ರಾಂಚಿ ಬಳಿ ಇಬ್ಬರು ಮಹಿಳೆಯರ ಮೃತದೇಹಗಳು ಪತ್ತೆ; ವಾಮಾಚಾರದಿಂದ ಕೊಲೆಯಾಗಿರುವ ಶಂಕೆ!

ಜಾರ್ಖಂಡ್‌ನ ರಾಂಚಿ ಜಿಲ್ಲೆಯ ಬಳಿ ಶಂಕಿತ ವಾಮಾಚಾರದಿಂದಾಗಿ ಹತ್ಯೆಗೀಡಾದ ಇಬ್ಬರು ಮಹಿಳೆಯರ ಶವಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇನ್ನೋರ್ವ ಮಹಿಳೆ ನಾಪತ್ತೆಯಾಗಿದ್ದು, ಆಕೆಯ ಪತ್ತೆಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ  ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ರಾಂಚಿ: ಜಾರ್ಖಂಡ್‌ನ ರಾಂಚಿ ಜಿಲ್ಲೆಯ ಬಳಿ ಶಂಕಿತ ವಾಮಾಚಾರದಿಂದಾಗಿ ಹತ್ಯೆಗೀಡಾದ ಇಬ್ಬರು ಮಹಿಳೆಯರ ಶವಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇನ್ನೋರ್ವ ಮಹಿಳೆ ನಾಪತ್ತೆಯಾಗಿದ್ದು, ಆಕೆಯ ಪತ್ತೆಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ  ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೃತರನ್ನು ದೊಣ್ಣೆಗಳಿಂದ ಹೊಡೆದು ಇಲ್ಲಿಂದ ಸುಮಾರು 60 ಕಿ.ಮೀ ದೂರದ ಗುಡ್ಡಗಾಡು ಪ್ರದೇಶದಲ್ಲಿ ಬಿಸಾಡಿರುವುದು ಕಂಡುಬಂದಿದೆ. ಭಾನುವಾರ ಮಧ್ಯಾಹ್ನ ಘಟನೆ ಬಗ್ಗೆ ನಮಗೆ ಮಾಹಿತಿ ಬಂದ ನಂತರ ಪೊಲೀಸರ ತಂಡವು ಸ್ಥಳಕ್ಕೆ ದೌಡಾಯಿ ಪರಿಶೀಲನೆ ನಡೆಸಿದೆ. ಮೇಲ್ನೋಟಕ್ಕೆ, ಇದು ವಾಮಾಚಾರದಿಂದಾಗಿರುವ ಕೊಲೆ ಎಂಬ ಶಂಕೆ ವ್ಯಕ್ತವಾಗಿದೆ' ಎಂದು ರಾಂಚಿ ಗ್ರಾಮೀಣ ವಿಭಾಗದ ಪೊಲೀಸ್ ವರಿಷ್ಠಾಧಿಕಾರಿ ನೌಶಾದ್ ಆಲಂ ತಿಳಿಸಿದ್ದಾರೆ.

ಶನಿವಾರ ಮತ್ತು ಭಾನುವಾರದ ಮಧ್ಯರಾತ್ರಿಯಲ್ಲಿ ರೈಲು ದೇವಿ (45) ಮತ್ತು ಧೋಲಿ ದೇವಿ (60) ಎಂದು ಗುರುತಿಸಲಾದ ಮಹಿಳೆಯರನ್ನು ಹತ್ಯೆ ಮಾಡಲಾಗಿದೆ.

'ಗ್ರಾಮಸ್ಥರು ನೀಡಿದ ಮಾಹಿತಿ ಆಧಾರದ ಮೇಲೆ ಕಾಣೆಯಾದ ಮಹಿಳೆಗಾಗಿ ಶೋಧ ಪ್ರಯತ್ನಗಳು ನಡೆಯುತ್ತಿವೆ' ಎಂದು ಸೋನಾಹಟು ಪೊಲೀಸ್ ಠಾಣೆಯ ಉಸ್ತುವಾರಿ ಮುಕೇಶ್ ಹೆಂಬ್ರೋಮ್ ಹೇಳಿದ್ದಾರೆ.

ಈಮಧ್ಯೆ, ಜಾರ್ಖಂಡ್‌ನಲ್ಲಿ ಅಪ್ರಾಪ್ತೆಯ ಮೇಲಿನ ಅಪರಾಧ ಘಟನೆಗಳ ಬೆನ್ನಹಿಂದೆಯೇ, ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ (ಎನ್‌ಸಿಪಿಸಿಆರ್) ಮುಖ್ಯಸ್ಥ ಪ್ರಿಯಾಂಕ್ ಕನೂಂಗೊ ಅವರು ಈ ಪ್ರಕರಣಗಳು 'ಆತಂಕಕಾರಿ' ಎಂದು ಭಾನುವಾರ ಹೇಳಿದ್ದು, ತನಿಖೆಯ ಸ್ಥಿತಿಯನ್ನು ತಿಳಿಯಲು ತಮ್ಮ ತಂಡವು ರಾಜ್ಯಕ್ಕೆ ಭೇಟಿ ನೀಡಲಿದೆ. ಈ ವೇಳೆ ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಲಿರುವುದಾಗಿ ತಿಳಿಸಿದರು.

ಮದುವೆಯಾಗುವ ನೆಪನಿಂದ ವ್ಯಕ್ತಿಯೊಬ್ಬನಿಂದ ಲೈಂಗಿಕ ಶೋಷಣೆಗೆ ಒಳಗಾದ 14 ವರ್ಷದ ಬುಡಕಟ್ಟು ಬಾಲಕಿ ಶುಕ್ರವಾರ ಧುಮ್ಕಾದಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಅತ್ಯಾಚಾರ ಎಸಗಿ ಆಕೆಯನ್ನು ಕೊಲೆ ಮಾಡಲಾಗಿದೆ ಎಂದು ಆಕೆಯ ತಾಯಿ ಆರೋಪಿಸಿದ್ದರು. ಈ ಸಂಬಂಧ ಆರೋಪಿಯನ್ನು ಬಂಧಿಸಲಾಗಿದೆ.

ಇದಕ್ಕೂ ಕೆಲವೇ ದಿನಗಳ ಮೊದಲು ಆಗಸ್ಟ್ 23ರಂದು 16 ವರ್ಷದ ಅಂಕಿತಾ ಫೋನ್‌ನಲ್ಲಿ ತನ್ನ ಮೊತೆ ಮಾತನಾಡಲು ನಿರಾಕರಿಸಿದಳು ಎನ್ನುವ ಕಾರಣಕ್ಕಾಗಿ ಶಾರುಖ್‌ ಎಂಬಾತ ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ. ತೀವ್ರವಾಗಿ ಗಾಯಗೊಂಡಿದ್ದ ಅಂಕಿತಾ ಚಿಕಿತ್ಸೆಗೆ ಸ್ಪಂದಿಸದೆ ಸೋಮವಾರ (ಆ.29) ಮುಂಜಾನೆ ಮೃತಪಟ್ಟಿದ್ದರು. ಈ ಪ್ರಕರಣದಲ್ಲಿ ಇದುವರೆಗೆ ಕನಿಷ್ಠ ಇಬ್ಬರನ್ನು ಬಂಧಿಸಲಾಗಿದೆ.

ಧುಮ್ಕಾದಲ್ಲಿ ನಡೆದಿರುವ ಈ ಘಟನೆಗಳು ಜಾರ್ಖಂಡ್‌ನಲ್ಲಿ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದ್ದು, ಮುಖ್ಯಮಂತ್ರಿ ಹೇಮಂತ್ ಸೋರೆನ್ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com