ಮಾವಿನ ಹಣ್ಣು: ಈಗ ತಿನ್ನಿ.... ನಂತರ ಪಾವತಿಸಿ: ಪುಣೆ ವ್ಯಾಪಾರಿಯ ವಿನೂತನ EMI ಯೋಜನೆ

ಬೇಸಿಗೆ ಬಂತೆಂದರೆ ಹಣ್ಣುಗಳ ರಾಜ ಮಾವಿನದ್ದೇ ಸುದ್ದಿ... ಆದರೆ ನಾನಾ ಕಾರಣಗಳಿಂದ ಮಾವಿನ ಬೆಲೆ ಪ್ರತೀ ವರ್ಷ ಗಗನಕ್ಕೇರುತ್ತಿದೆ. ಇದೇ ಕಾರಣಕ್ಕೆ ಮಹಾರಾಷ್ಟ್ರ ಮಾವಿನ ವ್ಯಾಪಾರಿಯೊಬ್ಬ ಮಾವು ಪ್ರಿಯರಿಗೆ ವಿನೂತನ EMI ಯೋಜನೆ ಘೋಷಿಸಿದ್ದಾರೆ.
ಮಾವಿನ ಹಣ್ಣು
ಮಾವಿನ ಹಣ್ಣು

ಪುಣೆ: ಬೇಸಿಗೆ ಬಂತೆಂದರೆ ಹಣ್ಣುಗಳ ರಾಜ ಮಾವಿನದ್ದೇ ಸುದ್ದಿ... ಆದರೆ ನಾನಾ ಕಾರಣಗಳಿಂದ ಮಾವಿನ ಬೆಲೆ ಪ್ರತೀ ವರ್ಷ ಗಗನಕ್ಕೇರುತ್ತಿದೆ. ಇದೇ ಕಾರಣಕ್ಕೆ ಮಹಾರಾಷ್ಟ್ರ ಮಾವಿನ ವ್ಯಾಪಾರಿಯೊಬ್ಬ ಮಾವು ಪ್ರಿಯರಿಗೆ ವಿನೂತನ EMI ಯೋಜನೆ ಘೋಷಿಸಿದ್ದಾರೆ.

ಹೌದು.. ಅಲ್ಪಾನ್ಸೊ ತಳಿಯ ಮಾವಿನಹಣ್ಣಿನ ದರವು ದುಬಾರಿಯಾಗಿರುವ ಕಾರಣ ಮಹಾರಾಷ್ಟ್ರದ ಪುಣೆಯ ವ್ಯಾಪಾರಿಯೊಬ್ಬರು ಇದನ್ನು ಖರೀದಿಸುವ ಗ್ರಾಹಕರಿಗೆ ಮಾಸಿಕ ಕಂತಿನಲ್ಲಿ ಪಾವತಿಸುವ (ಇಎಂಐ) ಸೌಲಭ್ಯ ಒದಗಿಸಿದ್ದಾರೆ. ಗುರುಕೃಪಾ ಟ್ರೇಡರ್ಸ್‌ ಮತ್ತು ಫ್ರೂಟ್‌ ಪ್ರಾಡಕ್ಟ್‌ನ ಗೌರವ್‌ ಸನಸ್‌ ಎಂಬುವವರು ಗ್ರಾಹಕರಿಗೆ ಈ ಕೊಡುಗೆ ನೀಡಿದ್ದು, ‘ರೆಫ್ರಿಜರೇಟರ್‌ ಮತ್ತು ಏರ್‌ ಕಂಡಿಷನರ್‌ಗಳನ್ನು ಇಎಂಐಯಲ್ಲಿ ಖರೀದಿಸಬಹುದಾದರೆ ಮಾವಿನ ಹಣ್ಣುಗಳನ್ನು ಯಾಕೆ ಈ ಸೌಲಭ್ಯದಲ್ಲಿ ಖರೀದಿಸಬಾರದು’ ಎಂದು ಪ್ರಶ್ನಿಸಿ ವಿನೂತನ EMI ಯೋಜನೆ ಘೋಷಣೆ ಮಾಡಿದ್ದಾರೆ.

