2024ರಲ್ಲಿ ಬಿಜೆಪಿಗೆ 35ಕ್ಕೂ ಹೆಚ್ಚು ಸೀಟು ನೀಡಿ, 2025ಕ್ಕೂ ಮುನ್ನ ಬಂಗಾಳ ಸರ್ಕಾರ ಪತನವಾಗಲಿದೆ: ಅಮಿತ್ ಶಾ

2024ರ ಲೋಕಸಭೆ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶುಕ್ರವಾರ ಪಶ್ಚಿಮ ಬಂಗಾಳದಲ್ಲಿ ಚುನಾವಣಾ ರಣಕಹಳೆಯನ್ನು ಮೊಳಗಿಸಿದರು. ಬಿಜೆಪಿಯನ್ನು ಅಧಿಕಾರಕ್ಕೆ ತರಲು ಮತ್ತು ನರೇಂದ್ರ ಮೋದಿ ಅವರನ್ನು ಪ್ರಧಾನಿಯಾಗಿ ಆಯ್ಕೆ ಮಾಡಲು ರಾಜ್ಯದ 42 ಸ್ಥಾನಗಳಲ್ಲಿ 35ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲವು ನೀಡುವಂತೆ ಕೇಳಿದರು. 
ಬಿರ್ಭುಮ್ ಜಿಲ್ಲೆಯ ಸೂರಿಯಲ್ಲಿ ಸಾರ್ವಜನಿಕ ರ‍್ಯಾಲಿಯನ್ನುದ್ದೇಶಿಸಿ ಅಮಿತ್ ಶಾ ಮಾತನಾಡಿದರು
ಬಿರ್ಭುಮ್ ಜಿಲ್ಲೆಯ ಸೂರಿಯಲ್ಲಿ ಸಾರ್ವಜನಿಕ ರ‍್ಯಾಲಿಯನ್ನುದ್ದೇಶಿಸಿ ಅಮಿತ್ ಶಾ ಮಾತನಾಡಿದರು
Updated on: 

ಕೋಲ್ಕತ್ತಾ: 2024ರ ಲೋಕಸಭೆ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶುಕ್ರವಾರ ಪಶ್ಚಿಮ ಬಂಗಾಳದಲ್ಲಿ ಚುನಾವಣಾ ರಣಕಹಳೆಯನ್ನು ಮೊಳಗಿಸಿದರು. ಬಿಜೆಪಿಯನ್ನು ಅಧಿಕಾರಕ್ಕೆ ತರಲು ಮತ್ತು ನರೇಂದ್ರ ಮೋದಿ ಅವರನ್ನು ಪ್ರಧಾನಿಯಾಗಿ ಆಯ್ಕೆ ಮಾಡಲು ರಾಜ್ಯದ 42 ಸ್ಥಾನಗಳಲ್ಲಿ 35ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲವು ನೀಡುವಂತೆ ಕೇಳಿದರು. 

ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರ ಸರ್ಕಾರ 2025ರ ಮೊದಲು ಹಳಿತಪ್ಪುತ್ತದೆ ಎಂದು ಅವರು ಹೇಳಿದ್ದಾರೆ.

'ವಿಧಾನಸಭೆ ಚುನಾವಣೆಯಲ್ಲಿ ಬಂಗಾಳದ ಜನರು ನಮಗೆ 77 ಸ್ಥಾನಗಳನ್ನು ನೀಡಿದ್ದಾರೆ ಮತ್ತು ಇದು ದೊಡ್ಡ ಜವಾಬ್ದಾರಿಯಾಗಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ 35ಕ್ಕೂ ಹೆಚ್ಚು ಸ್ಥಾನಗಳನ್ನು ನೀಡಿ ಮೋದಿಜಿ ಮತ್ತೊಮ್ಮೆ ಪ್ರಧಾನಿಯಾಗುವುದನ್ನು ಖಾತ್ರಿಪಡಿಸಿಕೊಳ್ಳಿ. ದೀದಿ-ಭಾಯಿಪೋ (ಮಮತಾ ಮತ್ತು ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ) ಅವರ ಅಪರಾಧಗಳನ್ನು ತಡೆಯುವ ಏಕೈಕ ಮಾರ್ಗವೆಂದರೆ ಬಿಜೆಪಿಯನ್ನು ಅಧಿಕಾರಕ್ಕೆ ತರುವುದು. ಬಂಗಾಳವನ್ನು ಒಳನುಸುಳುವಿಕೆ, ಗೋವು ಕಳ್ಳಸಾಗಣೆ ಮತ್ತು ಭ್ರಷ್ಟಾಚಾರದಿಂದ ಮುಕ್ತಗೊಳಿಸುವ ಏಕೈಕ ರಾಜಕೀಯ ಶಕ್ತಿ ಇದಾಗಿದೆ. 2024ರಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತನ್ನಿ ಮತ್ತು 2025ರ ಮೊದಲು ಮಮತಾ ಬ್ಯಾನರ್ಜಿ ಅವರ ಸರ್ಕಾರ ಪತನವಾಗಲಿದೆ' ಎಂದು ಬಿರ್ಭುಮ್ ಜಿಲ್ಲೆಯ ಸೂರಿಯಲ್ಲಿ ರ‍್ಯಾಲಿಯನ್ನುದ್ದೇಶಿಸಿ ಶಾ ಹೇಳಿದರು.

