ಪ್ರಿಯಾಂಕಾ ಗಾಂಧಿ, ಕಮಲ್ ನಾಥ್ ಟ್ವಿಟರ್ ಖಾತೆಗಳಿಂದ ಮಧ್ಯ ಪ್ರದೇಶದ ಸರ್ಕಾರದ ವಿರುದ್ಧ ಪೋಸ್ಟ್; ಎಫ್‌ಐಆರ್ ದಾಖಲು

ಮಧ್ಯ ಪ್ರದೇಶದ ಬಿಜೆಪಿ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿರುವ ಪೋಸ್ಟ್‌ಗೆ ಸಂಬಂಧಿಸಿದಂತೆ ಪ್ರಿಯಾಂಕಾ ಗಾಂಧಿ ವಾದ್ರಾ, ಮಧ್ಯ ಪ್ರದೇಶದ ಕಾಂಗ್ರೆಸ್ ಮುಖ್ಯಸ್ಥ ಕಮಲ್ ನಾಥ್ ಮತ್ತು ಮಾಜಿ ಕೇಂದ್ರ ಸಚಿವ ಅರುಣ್ ಯಾದವ್ ಸೇರಿದಂತೆ ಹಿರಿಯ ಕಾಂಗ್ರೆಸ್ ನಾಯಕರ 'ಎಕ್ಸ್' ಖಾತೆ ನಿರ್ವಹಿವವರ ವಿರುದ್ಧ ಎಫ್ಐಆರ್ ದಾಖಲಿಸಿದ್ದೇವೆ ಎಂದು ಇಂದೋರ್ ಪೊಲೀಸರು ತಿಳಿಸಿದ್ದಾರ
ಪ್ರಿಯಾಂಕಾ ಗಾಂಧಿ
ಪ್ರಿಯಾಂಕಾ ಗಾಂಧಿ

ಇಂದೋರ್: ಮಧ್ಯ ಪ್ರದೇಶದ ಬಿಜೆಪಿ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿರುವ ಪೋಸ್ಟ್‌ಗೆ ಸಂಬಂಧಿಸಿದಂತೆ ಪ್ರಿಯಾಂಕಾ ಗಾಂಧಿ ವಾದ್ರಾ, ಮಧ್ಯ ಪ್ರದೇಶದ ಕಾಂಗ್ರೆಸ್ ಮುಖ್ಯಸ್ಥ ಕಮಲ್ ನಾಥ್ ಮತ್ತು ಮಾಜಿ ಕೇಂದ್ರ ಸಚಿವ ಅರುಣ್ ಯಾದವ್ ಸೇರಿದಂತೆ ಹಿರಿಯ ಕಾಂಗ್ರೆಸ್ ನಾಯಕರ 'ಎಕ್ಸ್' ಖಾತೆ ನಿರ್ವಹಿವವರ ವಿರುದ್ಧ ಎಫ್ಐಆರ್ ದಾಖಲಿಸಿದ್ದೇವೆ ಎಂದು ಇಂದೋರ್ ಪೊಲೀಸರು ತಿಳಿಸಿದ್ದಾರೆ.

ಜ್ಞಾನೇಂದ್ರ ಅವಸ್ತಿ ಎಂಬ ವ್ಯಕ್ತಿಯ ಹೆಸರನ್ನು ಹೊಂದಿರುವ ನಕಲಿ ಪತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಲಾಗಿದೆ ಎಂದು ಸ್ಥಳೀಯ ಬಿಜೆಪಿಯ ಕಾನೂನು ಸೆಲ್ ಸಂಚಾಲಕ ನಿಮೇಶ್ ಪಾಠಕ್ ದೂರಿರುವುದಾಗಿ ಇಂದೋರ್ ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.

ಶೇ 50ರಷ್ಟು ಕಮಿಷನ್ ನೀಡುವಂತೆ ರಾಜ್ಯದ ಗುತ್ತಿಗೆದಾರರಿಗೆ ಕೇಳಲಾಗಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.

