
ಮಮತಾ ಬ್ಯಾನರ್ಜಿ
ಕೋಲ್ಕತ್ತಾ: 2024ರ ಲೋಕಸಭೆ ಚುನಾವಣೆಗೂ ಮುನ್ನ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ದೊಡ್ಡ ಘೋಷಣೆ ಮಾಡಿದ್ದಾರೆ.
ಪಕ್ಷದ ಕಾರ್ಯಕ್ರಮವೊಂದರಲ್ಲಿ ಮಾತನಾಡುವ ವೇಳೆ ಮಮತಾ ಅವರು, ವಿರೋಧ ಪಕ್ಷಗಳನ್ನು ಒಗ್ಗೂಡಿಸಲು ಬಿಹಾರ ಮುಖ್ಯಮಂತ್ರಿಗಳ ಪ್ರಯತ್ನಗಳ ಮಧ್ಯೆ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಎಲ್ಲಾ ಬಿಜೆಪಿಯೇತರ ಪಕ್ಷಗಳು ಒಂದಾಗಲಿವೆ ಎಂದು ಹೇಳಿದ್ದಾರೆ.
2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು (BJP) ಅಧಿಕಾರದಿಂದ ಕೆಳಗಿಳಿಸಲು ಅವರು ಮತ್ತು ನೆರೆಯ ಬಿಹಾರ ಮತ್ತು ಜಾರ್ಖಂಡ್ ನಲ್ಲಿರುವ ಅವರ ಸಹವರ್ತಿಗಳು ಹಲವಾರು ಇತರ ವಿರೋಧ ಪಕ್ಷಗಳೊಂದಿಗೆ ಕೈಜೋಡಿಸಲಿದ್ದಾರೆ ಎಂದು ಟಿಎಂಸಿ ವರಿಷ್ಠರು ಹೇಳಿದ್ದಾರೆ.
ಇದನ್ನೂ ಓದಿ: ಸರಿಯಾಗಿ ಆಹ್ವಾನ ನೀಡಿಲ್ಲದ ಕಾರಣ ದೆಹಲಿಯ ನೇತಾಜಿ ಪ್ರತಿಮೆ ಉದ್ಘಾಟನೆಗೆ ಹಾಜರಾಗಲ್ಲ: ಮಮತಾ ಬ್ಯಾನರ್ಜಿ
ಈ ಸಂದರ್ಭದಲ್ಲಿ ಅವರು ಬಿಜೆಪಿ ತನ್ನ ದುರಹಂಕಾರ ಮತ್ತು ಜನರ ಕೋಪದಿಂದ ಸೋಲನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದರು.
“ನಾನು, ನಿತೀಶ್ ಕುಮಾರ್, ಹೇಮಂತ್ ಸೋರೆನ್ ಮತ್ತು ಅನೇಕರು 2024 ರಲ್ಲಿ ಒಂದಾಗಲಿದ್ದೇವೆ. ಬಿಜೆಪಿಯನ್ನು ಸೋಲಿಸಲು ಎಲ್ಲಾ ವಿರೋಧ ಪಕ್ಷಗಳು ಕೈಜೋಡಿಸುತ್ತವೆ. ನಾವೆಲ್ಲ ಒಂದು ಕಡೆ, ಬಿಜೆಪಿ ಇನ್ನೊಂದು ಕಡೆ ಇರಲಿದೆ. ಬಿಜೆಪಿಯ 300 ಸೀಟುಗಳ ದುರಹಂಕಾರವೇ ಅದರ ಶತ್ರುವಾಗುವುದು ಎಂದು ಅವರು ಹೇಳಿದರು.