ಹೌರಾ ಮತ್ತು ಹೂಗ್ಲಿಯಲ್ಲಿ ರಾಮನವಮಿ ಮೆರವಣಿಗೆಯಲ್ಲಿ ನಡೆದ ಹಿಂಸಾಚಾರವನ್ನು ಉಲ್ಲೇಖಿಸಿದ ಶಾ, ಟಿಎಂಸಿ ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. 'ರಾಮನವಮಿ ಮೆರವಣಿಗೆಗಳ ಮೇಲಿನ ದಾಳಿಯು ಟಿಎಂಸಿ ಸರ್ಕಾರದ ಪತನವನ್ನು ಸೂಚಿಸುತ್ತದೆ ಮತ್ತು ಅದರ ತುಷ್ಟೀಕರಣದ ರಾಜಕೀಯವಾಗಿದೆ. ನೀವು ನಮ್ಮನ್ನು ಅಧಿಕಾರಕ್ಕೆ ತಂದರೆ, ರಾಮನವಮಿಯಂದು ಯಾರೂ ದಾಳಿ ಮಾಡಲು ಧೈರ್ಯ ಮಾಡುವುದಿಲ್ಲ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ' ಎಂದು ಅವರು ಹೇಳಿದರು.

ರಾಜ್ಯದಲ್ಲಿ ಮೇ ತಿಂಗಳಲ್ಲಿ ಪಂಚಾಯಿತಿ ಚುನಾವಣೆ ನಡೆಯಲಿದ್ದು, ಅಮಿತ್ ಶಾ ಅದರ ಬಗ್ಗೆ ಮಾತನಾಡಲಿಲ್ಲ. ಲೋಕಸಭೆ ಚುನಾವಣೆಯೇ ಬಿಜೆಪಿಗೆ ಆದ್ಯತೆಯಾಗಿರುವುದರಿಂದ, ಕೇಸರಿ ಪಾಳಯವು ಗ್ರಾಮಾಂತರ ಚುನಾವಣೆಯನ್ನು ಗುರಿಯಾಗಿಸಿಕೊಂಡಿಲ್ಲ ಎಂದು ಮೂಲಗಳು ತಿಳಿಸಿವೆ.

ಮಮತಾ ಮತ್ತು ಅಭಿಷೇಕ್ ವಿರುದ್ಧ ವಾಗ್ದಾಳಿ ನಡೆಸಿದ ಶಾ, 'ದೀದಿ ಅವರಿಗೆ ಬಂಗಾಳದ ಯುವಕರ ಬಗ್ಗೆ ಕಾಳಜಿ ಇಲ್ಲ. ಅವರ ಸೋದರಳಿಯನನ್ನು ಮುಂದಿನ ಸಿಎಂ ಮಾಡುವುದು ಅವರ ಏಕೈಕ ಗುರಿಯಾಗಿದೆ. ದೀದಿ ಅವರು ಎಷ್ಟು ಬೇಕಾದರೂ ಕನಸು ಕಾಣಬಹುದು ಆದರೆ, ರಾಜ್ಯದಲ್ಲಿ ಅಧಿಕಾರಕ್ಕೇರುವುದು ಬಿಜೆಪಿಯಾಗಿರುತ್ತದೆ' ಎಂದು ಹೇಳಿದರು.

