ರಾಂಚಿ: ರಾಂಚಿಯ ಸಚಿವಾಲಯಕ್ಕೆ ಮುತ್ತಿಗೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಅರ್ಜುನ್ ಮುಂಡಾ, ಐವರು ಬಿಜೆಪಿ ಸಂಸದರು ಮತ್ತು ಮೂವರು ಶಾಸಕರು ಸೇರಿದಂತೆ 41 ಜನರ ವಿರುದ್ಧ ಜಿಲ್ಲಾಡಳಿತ ಎಫ್‌ಐಆರ್ ದಾಖಲಿಸಿದೆ.
ಇವರಲ್ಲದೆ ಸಾವಿರಾರು ಅಪರಿಚಿತ ಬಿಜೆಪಿ ಕಾರ್ಯಕರ್ತರನ್ನೂ ಆರೋಪಿಗಳನ್ನಾಗಿ ಮಾಡಲಾಗಿದೆ.
'ಹೇಮಂತ್ ಹಠಾವೋ, ಜಾರ್ಖಂಡ್ ಬಚಾವೋ’ ಘೋಷಣೆಯೊಂದಿಗೆ ಬಿಜೆಪಿ ಮಂಗಳವಾರ ಪ್ರತಿಭಟನೆ ನಡೆಸಿತ್ತು. ಸೆಕ್ರೆಟರಿಯೇಟ್‌ಗೆ ಘೇರಾವ್ ಮಾಡಲು ಪ್ರತಿಭಟನಾಕಾರರು ಪೊಲೀಸ್ ಬ್ಯಾರಿಕೇಡ್‌ಗಳನ್ನು ಮುರಿದು ಮುನ್ನುಗ್ಗಿದರು. ಅವರನ್ನು ತಡೆಯಲು ಪೊಲೀಸರು ಲಾಠಿ ಚಾರ್ಜ್ ಮಾಡಿದರು ಮತ್ತು ಪ್ರತಿಯಾಗಿ ಬಿಜೆಪಿ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದರು.
ಗಲಾಟೆ ಕನಿಷ್ಠ ಮೂರು ಗಂಟೆಗಳ ಕಾಲ ನಡೆಯಿತು ಮತ್ತು 60ಕ್ಕೂ ಹೆಚ್ಚು ಜನರು ಗಾಯಗೊಂಡರು. ಪೊಲೀಸರ ವಿರುದ್ಧ ಪ್ರತಿಭಟಿಸಿ ಬುಧವಾರ ಕರಾಳ ದಿನ ಆಚರಿಸಲಾಗುವುದು ಎಂದು ಕೇಸರಿ ಪಕ್ಷ ಘೋಷಿಸಿದೆ.
ಈ ಪ್ರಕರಣದಲ್ಲಿ ರಾಂಚಿ ಜಿಲ್ಲೆಯ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಉಪೇಂದ್ರ ಕುಮಾರ್ ಅವರ ಹೇಳಿಕೆಯ ಮೇರೆಗೆ ದಾಖಲಾದ ಎಫ್‌ಐಆರ್‌ನಲ್ಲಿ, ಎಲ್ಲಾ ಆರೋಪಿಗಳ ವಿರುದ್ಧ ಗಲಭೆ, ಗಲಭೆಗೆ ಪ್ರಚೋದನೆ, ಸರ್ಕಾರದ ಸೂಚನೆಗಳನ್ನು ಉಲ್ಲಂಘಿಸುವುದು, ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸುವುದು, ಅಪರಾಧಕ್ಕೆ ಪ್ರಚೋದನೆ ಮತ್ತು ಇತರ ವ್ಯಕ್ತಿಗಳಿಗೆ ಹಾನಿ ಉಂಟುಮಾಡುವ ಆರೋಪಗಳನ್ನು ಹೊರಿಸಲಾಗಿದೆ.
ಏಪ್ರಿಲ್ 11 ರಂದು ಬಿಜೆಪಿಯು ಸೆಕ್ರೆಟರಿಯೇಟ್ ಮುತ್ತಿಗೆಯನ್ನು ಘೋಷಿಸಲಾಗಿತ್ತು ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ. ಇದಕ್ಕಾಗಿ ಜಿಲ್ಲಾಧಿಕಾರಿ ಮತ್ತು ಎಸ್‌ಎಸ್‌ಪಿ ಜಂಟಿಯಾಗಿ ಮ್ಯಾಜಿಸ್ಟ್ರೇಟ್, ಅಧಿಕಾರಿಗಳು ಮತ್ತು ಭದ್ರತಾ ಪಡೆಗಳ ನಿಯೋಜನೆಗೆ ಸಂಬಂಧಿಸಿದ ಆದೇಶಗಳನ್ನು ಹೊರಡಿಸಿದ್ದಾರೆ. ಸೆಕ್ಷನ್ 144 ರ ಅಡಿಯಲ್ಲಿ ಈ ಪ್ರದೇಶದಲ್ಲಿ ಬೆಳಿಗ್ಗೆ 8 ರಿಂದ ರಾತ್ರಿ 11.30 ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಘಟನೆಯಲ್ಲಿ ಪೊಲೀಸ್ ಸಿಬ್ಬಂದಿ ಮತ್ತು ವರದಿ ಮಾಡುತ್ತಿದ್ದ ಕೆಲವು ಪತ್ರಕರ್ತರು ಗಲಭೆಯಲ್ಲಿ ಗಾಯಗೊಂಡಿದ್ದಾರೆ. ಗುಂಪನ್ನು ನಿಯಂತ್ರಿಸಲು ಜಲಫಿರಂಗಿ ಮತ್ತು ಅಶ್ರುವಾಯು ಪ್ರಯೋಗಿಸಲಾಯಿತು.
ಸಂಸದರಾದ ಸಂಜಯ್ ಸೇಠ್, ನಿಶಿಕಾಂತ್ ದುಬೆ, ಸಮೀರ್ ಓರಾನ್ ಮತ್ತು ಸುನೀಲ್ ಕುಮಾರ್ ಸಿಂಗ್, ಮಾಜಿ ಮುಖ್ಯಮಂತ್ರಿ ರಘುವರ್ ದಾಸ್, ಶಾಸಕರಾದ ಅಮಿತ್ ಮಂಡಲ್, ಬಾಬುಲಾಲ್ ಮರಾಂಡಿ, ಬಿರಾಂಚಿ ನಾರಾಯಣ ಸಿಂಗ್ ಮತ್ತು ಇತರರನ್ನು ಆರೋಪಿಗಳೆಂದು ಹೆಸರಿಸಲಾಗಿದೆ.
Advertisement