ಎಲ್ಗರ್ ಪರಿಷತ್ ಪ್ರಕರಣ: ದೆಹಲಿ ವಿವಿ ಪ್ರೊಫೆಸರ್ ಹನಿ ಬಾಬುಗೆ ಜಾಮೀನು ನೀಡಲು ಬಾಂಬೆ ಹೈಕೋರ್ಟ್ ನಕಾರ
ಎಲ್ಗರ್ ಪರಿಷತ್ -ಮಾವೋವಾದಿ ನಂಟು ಪ್ರಕರಣದ ಆರೋಪಿಯಾಗಿರುವ ದೆಹಲಿ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಹನಿ ಬಾಬು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಬಾಂಬೆ ಹೈಕೋರ್ಟ್ ಸೋಮವಾರ ತಿರಸ್ಕರಿಸಿದೆ.
Published: 19th September 2022 04:41 PM | Last Updated: 19th September 2022 04:48 PM | A+A A-

ಹನಿ ಬಾಬು
ಮುಂಬೈ: ಎಲ್ಗರ್ ಪರಿಷತ್ -ಮಾವೋವಾದಿ ನಂಟು ಪ್ರಕರಣದ ಆರೋಪಿಯಾಗಿರುವ ದೆಹಲಿ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಹನಿ ಬಾಬು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಬಾಂಬೆ ಹೈಕೋರ್ಟ್ ಸೋಮವಾರ ತಿರಸ್ಕರಿಸಿದೆ.
ಜಾಮೀನು ನಿರಾಕರಿಸಿದ ವಿಶೇಷ ನ್ಯಾಯಾಲಯದ ಆದೇಶದ ವಿರುದ್ಧ ಬಾಬು ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಲಾಗಿದೆ ಎಂದು ನ್ಯಾಯಮೂರ್ತಿಗಳಾದ ಎನ್ ಎಂ ಜಾಮ್ದಾರ್ ಮತ್ತು ಎನ್ ಆರ್ ಬೋರ್ಕರ್ ಅವರ ವಿಭಾಗೀಯ ಪೀಠ ಹೇಳಿದೆ.
ಇದನ್ನೂ ಓದಿ: ಎಲ್ಗರ್ ಪರಿಷದ್ ಪ್ರಕರಣ ಆರೋಪಿಗಳು ದೇಶದ ವಿರುದ್ಧ ಯುದ್ಧ ಸಾರಲು ಬಯಸಿದ್ದರು: ಎನ್ ಐಎಯಿಂದ ಕರಡು ಆರೋಪ ಸಲ್ಲಿಕೆ
ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ), ನಿಷೇಧಿತ ಸಿಪಿಐ (ಮಾವೋವಾದಿ) ಸಂಘಟನೆಯ ನಾಯಕರ ಸೂಚನೆಯ ಮೇರೆಗೆ ಮಾವೋವಾದಿ ಚಟುವಟಿಕೆಗಳು ಮತ್ತು ಸಿದ್ಧಾಂತವನ್ನು ಪ್ರಚಾರ ಮಾಡುವಲ್ಲಿ ಬಾಬು ಸಹ ಸಂಚುಕೋರ ಎಂದು ಆರೋಪಿಸಿದೆ. ಈ ಪ್ರಕರಣದಲ್ಲಿ ಜುಲೈ 2020 ರಲ್ಲಿ ಹಾನಿ ಬಾಬು ಅವರನ್ನು ಬಂಧಿಸಲಾಗಿತ್ತು. ಪ್ರಸ್ತುತ ಅವರು ನೆರೆಯ ನವಿ ಮುಂಬೈನ ತಲೋಜಾ ಜೈಲಿನಲ್ಲಿದ್ದಾರೆ.
ಡಿಸೆಂಬರ್ 31, 2017 ರಂದು ಪುಣೆಯ ಶನಿವಾರವಾಡದಲ್ಲಿ ನಡೆದ ಎಲ್ಗರ್ ಪರಿಷತ್ ಸಮಾವೇಶದಲ್ಲಿ ಮಾಡಿದ ಆಪಾದಿತ ಪ್ರಚೋದನಕಾರಿ ಭಾಷಣಗಳಿಗೆ ಈ ಪ್ರಕರಣವು ಸಂಬಂಧಿಸಿದ್ದು, ಮರುದಿನ ನಗರದ ಹೊರವಲಯದಲ್ಲಿರುವ ಕೋರೆಗಾಂವ್ ಭೀಮಾ ಯುದ್ಧ ಸ್ಮಾರಕದ ಬಳಿ ಹಿಂಸಾಚಾರವನ್ನು ಪ್ರಚೋದಿಸಿತು ಎಂದು ಪೊಲೀಸರು ಹೇಳಿದ್ದಾರೆ.