ದರ ನಿಗದಿ ಸೂತ್ರ ಪರಿಷ್ಕರಣೆ: ಸಿಎನ್‌ಜಿ, ಪಿಎನ್‌ಜಿ ತೈಲ ದರ ಶೇ.10ರಷ್ಟು ಇಳಿಕೆ, ಬೆಲೆ ನೀತಿಯಲ್ಲಿ ಬದಲಾವಣೆಗೆ ಕೇಂದ್ರ ಸರ್ಕಾರ ಅನುಮೋದನೆ

ನೈಸರ್ಗಿಕ ಅನಿಲದ ದರ ನಿಗದಿಗೆ ಹೊಸ ಮಾನದಂಡಕ್ಕೆ ಕೇಂದ್ರ ಸರ್ಕಾರ ಮುಂದಾಗಿದ್ದು, ಈ ನಿಟ್ಟಿನಲ್ಲಿ ದರ ನಿಗದಿ ಸೂತ್ರ ಪರಿಷ್ಕರಣೆಗೆ ಕೇಂದ್ರ ಸಚಿವ ಸಂಪುಟ ಗುರುವಾರ ಒಪ್ಪಿಗೆ ನೀಡಿದೆ. ಇದರಂತೆ ಗೃಹ ಬಳಕೆಯ ಪಿಎನ್‌ಜಿ ಮತ್ತು ವಾಹನಗಳಿಗೆ ಬಳಸುವ ಸಿಎನ್‌ಜಿ ತೈಲದ ದರವು ಶೇ 10ರವರೆಗೂ ಕಡಿಮೆಯಾಗಲಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ನೈಸರ್ಗಿಕ ಅನಿಲದ ದರ ನಿಗದಿಗೆ ಹೊಸ ಮಾನದಂಡಕ್ಕೆ ಕೇಂದ್ರ ಸರ್ಕಾರ ಮುಂದಾಗಿದ್ದು, ಈ ನಿಟ್ಟಿನಲ್ಲಿ ದರ ನಿಗದಿ ಸೂತ್ರ ಪರಿಷ್ಕರಣೆಗೆ ಕೇಂದ್ರ ಸಚಿವ ಸಂಪುಟ ಗುರುವಾರ ಒಪ್ಪಿಗೆ ನೀಡಿದೆ. ಇದರಂತೆ ಗೃಹ ಬಳಕೆಯ ಪಿಎನ್‌ಜಿ ಮತ್ತು ವಾಹನಗಳಿಗೆ ಬಳಸುವ ಸಿಎನ್‌ಜಿ ತೈಲದ ದರವು ಶೇ 10ರವರೆಗೂ ಕಡಿಮೆಯಾಗಲಿದೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಹರ್‌ದೀಪ್ ಪುರಿ ಅವರು, 'ಪ್ರಧಾನಮಂತ್ರಿ ನರೇಂದ್ರ ಮೋದಿ ನಾಯಕತ್ವದಲ್ಲಿ ಹಲವು ಮಹತ್ವದ ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಆಗುವ ಬೆಲೆ ಏರಿಳಿತಗಳಿಂದ ಭಾರತದ ಗ್ರಾಹಕರನ್ನು ರಕ್ಷಿಸಲು ಇದು ನೆರವಾಗಲಿದೆ. ಹೊಸ ಮಾರ್ಗದರ್ಶಿ ಸೂತ್ರಗಳಿಗೆ ಕೇಂದ್ರ ಸಚಿವ ಸಂಪುಟದ ಸಹಮತ ಸಿಕ್ಕಿದೆ' ಎಂದು ಹೇಳಿದ್ದಾರೆ.

ಭಾರತ ಸರ್ಕಾರದ ವಕ್ತಾರ ಮತ್ತು ಪಿಐಬಿ ಪ್ರಧಾನ ನಿರ್ದೇಶಕ ರಾಜೇಶ್ ಮಲ್ಹೋತ್ರ ಅವರು ಟ್ವೀಟ್ ಮಾಡಿ, ಪೆಟ್ರೋಲಿಯಂ ಸಚಿವಾಲಯದ ಹೊಸ ಆಲೋಚನೆಯ ವಿವರಗಳನ್ನು ಹಂಚಿಕೊಂಡಿದ್ದಾರೆ. 'ಸಿಎನ್‌ಜಿ ಮತ್ತು ಪಿಎನ್‌ಜಿಗೆ ಇಂಡಿಯನ್ ಕ್ರೂಡ್ ಬ್ಯಾಸ್ಕೆಟ್‌ನ (ಭಾರತದ ಕಚ್ಚಾತೈಲ ಆಮದು ದರದ ಸರಾಸರಿ) ಶೇ 10ರಷ್ಟು (ಕಡಿಮೆ) ದರ ನಿಗದಿಪಡಿಸಲಾಗುವುದು. ಈ ದರವನ್ನು ತಿಂಗಳಿಗೆ ಒಮ್ಮೆ ಪರಿಷ್ಕರಿಸಲಾಗುವುದು. ಈ ಮೂಲಕ ದರನಿಗದಿ ಪ್ರಕ್ರಿಯೆಯಲ್ಲಿ ಸ್ಥಿರತೆ ಬರಲಿದೆ. ಅದರ ಜೊತೆಗೆ ಅನಿಲ ಉತ್ಪಾದಕರಿಗೆ ಬೆಲೆ ಹೊಯ್ದಾಟದಿಂದ ರಕ್ಷಣೆಯೂ ಸಿಗಲಿದೆ' ಎಂದು ಹೇಳಿದ್ದಾರೆ.

