ನವದೆಹಲಿ: ಮಹಿಳೆಯರ ಮೇಲಿನ ದೌರ್ಜನ್ಯದ ವಿಚಾರವಾಗಿ ಪ್ರತಿಪಕ್ಷಗಳ ಸಂಸದರು ಮತ್ತು ಆಡಳಿತ ಪಕ್ಷದ ಸದಸ್ಯರ ಗದ್ದಲದ ನಡುವೆ, ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧಂಖರ್ ಅವರು ಸದನವನ್ನು ಆಗಸ್ಟ್ 7 ಕ್ಕೆ ಮುಂದೂಡಿದರು.
ರಾಜಸ್ಥಾನ ಮತ್ತು ಮಣಿಪುರ ಹಿಂಸಾಚಾರದಲ್ಲಿನ ಮಹಿಳೆಯರ ಮೇಲಿನ ದೌರ್ಜನ್ಯದ ಬಗ್ಗೆ ಚರ್ಚೆಗೆ ಒತ್ತಾಯಿಸಿ ವಿರೋಧ ಪಕ್ಷಗಳು ಮತ್ತು ಆಡಳಿತ ಪಕ್ಷದ ಸದಸ್ಯರ ಗದ್ದಲದ ನಡುವೆ ಸದನವನ್ನು ಮುಂದಿನ ಸೋಮವಾರ ಬೆಳಿಗ್ಗೆ 11 ಗಂಟೆಗೆ ಮುಂದೂಡಲಾಯಿತು.
ಆಡಳಿತ ಪಕ್ಷದ ಸದಸ್ಯರು ರಾಜಸ್ಥಾನದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ವಿಷಯವನ್ನು ಚರ್ಚಿಸಲು ಬಯಸಿದವು. ಆದರೆ, ವಿರೋಧ ಪಕ್ಷಗಳು ಮಣಿಪುರದಲ್ಲಿ ನಡೆದ ಹಿಂಸಾಚಾರದ ಬಗ್ಗೆ ಚರ್ಚಿಸಲು ಒತ್ತಾಯಿಸಿದವು. ಈ ವೇಳೆ ಸದನದಲ್ಲಿ ತೀವ್ರ ಗದ್ದಲ ಉಂಟಾಯಿತು.
ಇದಕ್ಕೂ ಮುನ್ನ ಇಂದು ರಾಜ್ಯಸಭೆಯನ್ನು ಮಧ್ಯಾಹ್ನ 12 ಗಂಟೆಗೆ ಮುಂದೂಡಲಾಗಿತ್ತು.
ರಾಜ್ಯಸಭೆಯಲ್ಲಿ ಸಭಾನಾಯಕ ಪಿಯೂಷ್ ಗೋಯಲ್ ಅವರು, ರಾಜಸ್ಥಾನದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಈ ವಿಚಾರದ ಕುರಿತು ಚರ್ಚೆಯಾಗಲಿ ಎಂದು ಒತ್ತಾಯಿಸಿದರು. ಈ ವೇಳೆ, ವಿರೋಧ ಪಕ್ಷಗಳು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದವು.
ಸಭಾಪತಿ ಜಗದೀಪ್ ಧಂಖರ್ ಅವರು ವಿರೋಧ ಪಕ್ಷದ ನಾಯಕರು ಮಾತನಾಡಲು ಅವಕಾಶ ನೀಡಿದರು. ಈ ವೇಳೆ ಆಡಳಿತ ಪಕ್ಷದ ಸದಸ್ಯರು ರಾಜಸ್ಥಾನದ ಬಗ್ಗೆ ಘೋಷಣೆಗಳನ್ನು ಕೂಗಿದರು.
ಸಭಾಪತಿ ಜಗದೀಪ್ ಧಂಖರ್ ಅವರು, ನೀವು ವಿರೋಧ ಪಕ್ಷಗಳ ಸದಸ್ಯರು ಮಾತನಾಡುವುದನ್ನು ತೀವ್ರ ಗಮನದಿಂದ ಕೇಳಬೇಕು ಮತ್ತು ಕಲಾಪಕ್ಕೆ ಅಡ್ಡಿಪಡಿಸುವುದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದರು.
ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಖಜಾನೆ ಪೀಠಗಳತ್ತ (ಆಡಳಿತ ಪಕ್ಷದ ಸದಸ್ಯರು) ಕೈ ತೋರಿಸಿ, ರಾಜಸ್ಥಾನಕ್ಕೆ ಸಂಬಂಧಿಸಿದ ಯಾವುದೇ ವಿಷಯವನ್ನು ರಾಜ್ಯ ವಿಧಾನಸಭೆಯಲ್ಲಿ ಪ್ರಸ್ತಾಪಿಸಲಿ. 'ಅವರಿಗೆ ಶಕ್ತಿ ಇದ್ದರೆ, ಅಲ್ಲಿ (ರಾಜ್ಯ ವಿಧಾನಸಭೆ) ಸಮಸ್ಯೆಯನ್ನು ಪ್ರಸ್ತಾಪಿಸಿ' ಎಂದು ಹೇಳಿದರು.
ಆಡಳಿತ ಮತ್ತು ವಿರೋಧ ಪಕ್ಷಗಳ ಸದದ್ಯರ ಘೋಷಣೆಗಳ ಮಧ್ಯೆ ಮಣಿಪುರದ ಪರಿಸ್ಥಿತಿಯ ಬಗ್ಗೆ 267ನೇ ನಿಯಮದ ಅಡಿಯಲ್ಲಿ ಚರ್ಚೆಗೆ ಪ್ರತಿಪಕ್ಷಗಳ ಬೇಡಿಕೆಯನ್ನು ಪ್ರಸ್ತಾಪಿಸಲು ಖರ್ಗೆ ಪ್ರಯತ್ನಿಸಿದರು.
ನ್ಯಾಯಾಂಗಕ್ಕೆ ಸಂಬಂಧಿಸಿದ ಕೆಲವು ವಿನಾಯಿತಿಗಳನ್ನು ಹೊರತುಪಡಿಸಿ, ಸದನವು ಯಾವ ವಿಚಾರದ ಕುರಿತು ಬೇಕಿದ್ದರೂ ಚರ್ಚಿಸಬಹುದು ಎಂದು ತಾವು ಈಗಾಗಲೇ ಹೇಳಿರುವುದಾಗಿ ಸಭಾಪತಿ ತಿಳಿಸಿದರು.
ಮಣಿಪುರದ ಕುರಿತು ಚರ್ಚೆಗೆ ಅವಕಾಶ ನೀಡಲಾಗಿತ್ತು ಮತ್ತು ರಾಜಸ್ಥಾನ ಹಾಗೂ ಛತ್ತೀಸ್‌ಗಢಕ್ಕೆ ಸಂಬಂಧಿಸಿದ ವಿಷಯಗಳನ್ನು ಸಹ ಚರ್ಚಿಸಬಹುದು ಎಂದು ಧಂಖರ್ ಹೇಳಿದ್ದಾರೆ.
Advertisement