ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದಿದ್ದ ಮತ್ತೊಂದು ಚೀತಾ ಸಾವು, ತಿಂಗಳಲ್ಲಿ 2ನೇ ಸಾವು

ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದಿದ್ದ ಮತ್ತೊಂದು ಚೀತಾ ಸಾವನ್ನಪ್ಪಿದ್ದು, ಒಂದು ತಿಂಗಳ ಅವಧಿಯಲ್ಲಿ 2ನೇ ಚೀತಾ ಸಾವನ್ನಪ್ಪಿದೆ.
ಚೀತಾ
ಚೀತಾ

ಕುನೋ: ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದಿದ್ದ ಮತ್ತೊಂದು ಚೀತಾ ಸಾವನ್ನಪ್ಪಿದ್ದು, ಒಂದು ತಿಂಗಳ ಅವಧಿಯಲ್ಲಿ 2ನೇ ಚೀತಾ ಸಾವನ್ನಪ್ಪಿದೆ.

ಭಾರತದಲ್ಲಿ ನಶಿಸಿ ಹೋಗಿದ್ದ ಚೀತಾಗಳನ್ನು ಮತ್ತೆ ಬೆಳೆಸುವ ಮಹತ್ವಾಕಾಂಕ್ಷಿ ಚೀತಾ ಮರು ಪರಿಚಯ ಯೋಜನೆಗೆ ಮತ್ತೊಂದು ಹಿನ್ನಡೆಯಾಗಿದ್ದು, ದಕ್ಷಿಣ ಆಫ್ರಿಕಾದಿಂದ ಈ ವರ್ಷವಷ್ಟೇ ಭಾರತಕ್ಕೆ ತರಲಾಗಿದ್ದ ಉದಯ್ ಎಂಬ ಹೆಸರಿನ ಗಂಡು ಚೀತಾ ಅನಾರೋಗ್ಯದಿಂದ ಭಾನುವಾರ ಸಂಜೆ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಮೃತಪಟ್ಟಿದೆ. ಆರು ವರ್ಷದ ಚೀತಾ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಅದಕ್ಕೆ ಉಂಟಾಗಿದ್ದ ಅನಾರೋಗ್ಯ ಸಮಸ್ಯೆ ಏನು ಎಂದು ತಿಳಿಯಲು ಮರಣೋತ್ತರ ಪರೀಕ್ಷೆ ವರದಿಗಾಗಿ ಅರಣ್ಯ ಅಧಿಕಾರಿಗಳು ಕಾಯುತ್ತಿದ್ದಾರೆ.

ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ತರಲಾದ 12 ಚೀತಾಗಳನ್ನು ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ನಿಗಾವಣೆಯಲ್ಲಿ ಇರಿಸಲಾಗಿದೆ. ಭಾನುವಾರ ಬೆಳಿಗ್ಗೆ 9 ಗಂಟೆಗೆ ಬೃಹತ್ ಆವರಣದಲ್ಲಿ ದೈನಂದಿನ ತಪಾಸಣೆ ನಡೆಸುವಾಗ ಎರಡನೇ ಸಂಖ್ಯೆಯ ಆವರಣದಲ್ಲಿ ಚೀತಾ ಉದಯ್ ತಲೆಯನ್ನು ಕೆಳಕ್ಕೆ ಬಗ್ಗಿಸಿಕೊಂಡು ಕುಳಿತಿತ್ತು. ಅದು ನಡೆಯುವಾಗಲೂ ಪರದಾಡುತ್ತಿರುವುದನ್ನು ಅಧಿಕಾರಿಗಳು ಗಮನಿಸಿದ್ದರು. ಒಂದು ದಿನದ ಹಿಂದಷ್ಟೇ ಮಾಮೂಲಿ ಆರೋಗ್ಯ ತಪಾಸಣೆ ವೇಳೆ ಉದಯ್ ಆರೋಗ್ಯಯುತವಾಗಿ ಇರುವುದು ಕಂಡುಬಂದಿತ್ತು. ಆದರೆ 24 ಗಂಟೆಗಳ ಅವಧಿಯಲ್ಲಿ ಚೀತಾ ಆರೋಗ್ಯ ಹದಗೆಟ್ಟಿದ್ದು ಹೇಗೆ ಎಂಬುದರ ಕುರಿತು ಅಧಿಕಾರಿಗಳು ತನಿಖೆ ನಡೆಸಿದ್ದಾರೆ.

