ಅಪಘಾತದಲ್ಲಿ ಸೈರಸ್ ಮಿಸ್ತ್ರಿ ಸಾವು: ಕಾರು ಚಲಾಯಿಸುತ್ತಿದ್ದ ಮಹಿಳೆ ಯಾರು ಗೊತ್ತಾ?
ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷ, ಖ್ಯಾತ ಉದ್ಯಮಿ ಸೈರಸ್ ಮಿಸ್ತ್ರಿ ಅವರು ಭಾನುವಾರ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟಿದ್ದು, ಅವರ ಕಾರನ್ನು ಮುಂಬೈನ ಖ್ಯಾತ ಸ್ತ್ರೀರೋಗತಜ್ಞರೊಬ್ಬರು ಚಾಲನೆ ಮಾಡುತ್ತಿದ್ದರು...
Published: 04th September 2022 10:29 PM | Last Updated: 05th September 2022 02:30 PM | A+A A-

ಸೈರಸ್ ಮಿಸ್ತ್ರಿ
ಮುಂಬೈ: ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷ, ಖ್ಯಾತ ಉದ್ಯಮಿ ಸೈರಸ್ ಮಿಸ್ತ್ರಿ ಅವರು ಭಾನುವಾರ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟಿದ್ದು, ಅವರ ಕಾರನ್ನು ಮುಂಬೈನ ಖ್ಯಾತ ಸ್ತ್ರೀರೋಗತಜ್ಞರೊಬ್ಬರು ಚಾಲನೆ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
54 ವರ್ಷದ ಮಿಸ್ತ್ರಿ ಅವರು ಇಂದು ಮಧ್ಯಾಹ್ನ ಅಹಮದಾಬಾದ್‌ನಿಂದ ಮುಂಬೈಗೆ ಮರ್ಸಿಡಿಸ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಅವರ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ.
ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ ಕಾರು ಅತಿವೇಗದಿಂದ ಚಲಿಸುತ್ತಿತ್ತು ಮತ್ತು ರಾಂಗ್ ಸೈಡ್ ನಿಂದ(ಎಡದಿಂದ) ಮತ್ತೊಂದು ವಾಹನವನ್ನು ಹಿಂದಿಕ್ಕಲು ಪ್ರಯತ್ನಿಸಿದ ವೇಳೆ ಈ ಅನಾಹುತ ಸಂಭವಿಸಿದೆ ಎಂದು ತಿಳಿದುಬಂದಿದೆ.
ಇದನ್ನು ಓದಿ: ಸೈರಸ್ ಮಿಸ್ತ್ರಿ ಸಾವು: 2021 ರಲ್ಲಿ ದೇಶದಲ್ಲಿ ಒಟ್ಟು 1.55 ಲಕ್ಷಕ್ಕೂ ಹೆಚ್ಚು ಜನ ಅಪಘಾತಕ್ಕೆ ಬಲಿ
ಅಪಘಾತದಲ್ಲಿ ಕಾರು ಚಲಾಯಿಸುತ್ತಿದ್ದ ಸ್ತ್ರೀರೋಗತಜ್ಞೆ ಅನಾಹಿತಾ ಪಾಂಡೋಲೆ(55) ಮತ್ತು ಅವರ ಪತಿ ಡೇರಿಯಸ್ ಪಾಂಡೋಲೆ(60) ಅವರು ಬದುಕುಳಿದಿದ್ದಾರೆ. ಸೈರಸ್ ಮಿಸ್ತ್ರಿ (54) ಮತ್ತು ಡೇರಿಯಸ್ ಪಾಂಡೋಲೆ ಅವರ ಸಹೋದರ ಜಹಾಂಗೀರ್ ಪಾಂಡೋಲೆ ಅವರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮಿಸ್ತ್ರಿ ಮತ್ತು ಜಹಾಂಗೀರ್ ಹಿಂಬದಿಯ ಸೀಟಿನಲ್ಲಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಡೇರಿಯಸ್, ಅನಾಹಿತಾ ಅವರೊಂದಿಗೆ ಮುಂಭಾಗದ ಸೀಟಿನಲ್ಲಿದ್ದರು. ಮಹಿಳೆ ಕಾರನ್ನು ಚಲಾಯಿಸುತ್ತಿದ್ದರು ಮತ್ತು ಎಡಭಾಗದಿಂದ ಮತ್ತೊಂದು ವಾಹನವನ್ನು ಹಿಂದಿಕ್ಕಲು ಪ್ರಯತ್ನಿಸಿದರು. ಆದರೆ ನಿಯಂತ್ರಣ ಕಳೆದುಕೊಂಡು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.
