
ನವದೆಹಲಿ: ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಅಯೋಧ್ಯೆ ಭೇಟಿಯ ನಂತರ ಸೋಮವಾರ ವಾಗ್ದಾಳಿ ನಡೆಸಿರುವ ರಾಜ್ಯಸಭಾ ಸಂಸದ ಕಪಿಲ್ ಸಿಬಲ್, 'ಪಿತೂರಿಗಾರರು, ಅವಕಾಶವಾದಿಗಳು ಮತ್ತು ನಂಬಿಕೆ ದ್ರೋಹ ಮಾಡುವವರು' ಬಾಳಾಸಾಹೇಬ್ ಠಾಕ್ರೆ ಅವರ ಪರಂಪರೆಯನ್ನು ಮುಂದುವರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಕಳೆದ ವರ್ಷ ಜೂನ್‌ನಲ್ಲಿ ಮುಖ್ಯಮಂತ್ರಿಯಾದ ನಂತರ ಮೊದಲ ಬಾರಿಗೆ ಶಿವಸೇನೆ ನಾಯಕ ಶಿಂಧೆ ಭಾನುವಾರ ಅಯೋಧ್ಯೆಗೆ ಭೇಟಿ ನೀಡಿದರು. ಅವರು ಸಾವಿರಾರು ಶಿವಸೈನಿಕರೊಂದಿಗೆ ಉತ್ತರ ಪ್ರದೇಶದ ಅಯೋಧ್ಯೆಗೆ ಬಂದಿದ್ದರು.
ಈ ಕುರಿತು ಟ್ವೀಟ್ ಮಾಡಿರುವ ಸಿಬಲ್, 'ಅಯೋಧ್ಯೆಯಲ್ಲಿ ಶಿಂಧೆ: ಭಗವಾನ್ ರಾಮನ ಆಯ್ಕೆ: ತ್ಯಾಗ, ಸತ್ಯದ ಮಾರ್ಗ, ಸರಿಯಾದ ನಡತೆ. ಬಾಳಾಸಾಹೇಬರೂ ಆ ಗುಣಗಳನ್ನು ಮೈಗೂಡಿಸಿಕೊಂಡಿದ್ದರು. ಪಿತೂರಿಗಾರರು, ಅವಕಾಶವಾದಿಗಳು, ನಂಬಿಕೆ ದ್ರೋಹ ಮಾಡುವವರು ಬಾಳಾಸಾಹೇಬರ ಪರಂಪರೆಯನ್ನು ಮುಂದುವರಿಸಲು ಸಾಧ್ಯವಿಲ್ಲ' ಎಂದು ಶಿಂಧೆ ವಿರುದ್ಧ ಕಿಡಿಕಾರಿದ್ದಾರೆ.
ತಮ್ಮ ಪಕ್ಷದ ಮತ್ತು ಬಿಜೆಪಿಯ ಸಿದ್ಧಾಂತ ಒಂದೇ ಆಗಿದ್ದು, ಮುಂದಿನ ವರ್ಷ ರಾಜ್ಯದಾದ್ಯಂತ ಕೇಸರಿ ಧ್ವಜವನ್ನು ಹಾರಿಸುತ್ತೇವೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಭಾನುವಾರ ಹೇಳಿದ್ದಾರೆ.
'ನಮ್ಮ ಪಕ್ಷದ ಪಾತ್ರ ಸ್ಪಷ್ಟವಾಗಿದೆ. ಬಿಜೆಪಿ ಜೊತೆ ಶಿವಸೇನೆ ಮೈತ್ರಿ ಮಾಡಿಕೊಂಡಿದೆ. ನಮ್ಮ ಸಿದ್ಧಾಂತವೂ ಹಿಂದುತ್ವವೇ ಆಗಿದೆ. ಅಯೋಧ್ಯೆಯಿಂದ ಹೊಸ ಶಕ್ತಿಯೊಂದಿಗೆ ನಮ್ಮ ರಾಜ್ಯಕ್ಕೆ ಹೋಗಿ ಜನರ ಸೇವೆ ಮಾಡುತ್ತೇವೆ. 2024 ರಲ್ಲಿ, ಶಿವಸೇನೆ ಮತ್ತು ಬಿಜೆಪಿಯ ‘ಭಗವಾ’ (ಕೇಸರಿ ಧ್ವಜ) ಇಡೀ ರಾಜ್ಯದಲ್ಲಿ ಅನಾವರಣಗೊಳ್ಳಲಿದೆ' ಎಂದು ಅವರು ಅಯೋಧ್ಯೆಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಹೇಳಿದರು.
ಮುಂದಿನ ವರ್ಷ ಲೋಕಸಭೆ ಚುನಾವಣೆ ಹಾಗೂ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ನಡೆಯಲಿದೆ. ಉದ್ಧವ್ ಠಾಕ್ರೆ ವಿರುದ್ಧ ಬಂಡೆದ್ದ ಶಿಂಧೆ ನಡೆ ಕಳೆದ ವರ್ಷ ಶಿವಸೇನೆಯನ್ನು ವಿಭಜಿಸಿತು ಮತ್ತು ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರವನ್ನು ಉರುಳಿಸಿತು.
Advertisement