ಚೀತಾದ ಅಸ್ವಸ್ಥತೆ ಬಗ್ಗೆ ಪಶು ವೈದ್ಯಕೀಯ ತಂಡಕ್ಕೆ ಅಧಿಕಾರಿಗಳು ಮಾಹಿತಿ ನೀಡಿದ್ದರು. ಚೀತಾ ಅನಾರೋಗ್ಯಕ್ಕೆ ತುತ್ತಾಗಿರುವುದನ್ನು ವೈದ್ಯರು ದೃಢಪಡಿಸಿದ್ದರು. ಅದಕ್ಕೆ ಚಿಕಿತ್ಸೆ ನೀಡಲು ಕೂಡಲೇ ಅದನ್ನು ಶಾಂತಗೊಳಿಸುವ ಅಗತ್ಯ ಇದೆ ಎಂದು ಪರಿಣತರು ಅಭಿಪ್ರಾಯಪಟ್ಟಿದ್ದರು. ಅದಕ್ಕೆ ಅರವಳಿಕೆ ಮದ್ದು ನೀಡಲು ಅನುಮತಿ ಕೊಡುವಂತೆ ವನ್ಯಜೀವಿ ಪಿಸಿಸಿಎಪ್‌ಗೆ ಕೋರಲಾಗಿತ್ತು. ಬೆಳಿಗ್ಗೆ 11 ಗಂಟೆಗೆ ಉದಯ್‌ಗೆ ಚಿಕಿತ್ಸೆ ನೀಡಲು ಆರಂಭಿಸಲಾಗಿತ್ತು. ಅದರ ಆರೋಗ್ಯ ಸ್ಥಿತಿಯನ್ನು ಗಮನಿಸಿ, ಪ್ರತ್ಯೇಕ ವಾರ್ಡ್‌ಗೆ ವರ್ಗಾಯಿಸಲಾಗಿತ್ತು. ನಿರಂತರ ನಿಗಾದಲ್ಲಿ ಇರಿಸಲಾಗಿತ್ತು. ಆದರೆ ಚಿಕಿತ್ಸೆ ವೇಳೆ ಸಂಜೆ 4ರ ಸುಮಾರಿಗೆ ಅದು ಮೃತಪಟ್ಟಿದೆ.

ಇದಕ್ಕೂ ಮುನ್ನ ನಮೀಬಿಯಾದಿಂದ ತರಲಾಗಿದ್ದ ಎಂಟು ಚೀತಾಗಳ ಪೈಕಿ ಸಾಶಾ ಎಂಬ ಹೆಣ್ಣು ಚೀತಾ ಮಾರ್ಚ್‌ 27ರಂದು ಮೂತ್ರಪಿಂಡ ವೈಫಲ್ಯದಿಂದ ಮೃತಪಟ್ಟಿತ್ತು. ನಮೀಬಿಯಾದಿಂದ ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಎಂಟು ಚೀತಾಗಳನ್ನು ತರಿಸಲಾಗಿತ್ತು. ಹಾಗೆಯೇ ಈ ವರ್ಷದ ಫೆಬ್ರವರಿಯಲ್ಲಿ ದಕ್ಷಿಣ ಆಫ್ರಿಕಾದಿಂದ 12 ಚೀತಾಗಳು ಭಾರತಕ್ಕೆ ಬಂದಿದ್ದವು. ಒಟ್ಟು 20 ಚೀತಾಗಳ ಪೈಕಿ 18 ಚೀತಾಗಳು ಉಳಿದಂತಾಗಿದೆ.

'ಸಾಶಾ' ಸಾವಿನ ಬೆನ್ನಲ್ಲೇ ಮತ್ತೊಂದು ಹೆಣ್ಣು ಚೀತಾ ಸಿಯಾಯಾ ನಾಲ್ಕು ಮರಿಗಳಿಗೆ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಜನ್ಮ ನೀಡಿತ್ತು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com