ಘಾಜಿಯಾಬಾದ್'ನಲ್ಲಿ ನಿರ್ಭಯಾ ಮಾದರಿ ಕೃತ್ಯ: ದೆಹಲಿ ಮಹಿಳೆ ಮೇಲೆ ಐವರಿಂದ ಸಾಮೂಹಿಕ ಅತ್ಯಾಚಾರ

40 ವರ್ಷದ ಮಹಿಳೆಯನ್ನು ಅಪಹರಿಸಿದ ಐವರು ಕಾಮುಕರು, ಆಕೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಎರಡು ದಿನಗಳ ಕಾಲ ಕ್ರೂರವಾಗಿ ಚಿತ್ರಹಿಂಸೆ ನೀಡಿದ ಘಟನೆ ಘಾಜಿಯಾಬಾದ್ ನಲ್ಲಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: 40 ವರ್ಷದ ಮಹಿಳೆಯನ್ನು ಅಪಹರಿಸಿದ ಐವರು ಕಾಮುಕರು, ಆಕೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಎರಡು ದಿನಗಳ ಕಾಲ ಕ್ರೂರವಾಗಿ ಚಿತ್ರಹಿಂಸೆ ನೀಡಿದ ಘಟನೆ ಘಾಜಿಯಾಬಾದ್ ನಲ್ಲಿ ನಡೆದಿದೆ. 

ಅತ್ಯಾಚಾರಕ್ಕೊಳಗಾದ ಮಹಿಳೆ ದೆಹಲಿ ಮೂಲದ ನಿವಾಸಿಯಾಗಿದ್ದು, ಬರ್ತ್ ಡೇ ಪಾರ್ಟಿಗೆಂದು ಸಹೋದರನ ಮನೆಗೆ ಬಂದಿದ್ದರು. ಪಾರ್ಟಿ ಮುಗಿದ ಬಳಿಕ ಮಹಿಳೆಯನ್ನು ಆಕೆಯ ಸಹೋದರ ಬಸ್ ನಿಲ್ದಾಣಕ್ಕೆ ಬಿಟ್ಟು ಹೋಗಿದ್ದಾನೆ. ಈ ವೇಳೆ ಕಾರಿನಲ್ಲಿ ಬಂದಿರುವ ಕಾಮುಕರು ಆಕೆಯನ್ನು ಅಪಹರಣ ಮಾಡಿದ್ದಾರೆ. 

ನಂತರ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ. ನಿರ್ಭಯಾ ಅತ್ಯಾಚಾರ ಮಾದರಿಯಲ್ಲಿ ಈ ಕೃತ್ಯ ಕೂಡ ನಡೆದಿದ್ದು, ದೆಹಲಿ ಜನತೆಯಲ್ಲಿ ಮತ್ತೆ ಆತಂಕ ಸೃಷ್ಟಿ ಮಾಡಿದೆ. 

ದೆಹಲಿ ಮತ್ತು ಗಾಜಿಯಾಬಾದ್ ಅನ್ನು ಸಂಪರ್ಕಿಸುವ ಆಶ್ರಮ ರಸ್ತೆಯ ಬಳಿ ಮಹಿಳೆಯೊಬ್ಬರು ಬಿದ್ದಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿದ್ದು, ಕೂಡಲೇ ಸ್ಥಳಕ್ಕೆ ತೆರಳಿದ ಪೊಲೀಸರು ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. 

ಪ್ರಕರಣ ಸಂಬಂಧ ಘಾಜಿಯಾಬಾದ್ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ. 

ಈ ನಡುವೆ ಪ್ರಕರಣ ಸಂಬಂಧ ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥ ಸ್ವಾತಿ ಮಲಿವಾಲ್ ಅವರು ಟ್ವೀಟ್ ಮಾಡಿದ್ದು, ಮಹಿಳೆಯ ಸ್ಥಿತಿ ಬಹಳ ಗಂಭೀರವಾಗಿದೆ. ಒಂದು ಕಬ್ಬಿಣದ ರಾಡು ಇನ್ನೂ ಆಕೆಯ ದೇಹದ ಒಳಗೆ ಇದೆ ಎಂದು ಹೇಳಿದ್ದಾರೆ. 

ಘಾಜಿಯಾಬಾದ್ ಪೊಲೀಸರಿಗೆ ನೋಟಿಸ್ ಜಾರಿ: ಮಾಹಿತಿ ನೀಡಲು ಸೂಚನೆ
ಈ ನಡುವೆ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ದೆಹಲಿ ಮಹಿಳಾ ಆಯೋಗ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದು, ಘಾಜಿಯಾಬಾದ್ ಪೊಲೀಸರಿಗೆ ನೋಟಿಸ್ ಜಾರಿ ಮಾಡಿ ವಿವರ ನೀಡುವಂತೆ ಸೂಚಿಸಿದೆ. 

ಘಟನೆಯು ಅತ್ಯಂತ ಭಯಾನಕ ಮತ್ತು ಆತಂಕಕಾರಿಯಾಗಿದೆ. ಇದು ನನಗೆ ನಿರ್ಭಯಾ ಪ್ರಕರಣವನ್ನು ನೆನಪಿಸುತ್ತಿದೆ. ಎಲ್ಲಾ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಮತ್ತು ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಮಹಿಳೆಯರು ಮತ್ತು ಮಕ್ಕಳು ಎಷ್ಟು ಪ್ರಮಾಣದಲ್ಲಿ ತೀವ್ರ ಕ್ರೌರ್ಯಕ್ಕೆ ಒಳಗಾಗುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವಲ್ಲಿ ನಾನು ವಿಫಲವಾಗಿದ್ದೇನೆ. 

ದೆಹಲಿ ಮಹಿಳೆಯು ರಾತ್ರಿ ಗಾಜಿಯಾಬಾದ್‌ನಿಂದ ಮರಳುತ್ತಿದ್ದರು. ಅವರನ್ನು ಕಾರಿನಲ್ಲಿ ಬಲವಂತವಾಗಿ ಎಳೆದುಕೊಂಡು ಹೋಗಲಾಗಿತ್ತು. ಐದು ಮಂದಿ ಆಕೆಯ ಮೇಲೆ ಎರಡು ದಿನ ಅತ್ಯಾಚಾರ ನಡೆಸಿದ್ದಲ್ಲದೆ, ಆಕೆಯ ಖಾಸಗಿ ಅಂಗಗಳಿಗೆ ರಾಡ್ ತುರುಕಿದ್ದರು. ಆಕೆ ರಸ್ತೆ ಪಕ್ಕದಲ್ಲಿ ಗೋಣಿ ಚೀಲವೊಂದರಲ್ಲಿ ಪತ್ತೆಯಾದಾಗ ರಾಡು ಆಕೆಯ ಒಳಗೇ ಇತ್ತು. ಸಾವು ಬದುಕಿನ ನಡುವೆ ಅವರು ಆಸ್ಪತ್ರೆಯಲ್ಲಿ ಹೋರಾಡುತ್ತಿದ್ದರು. ಗಾಜಿಯಾಬಾದ್‌ ಎಸ್‌ಎಸ್‌ಪಿ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಸ್ವಾತಿ ಮಲಿವಾಲ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com