ಕೊಯಮತ್ತೂರು ಕಾರು ಸ್ಫೋಟ ಪ್ರಕರಣ: ಐವರ ಬಂಧನ, ಅಪಾರ ಪ್ರಮಾಣದ ಸ್ಫೋಟಕ ವಸ್ತುಗಳ ವಶ

ಕೋಮು ಸೂಕ್ಷ್ಮ ಪ್ರದೇಶವಾದ ಕೊಟ್ಟೈಮೇಡುವಿನ ಸಂಗಮೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಭಾನುವಾರ ಸಂಭವಿಸಿದ ಕಾರು ಸ್ಫೋಟದಲ್ಲಿ 29 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟ ನಂತರ ಕಾರು ಸ್ಫೋಟಕ್ಕೆ ಸಂಬಂಧಿಸಿದಂತೆ ಕೊಯಮತ್ತೂರು ನಗರ ಪೊಲೀಸರು ಐವರನ್ನು ಮಂಗಳವಾರ ಬಂಧಿಸಿದ್ದಾರೆ.
ಸ್ಫೋಟಗೊಂಡಿದ್ದ ಕಾರು
ಸ್ಫೋಟಗೊಂಡಿದ್ದ ಕಾರು
Updated on

ಕೊಯಮತ್ತೂರು: ಕೋಮು ಸೂಕ್ಷ್ಮ ಪ್ರದೇಶವಾದ ಕೊಟ್ಟೈಮೇಡುವಿನ ಸಂಗಮೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಭಾನುವಾರ ಸಂಭವಿಸಿದ ಕಾರು ಸ್ಫೋಟದಲ್ಲಿ 29 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟ ನಂತರ ಕಾರು ಸ್ಫೋಟಕ್ಕೆ ಸಂಬಂಧಿಸಿದಂತೆ ಕೊಯಮತ್ತೂರು ನಗರ ಪೊಲೀಸರು ಐವರನ್ನು ಮಂಗಳವಾರ ಬಂಧಿಸಿದ್ದಾರೆ.

ಎ. ಜಮೀಶಾ ಮುಬಿನ್ (29) ಸ್ಫೋಟದಲ್ಲಿ ಸುಟ್ಟು ಕರಕಲಾಗಿದ್ದರು. ವಾಹನದಲ್ಲಿ ಮೊಳೆಗಳು, ಬೇರಿಂಗ್ ಬಾಲ್‌ಗಳು, ಗಾಜಿನ ಉಂಡೆಗಳು (ಗೋಲಿ ಆಕಾರ), ಸ್ಫೋಟಗೊಳ್ಳದ ಎಲ್‌ಜಿಪಿ ಸಿಲಿಂಡರ್ ಮತ್ತು ಇತರ ಕೆಲವು ವಸ್ತುಗಳು ಪತ್ತೆಯಾಗಿವೆ.

ಮೊದಲಿಗೆ ಎಲ್‌ಪಿಜಿ ಸಿಲಿಂಡರ್ ಸ್ಫೋಟಕ್ಕೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿತ್ತು. ಆದರೆ, ಮೃತರ ನಿವಾಸದಲ್ಲಿ ನಡೆಸಿದ ಶೋಧದಲ್ಲಿ ಪೊಟ್ಯಾಸಿಯಮ್ ನೈಟ್ರೇಟ್, ಅಲ್ಯುಮಿನಿಯಂ ಪೌಡರ್, ಸಲ್ಫರ್ ಮತ್ತು ಇದ್ದಿಲು ಸೇರಿದಂತೆ ದೊಡ್ಡ ಪ್ರಮಾಣದ ಕಡಿಮೆ ತೀವ್ರತೆಯ ಸ್ಫೋಟಕಗಳು ಪತ್ತೆಯಾಗಿವೆ.

