'ಮೋದಿ ತೇರಿ ಕಬ್ರ ಖುದೇಗಿ' ಘೋಷಣೆ: 2024ರಲ್ಲಿ ನಮ್ಮ ಗೆಲುವು ನಿಶ್ಚಿತ ಎಂದು ತಿಳಿದ ಪ್ರತಿಪಕ್ಷಗಳು ತೀವ್ರ ಹತಾಶೆಗೊಳಗಾಗಿವೆ; ಪ್ರಧಾನಿ ಮೋದಿ

ಏನೇ ಮಾಡಿದರೂ 2024ರ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ತಿಳಿದ ಪ್ರತಿಪಕ್ಷಗಳು ತೀವ್ರ ಹತಾಶೆಗೊಳಗಾಗಿವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗುರುವಾರ ಹೇಳಿದ್ದು, ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
ಪ್ರಧಾನಿ ಮೋದಿ
ಪ್ರಧಾನಿ ಮೋದಿ

ನವದೆಹಲಿ: ಏನೇ ಮಾಡಿದರೂ 2024ರ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ತಿಳಿದ ಪ್ರತಿಪಕ್ಷಗಳು ತೀವ್ರ ಹತಾಶೆಗೊಳಗಾಗಿವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗುರುವಾರ ಹೇಳಿದ್ದು, ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.

ಬಿಜೆಪಿ ಪಕ್ಷದ 44ನೇ ಸಂಸ್ಥಾಪನಾ ದಿನದ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಪಕ್ಷವು ಪ್ರಜಾಪ್ರಭುತ್ವದ ಗರ್ಭದಿಂದ ಹುಟ್ಟಿದೆ. ಪ್ರಜಾಪ್ರಭುತ್ವ ಎಂಬ ಅಮೃತದಿಂದ ಪೋಷಿಸಲ್ಪಟ್ಟಿದೆ. ಹಾಗೇ, ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಗಟ್ಟಿಗೊಳಿಸಿದೆ, ಪವಿತ್ರಗೊಳಿಸಿದೆ’. ಬಿಜೆಪಿಯ ಪಾಲಿಗೆ ಈ ರಾಷ್ಟ್ರ ಬಹಳ ಮುಖ್ಯ. ನಮ್ಮ ಪಕ್ಷವು ಕೌಟುಂಬಿಕ ರಾಜಕಾರಣವನ್ನು ಬೆಂಬಲಿಸುವುದಿಲ್ಲ’ ಎಂದೂ ಹೇಳಿದರು,

‘ಈ ದೇಶದಲ್ಲಿರುವ ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ಕಾನೂನು-ಸುವ್ಯವಸ್ಥೆಗೆ ಇರುವ ಸವಾಲುಗಳ ವಿರುದ್ಧ ಹೋರಾಡುವುದು ಬಿಜೆಪಿಯ ಗಟ್ಟಿ ನಿರ್ಧಾರ. ಇದಕ್ಕಾಗಿ ನಾವು ಹನುಮಂತ​​ನಿಂದ ಸ್ಫೂರ್ತಿ-ಶಕ್ತಿ ಪಡೆದಿದ್ದೇವೆ. ನಾವೂ ಕೂಡ ಹನುಮಂತ​​ನಂತೆ ಕೆಲವೊಮ್ಮೆ ಕಠಿಣವಾಗಬಹುದು. ಆದರೆ, ಯಾವತ್ತೂ ದೇಶವೇ ನಮಗೆ ಮೊದಲು. ದೇಶದ ಒಳಿತಿಗಾಗಿ ಒಂದಷ್ಟು ನಿರ್ಧಾರ ತೆಗೆದುಕೊಳ್ಳುವಾಗ ಕಠಿಣ ಎನ್ನಿಸಬಹುದು ಎಂದು ತಿಳಿಸಿದರು.

ಇದೇ ವೇಳೆ ಮೋದಿ ತೇರಿ ಕಬ್ರ ಖುದೇಗಿ' (ಮೋದಿ, ನಿಮಗೆ ಸಮಾಧಿ ತೋಡಲಾಗುತ್ತದೆ) ಎಂಬ ಘೋಷಣೆಯನ್ನು ಉಲ್ಲೇಖಿಸಿದ ವಾಗ್ದಾಳಿ ನಡೆಸಿದ ಮೋದಿಯವರು, ಪ್ರತಿಪಕ್ಷಗಳು ತೀವ್ರ ಹತಾಶೆಗೀಡಾಗಿವೆ. ಏನೇ ಮಾಡಿದರೂ, 2024ರ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಸಾಧ್ಯವೇ ಇಲ್ಲ ಎಂಬುದು ಅವರಿಗೆ ತಿಳಿಸಿದೆ. ‘ಮನಸಿನಲ್ಲಿ ವಿಷವನ್ನೇ ತುಂಬಿಕೊಂಡವರು ಸುಳ್ಳುಗಳನ್ನು ಬಿತ್ತರಿಸುತ್ತಿದ್ದಾರೆ. ಹತಾಶೆಗೆ ಒಳಗಾದವರು ಮೋದಿ ನಿಮ್ಮ ಸಮಾಧಿ ಅಗೆಯಲ್ಪಡುತ್ತದೆ ಎಂದು ಕೂಗುತ್ತಿದ್ದಾರಷ್ಟೇ’ ಎಂದರು.

ನಾವು ನಮ್ಮನ್ನು ಭಾರತ ಮಾತೆಗೆ, ಇಲ್ಲಿನ ಸಂವಿಧಾನಕ್ಕೆ ಮತ್ತು ಕೋಟ್ಯಂತರ ನಾಗರಿಕರಿಗೆ ಅರ್ಪಿಸಿಕೊಂಡಿದ್ದೇವೆ. ನಮ್ಮದು ದೊಡ್ಡ ಕನಸು ಇರುವ ರಾಜಕೀಯ ಸಂಸ್ಕೃತಿ. ಅದನ್ನು ನೆರವೇರಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದೇವೆ. ನಾವು ಕಾಂಗ್ರೆಸ್ಸಿಗರಂತೆ ಅಲ್ಲ. ಮಹಿಳೆಯರ ಕಲ್ಯಾಣ ನಮ್ಮ ಆದ್ಯತೆ. ಮುಂದಿನ 25 ವರ್ಷಗಳಿಗಾಗಿ ನಾವು ಗುರಿಯನ್ನು ಹೊಂದಿದ್ದೇವೆ. ಅದನ್ನು ಈಡೇರಿಸಿಕೊಳ್ಳಲು ನಮ್ಮ ಪಕ್ಷದ ಪಂಚಾಯಿತಿ ಮಟ್ಟದ ಕಾರ್ಯಕರ್ತರಿಂದ ಹಿಡಿದು, ಸಂಸತ್ತಿನ ಮಟ್ಟದ ಕಾರ್ಯಕರ್ತರವರೆಗೆ ಎಲ್ಲರಿಗೂ ಸೂಕ್ತ ತರಬೇತಿ ಕೊಡುತ್ತಿದ್ದೇವೆ’ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com