ದೇಶದಲ್ಲೇ ಮಾವಿನ ಹಣ್ಣುಗಳನ್ನು ಇಎಂಐಯಲ್ಲಿ ಮಾರಾಟ ಮಾಡುತ್ತಿರುವುದು ನಾವೇ ಮೊದಲು ಎಂದೂ ಅವರು ಹೇಳಿಕೊಂಡಿದ್ದು, ಇಎಂಐ ಸೌಲಭ್ಯದೊಂದಿಗೆ ಮಾರಾಟ ಮಾಡುವುದರಿಂದ ಎಲ್ಲರಿಗೂ ಈ ತಳಿಯ ಮಾವಿನ ಹಣ್ಣುಗಳನ್ನು ಖರೀದಿಸಲು ಸಾಧ್ಯವಾಗಬಹುದು ಎಂದೂ ಗೌರವ್‌ ಸನಸ್‌ ಹೇಳಿದ್ದಾರೆ.

ರಾಜ್ಯದ ಕೊಂಕಣ ಪ್ರದೇಶವಾದ ದೇವಗಢ ಮತ್ತು ರತ್ನಗಿರಿಯ ಅಲ್ಪಾನ್ಸೊ ಅಥವಾ ಆಪೂಸ್‌ ತಳಿಯ ಮಾವಿನ ಹಣ್ಣುಗಳು ಅತ್ಯುತ್ತಮ ಮಾವಿನಹಣ್ಣುಗಳೆಂದು ಪ್ರಸಿದ್ಧಿ ಪಡೆದಿವೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಈ ತಳಿಯ ಮಾವಿನ ಹಣ್ಣುಗಳನ್ನು ಡಜನ್‌ಗೆ 800ರಿಂದ 1,300ಕ್ಕೆ ಮಾರಾಟ ಮಾಡಲಾಗುತ್ತದೆ. ಇಷ್ಟು ದೊಡ್ಡ ಮೊತ್ತದಲ್ಲಿ ಮಾವಿನ ಹಣ್ಣುಗಳನ್ನು ಖರೀದಿಸಲು ಬಡವರಿಗೆ ಕಷ್ಟವಾಗುತ್ತದೆ. ಹೀಗಾಗಿ ಅವರಿಗೆ EMI ಯೋಜನೆ ಮೂಲಕ ಹಣ್ಣುಗಳನ್ನು ಮಾರಾಟ ಮಾಡಬಹುದು ಎಂದು ಅವರು ಹೇಳಿದ್ದಾರೆ.

ಮಾವಿನ EMI ಯೋಜನೆ ಹೇಗಿರುತ್ತದೆ?
ಗೌರವ್‌ ಸನಸ್‌ ನೀಡಿರುವ ಮಾಹಿತಿಯಂತೆ ಮೊಬೈಲ್‌ ಫೋನ್‌ಗಳನ್ನು ಇಎಂಐಯಲ್ಲಿ ಖರೀದಿಸುವಾಗ ಪಾಲಿಸುವ ವಿಧಾನಗಳನ್ನೇ ಮಾವಿನ ಹಣ್ಣುಗಳನ್ನು ಖರೀದಿಸುವಾಗಲೂ ಪಾಲಿಸಲಾಗುತ್ತಿದೆ. ಗ್ರಾಹಕರು ಕ್ರೆಡಿಟ್‌ ಕಾರ್ಡ್‌ ಬಳಸಬೇಕಾಗುತ್ತದೆ ಮತ್ತು ಖರೀದಿಯ ಮೊತ್ತವನ್ನು ಮೂರು, ಆರು ಅಥವಾ 12 ತಿಂಗಳ ಕಂತುಗಳಲ್ಲಿ ಪಾವತಿಸಬೇಕಾಗುತ್ತದೆ. ಆದರೆ ಇಎಂಐ ಸೌಲಭ್ಯ ಸಿಗಬೇಕಾದರೆ ಕನಿಷ್ಠ 5,000 ರೂ ಮೌಲ್ಯದ ಮಾವಿನ ಹಣ್ಣುಗಳನ್ನು ಖರೀದಿ ಮಾಡಬೇಕಾಗುತ್ತದೆ. ಇದುವರೆಗೆ ನಾಲ್ವರು ಗ್ರಾಹಕರು ಈ ಸೌಲಭ್ಯದ ಮೂಲಕ ಮಾವಿನ ಹಣ್ಣುಗಳನ್ನು ಖರೀದಿಸಿದ್ದಾರೆ ಎಂದು ಗೌರವ್‌ ಸನಸ್‌ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com