ಸ್ಫೋಟಕಗಳನ್ನು ತಯಾರಿಸಲು ಬಳಸುವ ಕಡಿಮೆ ತೀವ್ರತೆಯ ಸ್ಫೋಟಕ ವಸ್ತುವನ್ನು ಮುಬಿನ್ ಅವರ ಮನೆಯಿಂದ ವಶಪಡಿಸಿಕೊಳ್ಳಲಾಗಿದೆ. ಅವರ ಮನೆಯಲ್ಲಿನ ವಸ್ತುಗಳನ್ನು ನೋಡಿದರೆ, ಇದು ಭವಿಷ್ಯದಲ್ಲಿ ಸಂಭವನೀಯ ಯೋಜನೆಗೆ ಉದ್ದೇಶಿಸಿರಬಹುದು ಎಂದು ಡಿಜಿಪಿ ಸಿ. ಶೈಲೇಂದ್ರ ಬಾಬು ಭಾನುವಾರ ಹೇಳಿದ್ದಾರೆ.

ಕೊಯಮತ್ತೂರು ನಗರ ಪೊಲೀಸರು ಹೆಚ್ಚಿನ ತನಿಖೆಗಾಗಿ ಸೆಕ್ಷನ್ 174 ಸಿಆರ್‌ಪಿಸಿ (ಅಸ್ವಾಭಾವಿಕ ಸಾವು) ಮತ್ತು ಸ್ಫೋಟಕ ವಸ್ತುಗಳ ಕಾಯ್ದೆಯ ಸೆಕ್ಷನ್ 3 (ಎ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ನಗರದಲ್ಲಿ ನಡೆದ ಸ್ಫೋಟ ಪ್ರಕರಣದ ತನಿಖೆಯನ್ನು ಪೊಲೀಸರು ತೀವ್ರಗೊಳಿಸಿದ್ದು, ಮೃತ ವ್ಯಕ್ತಿ ಕೆಲವು ಜನರೊಂದಿಗೆ ಸಂಪರ್ಕ ಹೊಂದಿದ್ದರು. ಅಲ್ಲದೆ, ಕೊಟ್ಟೈಮೇಡುವಿನ ಎಚ್‌ಎಂಪಿಆರ್‌ನಲ್ಲಿರುವ ಮೆಬಿನ್ ಅವರ ಮನೆಯ ಸುತ್ತಲಿನ ಸಿಸಿಟಿವಿ ದೃಶ್ಯಾವಳಿಗಳಲ್ಲಿ, ಮನೆಯಿಂದ ಶನಿವಾರ ರಾತ್ರಿ 11.25ರ ಸುಮಾರಿಗೆ ಮುಬಿನ್ ಅವರ ಮನೆಯಿಂದ ಐವರು ಗೋಣಿ ಚೀಲವನ್ನು ತೆಗೆದುಕೊಂಡು ಹೋಗುತ್ತಿರುವುದು ಮನೆಯ ಸಮೀಪವಿರುವ ಸಿಸಿಟಿವಿ ದೃಶ್ಯಾವಳಿಗಳು ತೋರಿಸಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಬಿನ್ ಜೊತೆಗಿನ ಸಂಪರ್ಕದ ಆಧಾರದ ಮೇಲೆ, ಸೋಮವಾರ ಮತ್ತೆ ಐದು ಜನರನ್ನು ಬಂಧಿಸಲಾಗಿದೆ. ಬಂಧಿತರನ್ನು ಮೊಹಮ್ಮದ್ ಧಾಲ್ಹಾ(25), ಮೊಹಮ್ಮದ್ ರಿಯಾಜ್ (27), ಫಿರೋಜ್ ಇಸ್ಮಾಯಿಲ್ (27), ಜಿಎಂ ನಗರದ ಮೊಹಮ್ಮದ್ ನವಾಸ್ ಇಸ್ಮಾಯಿಲ್, ಉಕ್ಕಡಂನ ಮೊಹಮ್ಮದ್ ಅಜರುದ್ದೀನ್ (23) ಎಂದು ಗುರುತಿಸಲಾಗಿದೆ. ರಾತ್ರಿ ಅವರನ್ನು ಬಂಧಿಸಲಾಗಿದ್ದು, ಇಂದು ರಿಮಾಂಡ್‌ಗೆ ನೀಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಅಜರುದ್ದೀನ್ ಮುಬಿನ್‌ನ ಸೋದರಸಂಬಂಧಿಯಾಗಿದ್ದು, ಆತನೇ ಮುಬಿನ್‌ಗೆ ಸಾಗಣೆಯನ್ನು ಏರ್ಪಡಿಸಿದ್ದನು. ಮೊಹಮ್ಮದ್ ಧಾಲ್ಹಾ ಅವರು ಕಾರ್ ವ್ಯವಸ್ಥೆ ಮಾಡಿದ್ದನು. ಸಿಸಿಟಿವಿ ದೃಶ್ಯಗಳಲ್ಲಿ ಸಿಕ್ಕ ಇತರ ಮೂವರು ರಿಯಾಜ್, ಫಿರೋಜ್ ಮತ್ತು ನವಾಸ್ ಕಾರಿನಲ್ಲಿ ಸಾಮಗ್ರಿಗಳನ್ನು ಲೋಡ್ ಮಾಡಲು ಮುಬಿನ್‌ಗೆ ಸಹಾಯ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಬಂಧಿತರು ಈ ಆರೋಪಗಳನ್ನು ನಿರಾಕರಿಸಿದ್ದು, ಮುಬಿನ್ ತನ್ನ ನಿವಾಸವನ್ನು ಬದಲಾಯಿಸಲು ಸಹಾಯ ಮಾಡಿದ್ದೇವೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಆದರೆ, ಮೃತ ಮುಬಿನ್ ಬಾಡಿಗೆ ಕಟ್ಟಡದ ಮೂರನೇ ಮಹಡಿಯಲ್ಲಿ ವಾಸವಿದ್ದ ಕಾರಣ ಇದಕ್ಕೆ ಅವಕಾಶವಿರಲಿಲ್ಲ ಮತ್ತು ನಾವು ಹುಡುಕಲು ಹೋದಾಗ ಸ್ಫೋಟಕ ವಸ್ತುಗಳ ವಾಸನೆಯು ವಿಪರೀತವಾಗಿತ್ತು. ಕಾರಿನಲ್ಲಿ ಯಾವ ವಸ್ತುಗಳನ್ನು ಲೋಡ್ ಮಾಡಲಾಗಿದೆ ಎಂಬುದು ಅವರಿಗೇ ತಿಳಿದಿರಬೇಕು ಎಂದು ಹಿರಿಯ ಪೊಲೀಸರು ತಿಳಿಸಿದ್ದಾರೆ.

