ಕಾಂಗ್ರೆಸ್ ಅಧ್ಯಕ್ಷ ಚುನಾವಣೆ: ಶೀಘ್ರದಲ್ಲೇ ದಿಗ್ವಿಜಯ್ ಸಿಂಗ್ ನಾಮಪತ್ರ!

ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಚುನಾವಣೆ ರಂಗೇರಿದ್ದು, ಚುನಾವಣಾ ಕಣಕ್ಕೆ ಆ ಪಕ್ಷದ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಧುಮುಕಿದ್ದು, ಶೀಘ್ರದಲ್ಲೇ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ ಎನ್ನಲಾಗಿದೆ.
ದಿಗ್ವಿಜಯ್ ಸಿಂಗ್
ದಿಗ್ವಿಜಯ್ ಸಿಂಗ್

ನವದೆಹಲಿ: ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಚುನಾವಣೆ ರಂಗೇರಿದ್ದು, ಚುನಾವಣಾ ಕಣಕ್ಕೆ ಆ ಪಕ್ಷದ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಧುಮುಕಿದ್ದು, ಶೀಘ್ರದಲ್ಲೇ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ ಎನ್ನಲಾಗಿದೆ.

ಮುಂಬರುವ ಅಕ್ಟೋಬರ್ 17 ರಂದು ಚುನಾವಣೆ ನಡೆಯಲಿರುವ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ನಾಮಪತ್ರ ಸಲ್ಲಿಸಲು ನಿರ್ಧರಿಸಿದ್ದಾರೆ. ಅವರು ಬುಧವಾರ ರಾತ್ರಿ ರಾಷ್ಟ್ರ ರಾಜಧಾನಿಗೆ ಆಗಮಿಸುವ ನಿರೀಕ್ಷೆಯಿದ್ದು, ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಚುನಾವಣೆಗೆ ಸ್ಪರ್ಧಿಸುವ ನಿರ್ಧಾರ ಅವರ ವೈಯಕ್ತಿಕ ನಿರ್ಧಾರ ಎಂದು ಸಿಂಗ್ ಅವರ ನಿಕಟ ಮೂಲಗಳು ಬುಧವಾರ ತಿಳಿಸಿದ್ದು, ಗಾಂಧಿ ಕುಟುಂಬದ ಯಾರೊಬ್ಬ ಸದಸ್ಯರೂ ಅವರಿಗೆ ಯಾವುದೇ ರೀತಿಯ ಸಲಹೆ ನೀಡಿಲ್ಲ ಎಂದೂ ತಿಳಿಸಿವೆ. ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಅವರು ಸೆಪ್ಟೆಂಬರ್ 30 ರೊಳಗೆ ನಾಮಪತ್ರ ಸಲ್ಲಿಸಬಹುದು.

ಕಾಂಗ್ರೆಸ್‌ನ ಆರಂಭಿಕ ಯೋಜನೆಯಂತೆ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನು ಪಕ್ಷದ ಉನ್ನತ ಹುದ್ದೆಗೆ ಸ್ಪರ್ಧಿಸುವುದಾಗಿತ್ತು. ಆದರೆ ರಾಜಸ್ಥಾನದಲ್ಲಿ ಉಲ್ಬಣಗೊಂಡಿರುವ ದಿಢೀರ್ ರಾಜಕೀಯ ಬಿಕ್ಕಟ್ಟು ಅವರು ಸ್ಪರ್ಧೆಯಿಂದ ದೂರ ಉಳಿಯುವಂತಾಗಿದೆ. ಆದಾಗ್ಯೂ ರಾಜಸ್ಥಾನದಲ್ಲಿ ಹಿರಿಯ ನಾಯಕ ಕಮಲ್ ನಾಥ್ ನೇತೃತ್ವದಲ್ಲಿ ಸಂಧಾನ ಪ್ರಕ್ರಿಯೆಗಳು ನಡೆಯುತ್ತಿದ್ದು, ಈಗಲೂ ಗೆಹ್ಲೂಟ್ ಪಕ್ಷದ ಅಧ್ಯಕ್ಷ ಚುನಾವಣಾ ರೇಸ್ ನಿಂದ ಹೊರಗಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ. 

ಇನ್ನು ಕಾಂಗ್ರೆಸ್ ಖಜಾಂಚಿ ಪವನ್ ಕುಮಾರ್ ಬನ್ಸಾಲ್ ಅವರು ಪಕ್ಷದ ಕೇಂದ್ರ ಚುನಾವಣಾ ಪ್ರಾಧಿಕಾರದಿಂದ (ಸಿಇಎ) ನಾಮಪತ್ರ ಸಲ್ಲಿಸಿದ್ದಾರೆಯಾದರೂ ಬನ್ಸಾಲ್ ಅವರು ಕೇವಲ ಪ್ರತಿಪಾದಕರಾಗಿದ್ದು, ಅವರು ಅಭ್ಯರ್ಥಿಯಲ್ಲ ಎಂಬ ವಾದ ಕೂಡ ಕೇಳಿಬರುತ್ತಿದೆ. ಇಲ್ಲಿಯವರೆಗೆ ಶಶಿ ತರೂರ್ ಮತ್ತು ಪವನ್ ಬನ್ಸಾಲ್ ಅವರು ಸಿಇಎಯಿಂದ ನಾಮಪತ್ರ ಸಲ್ಲಿಸಿದ್ದಾರೆ ಎಂದು ಸಿಇಎ ಅಧ್ಯಕ್ಷ ಮಧುಸೂದನ್ ಮಿಸ್ತ್ರಿ ಮಂಗಳವಾರ ಹೇಳಿದ್ದಾರೆ.

ಹಿರಿಯ ಕಾಂಗ್ರೆಸ್ ನಾಯಕ ಕಮಲ್ ನಾಥ್ ಅವರ ಹೆಸರೂ ಕೂಡ ರೇಸ್ ನಲ್ಲಿ ಕೇಳಿ ಬಂದಿದ್ದು, ಸೋಮವಾರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ ಕಮಲ್ ನಾಥ್, ನಾನು ಪಕ್ಷದ ಮುಖ್ಯಸ್ಥನಾಗಲು ಬಯಸುವುದಿಲ್ಲ ಮತ್ತು ಮಧ್ಯಪ್ರದೇಶದಲ್ಲಿ ಪಕ್ಷಕ್ಕಾಗಿ ಕೆಲಸ ಮಾಡುವುದನ್ನು ಮುಂದುವರಿಸಲು ಬಯಸುತ್ತೇನೆ ಎಂದು ಹೇಳಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com