ಖಾರವಾಗಿ ಪ್ರತಿಕ್ರಿಯಿಸಿದ ಟಿಎಂಸಿ 

ಅಮಿತ್ ಶಾ ಅವರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಟಿಎಂಸಿ, ಇದು ಕೇಂದ್ರ ಸಚಿವರು ಹೇಗೆ 'ಚುನಾಯಿತ ಸರ್ಕಾರವನ್ನು ಉರುಳಿಸಲು ಬಹಿರಂಗವಾಗಿ ಬೆದರಿಕೆ ಹಾಕುತ್ತಾರೆ' ಎಂಬುದನ್ನು ತೋರಿಸಿದೆ ಎಂದಿದೆ. 

ಲೋಕಸಭಾ ಚುನಾವಣೆಯಲ್ಲಿ 35 ಸ್ಥಾನಗಳಲ್ಲಿ ಗೆಲ್ಲುವ ಕನಸನ್ನು ಅವರು ಕಾಣಬಹುದು. ಆದರೆ, 2021ರ ವಿಧಾನಸಭಾ ಚುನಾವಣೆಯಲ್ಲಿ ಆದಂತೆ ಆಗಲಿದೆ. ಚುನಾಯಿತ ಸರ್ಕಾರದ ಅವಧಿ ಪೂರ್ಣಗೊಳ್ಳುವ ಮುನ್ನವೇ ಕೇಂದ್ರ ಸಚಿವರೊಬ್ಬರು ಅದನ್ನು ಉರುಳಿಸುವುದಾಗಿ ಬಹಿರಂಗವಾಗಿ ಬೆದರಿಕೆ ಹಾಕುವುದು ಹೇಗೆ?. ರಾಜ್ಯ ಸರ್ಕಾರವನ್ನು ಉರುಳಿಸಲು ಪಿತೂರಿ ನಡೆಸಲಾಗುತ್ತಿದೆ ಎಂಬುದು ಸ್ಪಷ್ಟವಾಗಿದೆ ಎಂದು ಟಿಎಂಸಿ ವಕ್ತಾರ ಕುನಾಲ್ ಘೋಷ್ ಹೇಳಿದರು.

ಕುಟುಂಬ ರಾಜಕಾರಣದ ಕುರಿತು ಟಿಎಂಸಿ ಮೇಲೆ ಅಮಿತ್ ಶಾ ನಡೆಸಿದ ವಾಗ್ದಾಳಿಯನ್ನು ಉಲ್ಲೇಖಿಸಿದ ಘೋಷ್, 'ಬಂಗಾಳದಲ್ಲಿ ಬಿಜೆಪಿ ನಾಯಕ ಸುವೇಂದು ಅಧಿಕಾರಿಯೇ ಸ್ವತಃ ಕುಟುಂಬ ರಾಜಕಾರಣದ ಉತ್ಪನ್ನ ಎಂಬುದನ್ನು ಶಾ ಮರೆತಂತಿದೆ' ಎಂದರು.
ಸುವೇಂದು ಅಧಿಕಾರಿ ಅವರು ಟಿಎಂಸಿಯಿಂದ ಬಿಜೆಪಿಗೆ ಸೇರ್ಪಡೆಗೊಂಡ ಸಂಸದ ಸಿಸಿರ್ ಅಧಿಕಾರಿ ಅವರ ಪುತ್ರ. ಅವರ ಕುಟುಂಬದ ಹಲವಾರು ಸದಸ್ಯರು ಬಂಗಾಳದಲ್ಲಿ ರಾಜಕೀಯ ನಾಯಕರೂ ಆಗಿದ್ದಾರೆ.

2019ರ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದ 42 ಲೋಕಸಭಾ ಸ್ಥಾನಗಳಲ್ಲಿ 18 ರಲ್ಲಿ ಬಿಜೆಪಿ ಜಯಗಳಿಸಿತ್ತು ಮತ್ತು ಈ ಸಂಖ್ಯೆಯನ್ನು ದ್ವಿಗುಣಗೊಳಿಸಲು ಅಪಾರ ಸಾಂಸ್ಥಿಕ ಸವಾಲಿನ ಅಗತ್ಯವಿದೆ ಎಂದು ರಾಜಕೀಯ ವೀಕ್ಷಕರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com