ಉತ್ತರ ಪ್ರದೇಶ: ಸಹಾಯಕ್ಕಾಗಿ ಅಂಗಲಾಚಿದ ಅಪ್ರಾಪ್ತ ಅತ್ಯಾಚಾರ ಸಂತ್ರಸ್ಥೆ, ವಿಡಿಯೋ ಮಾಡುತ್ತಿದ್ದ ಸ್ಥಳೀಯರು

ಕನೌಜ್‌ನಲ್ಲಿರುವ ದಕ್ ಬಾಂಗ್ಲಾ ಅತಿಥಿ ಗೃಹದ ಹಿಂದೆ 12 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಲಾಗಿದ್ದು, ಬಾಲಕಿ ರಕ್ತ ಸಿಕ್ತವಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕನೂಜ್: ಕನೌಜ್‌ನಲ್ಲಿರುವ ದಕ್ ಬಾಂಗ್ಲಾ ಅತಿಥಿ ಗೃಹದ ಹಿಂದೆ 12 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಲಾಗಿದ್ದು, ಬಾಲಕಿ ರಕ್ತ ಸಿಕ್ತವಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಘಟನೆಯ ವಿಡಿಯೋದಲ್ಲಿ, ಸ್ಥಳೀಯರು ಗಂಭೀರವಾಗಿ ಗಾಯಗೊಂಡ ಹುಡುಗಿಗೆ ಸಹಾಯ ಮಾಡುವ ಬದಲು ವಿಡಿಯೋ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಬಾಲಕಿಯ ತಲೆ ಸೇರಿದಂತೆ ಇತರೆ ಭಾಗಗಳಲ್ಲಿ ಗಾಯಗಳಾಗಿವೆ.

ವಿಡಿಯೋದಲ್ಲಿ, 'ಹುಡುಗಿ ತನ್ನ ಕೈಯನ್ನು ಚಾಚುವ ಮೂಲಕ ಸಹಾಯಕ್ಕಾಗಿ ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಆದರೆ, ಆಕೆಯ ಮನವಿಗೆ ಯಾರೊಬ್ಬರೂ ಸ್ಪಂದಿಸಿಲ್ಲ. ಬದಲಿಗೆ ಪುರುಷರ ಗುಂಪೊಂದು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಆಕೆಯ ವಿಡಿಯೋ ರೆಕಾರ್ಡ್ ಮಾಡುತ್ತಿರುವುದು ಕಂಡುಬಂದಿದೆ.

ಪೊಲೀಸರಿಗೆ ಮಾಹಿತಿ ನೀಡಿದ್ದೀರಾ ಎಂದು ಕೆಲವರು ಕೇಳುತ್ತಿದ್ದಾರೆ. ಮತ್ತೊಬ್ಬರು ಪೊಲೀಸ್ ಮುಖ್ಯಸ್ಥರ ಫೋನ್ ನಂಬರ್ ಅನ್ನು ಕೇಳುತ್ತಾರೆ. ಆದರೆ, ಹುಡುಗಿಗೆ ಸಹಾಯ ಮಾಡುವ ಬದಲು ವಿಡಿಯೋ ರೆಕಾರ್ಡ್ ಮಾಡುವುದು ಮುಂದುವರೆಯಿತು. ಸ್ಥಳಕ್ಕೆ ಪೊಲೀಸರು ಬರುವವರೆಗೂ ಬಾಲಕಿ ಸಹಾಯಕ್ಕಾಗಿ ಕಾಯಬೇಕಾಯಿತು.

ವೈರಲ್ ಆದ ಎರಡನೇ ವಿಡಿಯೋದಲ್ಲಿ, ಸ್ಥಳೀಯ ಪೊಲೀಸ್ ಔಟ್‌ಪೋಸ್ಟ್ ಇನ್‌ಚಾರ್ಜ್ ಗಾಯಗೊಂಡ ಹುಡುಗಿಯನ್ನು ತನ್ನ ತೋಳುಗಳಲ್ಲಿ ಎತ್ತಿಕೊಂಡು ಆಟೋರಿಕ್ಷಾದ ಕಡೆಗೆ ಧಾವಿಸುತ್ತಿರುವುದನ್ನು ತೋರಿಸಿದೆ.

ಅಪ್ರಾಪ್ತೆ ಗಾಯಗೊಂಡಿರುವುದರಿಂದ ಸ್ಥಳೀಯ ಪೊಲೀಸರು ಆಕೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಬಾಲಕಿಯ ಕುಟುಂಬದವರು ನೀಡಿದ ದೂರಿನ ಆಧಾರದ ಮೇಲೆ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಪ್ರಕರಣದಲ್ಲಿ ಇನ್ನೂ ಯಾರನ್ನೂ ಬಂಧಿಸಲಾಗಿಲ್ಲ ಎಂದು ಪೊಲೀಸ್ ವರಿಷ್ಠಾಧಿಕಾರಿ ಕುನ್ವರ್ ಅನುಪಮ್ ಸಿಂಗ್ ತಿಳಿಸಿದ್ದಾರೆ.

ಬಾಲಕಿಯ ಮನೆಯವರ ಪ್ರಕಾರ, ಬಾಲಕಿ ಮಧ್ಯಾಹ್ನ ಹುಂಡಿಯೊಂದನ್ನು ಖರೀದಿಸಲು ಹೊರಗೆ ಹೋಗಿದ್ದಳು. ಸಂಜೆಯವರೆಗೂ ಆಕೆ ಮನೆಗೆ ಬಾರದೇ ಇದ್ದಾಗ ಪೋಷಕರು ಆಕೆಗಾಗಿ ಹುಡುಕಾಟ ನಡೆಸಿದ್ದಾರೆ. ಬಳಿಕ ಅತಿಥಿಗೃಹದ ಹಿಂದೆ ಬಾಲಕಿ ರಕ್ತಸಿಕ್ತವಾಗಿ ಕಂಡುಬಂದಿದ್ದಳು.

ಸಂತ್ರಸ್ತೆಯನ್ನು ನಂತರ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಆಕೆಯನ್ನು ಪರೀಕ್ಷಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಕಾನ್ಪುರಕ್ಕೆ ಕಳುಹಿಸಿದ್ದಾರೆ. ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಎಸೆದಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಆದರೆ, ಪೊಲೀಸರು ನಿವಾಸಿಗಳ ವಾದವನ್ನು ನಿರಾಕರಿಸುತ್ತಿದ್ದಾರೆ.

ಗುರ್ಸಹೈಗಂಜ್ ಪೊಲೀಸ್ ಠಾಣೆಯ ಉಸ್ತುವಾರಿ ಮನೋಜ್ ಪಾಂಡೆ, ಈಗಲೇ ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ ಮತ್ತು ಪೊಲೀಸರು ಸಂತ್ರಸ್ತೆಯ ಹೇಳಿಕೆ ದಾಖಲಿಸಿಕೊಳ್ಳಲು ಕಾಯುತ್ತಿದ್ದಾರೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com