
ಮುಂಬೈ: ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಕ್ಕಾಗಿ ನೆರೆಯ ಥಾಣೆ ಜಿಲ್ಲೆಯ 16 ವರ್ಷದ ಬಾಲಕನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
ಮುಂಬೈ ಪೊಲೀಸರ ಮುಖ್ಯ ನಿಯಂತ್ರಣ ಕೊಠಡಿಗೆ ಸೋಮವಾರ ಬೆದರಿಕೆ ಕರೆ ಬಂದಿದೆ. ನಂತರ ಪೊಲೀಸರು ತನಿಖೆ ಆರಂಭಿಸಿದ್ದು, ತಾಂತ್ರಿಕ ಸಹಾಯದಿಂದ ಮುಂಬೈನಿಂದ 70 ಕಿಮೀ ದೂರದ ಥಾಣೆ ಜಿಲ್ಲೆಯ ಶಹಾಪುರದಿಂದ ಕರೆ ಬಂದಿರುವ ಬಗ್ಗೆ ಪತ್ತೆಹಚ್ಚಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಪೊಲೀಸ್ ತಂಡ ಶಹಾಪುರಕ್ಕೆ ತೆರಳಿದಾಗ ಅಲ್ಲಿ 16 ವರ್ಷದ ಬಾಲಕ ಬೆದರಿಕೆ ಕರೆ ಮಾಡಿರುವುದು ಪತ್ತೆಯಾಯಿತು. ರಾಜಸ್ಥಾನ ಮೂಲದ ಬಾಲಕನನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದರು.
ಮುಂದಿನ ಕಾನೂನು ಪ್ರಕ್ರಿಯೆಗಾಗಿ ಮುಂಬೈನ ಆಜಾದ್ ಮೈದಾನ ಪೊಲೀಸರಿಗೆ ಬಾಲಕನನ್ನು ಹಸ್ತಾಂತರಿಸಲಾಗುವುದು. 57 ವರ್ಷದ ನಟನಿಗೆ ಬೆದರಿಕೆ ಹಾಕಿರುವ ಹುಡುಗನ ಉದ್ದೇಶವೇನೆಂದು ತಿಳಿದುಕೊಳ್ಳಲು ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಮುಂಬೈ ಪೊಲೀಸರು ಕಳೆದ ತಿಂಗಳು ಸಲ್ಮಾನ್ ಖಾನ್ ಅವರಿಗೆ ಬೆದರಿಕೆ ಇ-ಮೇಲ್ ಬಂದ ನಂತರ ಅವರ ಭದ್ರತೆಯನ್ನು ಹೆಚ್ಚಿಸಿದರು. ಬೆದರಿಕೆ ವಿಚಾರವಾಗಿ ಈ ಹಿಂದೆ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಮತ್ತು ಗೋಲ್ಡಿ ಬ್ರಾರ್ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಪ್ರಸ್ತುತ ಪಂಜಾಬ್ ಜೈಲಿನಲ್ಲಿರುವ ಬಿಷ್ಣೋಯ್ ಮತ್ತು ಗೋಲ್ಡಿ ಬ್ರಾರ್ ಗಾಯಕ ಸಿಧು ಮೂಸೆವಾಲಾ ಹತ್ಯೆಯ ಆರೋಪಿಗಳಾಗಿದ್ದಾರೆ.
'ದಬಾಂಗ್' ನಟನಿಗೆ ಈ ಹಿಂದೆ ಪೊಲೀಸರು Y+ ಭದ್ರತೆಯನ್ನು ಒದಗಿಸಿದ್ದರು ಮತ್ತು ಬಳಿಕ ನಟ ತಮ್ಮ ವೈಯಕ್ತಿಕ ಭದ್ರತಾ ಸಿಬ್ಬಂದಿಯೊಂದಿಗೆ ಬುಲೆಟ್ ಪ್ರೂಫ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು.
Advertisement