ಮನೆಗಳನ್ನು ಬದಲಾಯಿಸುವಾಗ, ಮನೆಯ ಇತರ ವಸ್ತುಗಳನ್ನು ಮೊದಲು ಸ್ಥಳಾಂತರಿಸಲಾಗುತ್ತದೆ. ಎಲ್‌ಪಿಜಿ ಸಿಲಿಂಡರ್‌ಗಳು ಮತ್ತು ಅಂತಹ ಸ್ಫೋಟಕಗಳನ್ನು ಮೊದಲು ಸ್ಥಳಾಂತರಿಸಲು ಯಾರೂ ಬಯಸುವುದಿಲ್ಲ ಎಂದು ಅಧಿಕಾರಿ ಹೇಳಿದರು.

ಅವರು ಈ ಸ್ಫೋಟಕ ವಸ್ತುಗಳನ್ನು ಎಲ್ಲಿ ಖರೀದಿಸಿದ್ದಾರೆ, ಎಲ್ಲಿಗೆ ಅವುಗಳನ್ನು ಸ್ಥಳಾಂತರಿಸಲು ಪ್ರಯತ್ನಿಸಿದ್ದಾರೆ ಮತ್ತು ಯಾರ ನಿರ್ದೇಶನದ ಮೇರೆಗೆ ಈ ಕೆಲಸ ಮಾಡಿದ್ದಾರೆ ಎಂಬುದರ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ. ಈ ವಿಚಾರವಾಗಿ ತನಿಖೆ ನಡೆಸಲು ಬಂಧಿತ ಐವರನ್ನು ಮತ್ತೆ ತಮ್ಮ ಕಸ್ಟಡಿಗೆ ತೆಗೆದುಕೊಳ್ಳಲು ಪೊಲೀಸರು ಯೋಜಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com