಗಡೆ
ಪಿಎಂ ಕಿಸಾನ್ ಸಮ್ಮಾನ್ ಸಮ್ಮೇಳನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಸೋಮವಾರ ಚಾಲನೆ ನೀಡಿದ್ದು, ಕಿಸಾನ್ ಸಮ್ಮಾನ್ ಯೋಜನೆಯಡಿ 12ನೇ ಕಂತಿನ ಹಣವನ್ನು ರೈತರಿಗೆ ಬಿಡುಗಡೆ ಮಾಡಿದರು.
Published: 17th October 2022 01:11 PM | Last Updated: 17th October 2022 02:01 PM | A+A A-

ಪ್ರಧಾನಿ ಮೋದಿ
ನವದೆಹಲಿ: ಪಿಎಂ ಕಿಸಾನ್ ಸಮ್ಮಾನ್ ಸಮ್ಮೇಳನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಸೋಮವಾರ ಚಾಲನೆ ನೀಡಿದ್ದು, ಕಿಸಾನ್ ಸಮ್ಮಾನ್ ಯೋಜನೆಯಡಿ 12ನೇ ಕಂತಿನ ಹಣವನ್ನು ರೈತರಿಗೆ ಬಿಡುಗಡೆ ಮಾಡಿದರು.
ಈ ಕಂತಿನಲ್ಲಿ ಸುಮಾರು 8 ಲಕ್ಷ ರೈತರ ಖಾತೆಗಳಿಗೆ 16 ಸಾವಿರ ಕೋಟಿ ರೂಪಾಯಿ ಜಮೆಯಾಗಿದೆ. ಪಿಎಂ ಕಿಸಾನ್ ಸಮ್ಮಾನ್ ಸಮ್ಮೇಳನಕ್ಕೆ ಚಾಲನೆ ನೀಡಿದ ಬಳಿಕ ಮೋದಿಯವರು, 600 ಪಿಎಂ ಕಿಸಾನ್ ಸಮೃದ್ಧಿ ಕೇಂದ್ರಗಳಿಗೆ ಮೋದಿ ಚಾಲನೆ ನೀಡಿದರು.
ಒಂದು ದೇಶ ಒಂದು ಗೊಬ್ಬರ ಹೆಸರಿನಲ್ಲಿ ಭಾರತ್ ಯೂರಿಯಾ, ಭಾರತ್ ಡಿಎಪಿ, ಭಾರತ್ ಎಂಓಪಿ, ಭಾರತ್ ಎನ್‍ಪಿಕೆ ರಸಗೊಬ್ಬರವನ್ನು ಲೋಕಾರ್ಪಣೆ ಮಾಡಿದರು. ಈ ವೇಳೆ ಸಾವಿರಾರು ರೈತರು ಸಮಾರಂಭದ ಸ್ಥಳದಲ್ಲಿ ಹಾಜರಿದ್ದರು. ಅಲ್ಲದೆ, ವಿವಿಧ ಸಂಘ-ಸಂಸ್ಥೆಗಳ ಒಂದು ಕೋಟಿಗೂ ಹೆಚ್ಚು ರೈತರು ಕಾರ್ಯಕ್ರಮದಲ್ಲಿ ವರ್ಚುವಲ್ ಆಗಿ ಭಾಗಿಯಾಗಿದ್ದರು.
ಬಳಿಕ ರೈತರನ್ನು ಉದ್ದೇಶಿಸಿ ಮಾತನಾಡಿದ ಮೋದಿಯವರು, ಭಾರತ್ ಮಾತಾ ಕೀ ಜೈ, ಜೈ ಜವಾನ್ ಜೈ ಕಿಸಾನ್ ಘೋಷಣೆ ಮೊಳಗಿಸಿದರು.
ಇದನ್ನೂ ಓದಿ: 75 ಜಿಲ್ಲೆಗಳಲ್ಲಿ 75 ಡಿಜಿಟಲ್ ಬ್ಯಾಂಕಿಂಗ್ ಘಟಕಗಳನ್ನು ದೇಶಕ್ಕೆ ಸಮರ್ಪಿಸಿದ ಪ್ರಧಾನಿ ನರೇಂದ್ರ ಮೋದಿ
ದೇಶದ ಮೂಲೆ ಮೂಲೆಗಳಿಂದ ಕೋಟ್ಯಂತರ ಸಂಖ್ಯೆಯಲ್ಲಿ ರೈತರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ರೈತರನ್ನು ಮತ್ತು ಕೃಷಿಯನ್ನು ಸಮೃದ್ಧಗೊಳಿಸುವ ನಿಟ್ಟಿನಲ್ಲಿ ನಾವು ಅನೇಕ ಕ್ರಮಗಳನ್ನು ಕೈಗೊಂಡಿದ್ದೇವೆ. ಇಂದು ದೇಶದಲ್ಲಿ 600ಕ್ಕೂ ಹೆಚ್ಚು ಪಿಎಂ ಕಿಸಾನ್ ಸಮೃದ್ಧಿ ಕೇಂದ್ರಗಳು ಆರಂಭಗೊಂಡಿವೆ ಎಂದು ಹೇಳಿದರು.
ಪಿಎಂ ಕಿಸಾನ್ ಸಮೃದ್ಧಿ ಕೇಂದ್ರಗಳನ್ನು ಮಾದರಿ ಕೇಂದ್ರಗಳನ್ನಾಗಿ ರೂಪಿಸಲಾಗುತ್ತಿದೆ. ಇದು ಸಂಪೂರ್ಣವಾಗಿ ರೈತರ ಜತೆಗಿರಲಿದೆ. ಅವರ ಎಲ್ಲ ಸವಾಲುಗಳಿಗೂ ಉತ್ತರ ನೀಡಲಿದೆ. ಇದೇ ಸಂದರ್ಭದಲ್ಲಿ 8 ಲಕ್ಷ ರೈತರ ಖಾತೆಗಳಿಗೆ 16 ಸಾವಿರ ಕೋಟಿ ರೂಪಾಯಿಯನ್ನು ಜಮೆ ಮಾಡಲಾಗಿದೆ. ದಿಪಾವಳಿ ಹಬ್ಬಕ್ಕೂ ಮುನ್ನ ಕಂತನ್ನು ವರ್ಗಾವಣೆ ಮಾಡಲಾಗಿದೆ. ಎಲ್ಲ ರೈತರಿಗೂ ಅಭಿನಂದನೆಗಳು ಎಂದು ತಿಳಿಸಿದರು.
ಒಂದು ದೇಶ ಒಂದು ಗೊಬ್ಬರ ಯೋಜನೆಯಡಿ ಭಾರತವು ರಸಗೊಬ್ಬರ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವತ್ತ ಮುನ್ನಗ್ಗಲಿದೆ. ಯೂರಿಯಾ ಉತ್ಪಾದನೆ ಹೆಚ್ಚಳಕ್ಕೆ ಸರ್ಕಾರ ಆದ್ಯತೆ ನೀಡುತ್ತಿದೆ. ಈ ಮೂಲಕ ರೈತರ ಸಮಸ್ಯೆಗಳನ್ನು ನಿವಾರಿಸಲು ಯತ್ನಿಸಲಾಗಿದೆ ಎಂದರು.