ಪ್ರಸ್ತುತ ಭಾರತದಲ್ಲಿ ಉತ್ಪತ್ತಿಯಾಗುವ ನೈಸರ್ಗಿಕ ಅನಿಲ ದರ ನಿಗದಿಪಡಿಸಲು ಹೆನ್ರಿ ಹಬ್, ಅಲ್‌ಬೆನಾ, ನ್ಯಾಷನಲ್ ಬ್ಯಾಲೆನ್ಸಿಂಗ್ ಪಾಯಿಂಟ್ (ಬ್ರಿಟನ್) ಮತ್ತು ರಷ್ಯಾದ ಸರಾಸರಿ ದರಗಳನ್ನು ಪರಿಗಣಿಸಲಾಗುತ್ತಿದೆ. ಆರು ತಿಂಗಳಿಗೆ ಒಮ್ಮೆ ದರ ಪರಿಷ್ಕರಿಸಲಾಗುತ್ತಿದೆ. ಈ ನಾಲ್ಕು ಅನಿಲ ದರಗಳನ್ನು ಲೆಕ್ಕಹಾಕಿ ದೇಶೀಯ ದರ ನಿಗದಿಪಡಿಸುವ ಪ್ರಕ್ರಿಯೆಯೇ ದೊಡ್ಡ ಸರ್ಕಸ್ ಎನಿಸುತ್ತಿತ್ತು. ಈ ವ್ಯವಸ್ಥೆ ಬದಲಿಸಬೇಕೆಂಬ ಒತ್ತಾಯ ಬಹುದಿನಗಳಿಂದ ಕೇಳಿಬರುತ್ತಿತ್ತು.

'ಪರಿಷ್ಕೃತ ಮಾರ್ಗಸೂಚಿಗಳ ಅನ್ವಯ ನೈಸರ್ಗಿಕ ಅನಿಲ ದರಗಳನ್ನು ಕಚ್ಚಾತೈಲದ ದರಕ್ಕೆ ಸಂಯೋಜಿಸಲಾಗಿದೆ. ಹಲವು ದೇಶಗಳಲ್ಲಿ ಈ ವ್ಯವಸ್ಥೆ ಈಗಾಗಲೇ ಜಾರಿಗೆ ಬಂದಿದೆ. ನಮ್ಮ ಬಳಕೆದಾರರಿಗೆ ಇದರಿಂದ ಅನುಕೂಲ, ಜಾಗತಿಕ ವಹಿವಾಟಿಗೂ ಅನುಕೂಲ' ಎಂದು ಕೇಂದ್ರ ಸರ್ಕಾರ ಹೇಳಿದೆ.

ಭಾರತದಲ್ಲಿ ಸರ್ಕಾರಿ ಸ್ವಾಮ್ಯದ ಒಎನ್‌ಜಿಸಿ ಮತ್ತು ಒಐಎಲ್ ಕಂಪನಿಗಳು ಉತ್ಪಾದಿಸುವ ನೈಸರ್ಗಿಕ ಅನಿಲಕ್ಕೆ ಇಷ್ಟುದಿನ ಎಪಿಎಂ ಮೂಲಕ ಕೇಂದ್ರ ಸರ್ಕಾರವೇ ದರ ನಿಗದಿಪಡಿಸುತ್ತಿತ್ತು. ಈ ಕಂಪನಿಗಳಿಗೆ ಅನಿಲ ನಿಕ್ಷೇಪಗಳನ್ನು ಬಿಟ್ಟುಕೊಡುವಾಗ ಸ್ಪರ್ಧಾತ್ಮಕ ದರ ಪಡೆದಿಲ್ಲ ಎನ್ನುವ ಕಾರಣಕ್ಕೆ ಉತ್ಪಾದನೆಯಾದ ಅನಿಲಕ್ಕೆ ದರ ನಿಗದಿಪಡಿಸುವ ಹಕ್ಕನ್ನು ಕೇಂದ್ರ ಸರ್ಕಾರ ತಾನೇ ಇರಿಸಿಕೊಂಡಿತ್ತು. ಇದೀಗ ಕಚ್ಚಾತೈಲ ದರ ಸೂಚ್ಯಂಕದೊಂದಿಗೆ ಪಿಎನ್‌ಜಿ ಮತ್ತು ಸಿಎನ್‌ಜಿ ದರವನ್ನು ತಳುಕು ಹಾಕುವ ಮೂಲಕ ಈ ಹಕ್ಕು ಬಿಟ್ಟುಕೊಡಲು ಕೇಂದ್ರ ಸರ್ಕಾರ ಮುಂದಾಗಿರುವುದು ಮಹತ್ವದ ವಿದ್ಯಮಾನ ಎನಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com