ರಸ್ತೆಬದಿಯ ಗ್ಯಾರೇಜ್‌ನಲ್ಲಿ ಕೆಲಸ ಮಾಡುವ ಪ್ರತ್ಯಕ್ಷದರ್ಶಿ, ಮರಾಠಿ ಟಿವಿ ಚಾನೆಲ್ ನೊಂದಿಗೆ ಮಾತನಾಡುತ್ತಾ, ನಾವು ಅಪಘಾತದ ಸ್ಥಳಕ್ಕೆ ಧಾವಿಸಿದೆವು. ಆದರೆ ವಾಹನ ಅಥವಾ ಗಾಯಗೊಂಡ ವ್ಯಕ್ತಿಗಳನ್ನು ಮುಟ್ಟಲಿಲ್ಲ. 10 ನಿಮಿಷಗಳಲ್ಲಿ ಪೊಲೀಸರು ಸಹಾಯಕ್ಕೆ ಧಾವಿಸಿದ ನಂತರ ಇಬ್ಬರು ಗಾಯಗೊಂಡ ವ್ಯಕ್ತಿಗಳನ್ನು ಕಾರಿನಿಂದ ಹೊರತೆಗೆಯಲಾಯಿತು ಮತ್ತು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಉಳಿದ ಇಬ್ಬರು ಸಾವನ್ನಪ್ಪಿದರು ಎಂದು ಅವರು ತಿಳಿಸಿದ್ದಾರೆ.
ಇದನ್ನು ಓದಿ: ಅಪಘಾತದಲ್ಲಿ ಮೃತಪಟ್ಟ ಟಾಟಾ ಸನ್ಸ್ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಬಗ್ಗೆ ಎಷ್ಟು ಗೊತ್ತು?
ಪ್ರಧಾನಿ ಮೋದಿ ಸಂತಾಪ
ಖ್ಯಾತ ಉದ್ಯಮಿಯಾಗಿದ್ದ ಸೈರಸ್ ಮಿಸ್ತ್ರಿ ಅವರ ಅಕಾಲಿಕ ನಿಧನಕ್ಕೆ ಪ್ರಧಾನ ಮಂತ್ರಿ ನರೇಂದ್ರಮೋದಿ ಕಂಬನಿ ಮಿಡಿದಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿದ ಪ್ರಧಾನಿ. “ಶ್ರೀ ಸೈರಸ್ ಮಿಸ್ತ್ರಿಯವರ ಅಕಾಲಿಕ ನಿಧನ ಆಘಾತಕಾರಿಯಾಗಿದೆ. ಅವರು ಭಾರತದ ಆರ್ಥಿಕ ಪ್ರಗತಿಯಲ್ಲಿ ನಂಬಿಕೆಯಿಡುವ ಭರವಸೆಯ ಉದ್ಯಮಿಯಾಗಿದ್ದರು. ಅವರ ನಿಧನದಿಂದ ವಾಣಿಜ್ಯ ಮತ್ತು ಉದ್ಯಮ ಲೋಕಕ್ಕೆ ದೊಡ್ಡ ನಷ್ಟವಾಗಿದೆ. ಅವರ ಕುಟುಂಬ ಮತ್ತು ಸ್ನೇಹಿತರಿಗೆ ಸಂತಾಪ. ಅವರ ಆತ್ಮಕೆ ಶಾಂತಿ ಸಿಗಲಿ.” ಎಂದಿದ್ದಾರೆ.
The untimely demise of Shri Cyrus Mistry is shocking. He was a promising business leader who believed in India’s economic prowess. His passing away is a big loss to the world of commerce and industry. Condolences to his family and friends. May his soul rest in peace.
— Narendra Modi (@narendramodi) September 4, 2022