ನಗರದ ಸಂಯೋಗಿತಗಂಜ್ ಪೊಲೀಸ್ ಠಾಣೆಯಲ್ಲಿ ಅವಸ್ತಿ ಹಾಗೂ ಪ್ರಿಯಾಂಕಾ, ಕಮಲ್ ನಾಥ್ ಮತ್ತು ಅರುಣ್ ಯಾದವ್ ಅವರ ಎಕ್ಸ್ ಖಾತೆಗಳ 'ಹ್ಯಾಂಡ್ಲರ್' ವಿರುದ್ಧ ಪ್ರಕರಣ ದಾಖಲಾಗಿದ್ದು, ಪಾಠಕ್ ಅವರ ದೂರಿನ ಮೇರೆಗೆ ತನಿಖೆ ನಡೆಸಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.

ಇದಕ್ಕೂ ಮುನ್ನ ಶನಿವಾರದಂದು ಹೆಚ್ಚುವರಿ ಉಪ ಪೊಲೀಸ್ ಆಯುಕ್ತ ರಾಮ್ಸನೇಹಿ ಮಿಶ್ರಾ, ಪ್ರಿಯಾಂಕಾ ಗಾಂಧಿ ವಾದ್ರಾ, ಕಮಲ್ ನಾಥ್ ಮತ್ತು ಅರುಣ್ ಯಾದವ್ ಅವರ ಎಕ್ಸ್ ಖಾತೆಗಳ ವಿರುದ್ಧ ನಗರದ ಸಂಯೋಗಿತಗಂಜ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.

ಪಾಠಕ್ ಅವರ ದೂರಿನ ಮೇರೆಗೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 420 (ವಂಚನೆ) ಮತ್ತು 469 (ಪ್ರತಿಷ್ಠೆಗೆ ಹಾನಿ ಮಾಡುವ ಉದ್ದೇಶದಿಂದ ನಕಲಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದರು.

'ದಾರಿ ತಪ್ಪಿಸುವ' ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ಹಂಚಿಕೊಳ್ಳುವ ಮೂಲಕ ಮತ್ತು ರಾಜ್ಯದಲ್ಲಿ ಬಿಜೆಪಿ ಆಡಳಿತವು ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಆರೋಪಿಸುವುದರ ಮೂಲಕ ರಾಜ್ಯ ಸರ್ಕಾರ ಮತ್ತು ಅವರ ಪಕ್ಷದ ಇಮೇಜ್ ಅನ್ನು ಕೆಡಿಸಲು ಕಾಂಗ್ರೆಸ್ ನಾಯಕರು ಸಂಚು ರೂಪಿಸಿದ್ದಾರೆ ಎಂದು ಪಾಠಕ್ ಆರೋಪಿಸಿದ್ದಾರೆ.

ಆಯಾ ಎಕ್ಸ್ ಹ್ಯಾಂಡಲ್‌ಗಳ ಸತ್ಯಾಸತ್ಯತೆಯನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಶುಕ್ರವಾರ, ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಟ್ವೀಟ್ ಮಾಡಿದ್ದು, ಮಧ್ಯಪ್ರದೇಶದ ಗುತ್ತಿಗೆದಾರರ ಒಕ್ಕೂಟವು ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರಿಗೆ ಪತ್ರ ಬರೆದಿದ್ದು, 50 ಪ್ರತಿಶತ ಕಮಿಷನ್ ಪಾವತಿಸಿದ ನಂತರವೇ ತಮ್ಮ ಬಿಲ್ ಬಿಡುಗಡೆ ಮಾಡಲಾಗುತ್ತದೆ ಎಂದು ದೂರಿರುವುದಾಗಿ ತಿಳಿಸಿದ್ದಾರೆ.

'ಕರ್ನಾಟಕದಲ್ಲಿ ಭ್ರಷ್ಟ ಬಿಜೆಪಿ ಸರ್ಕಾರ ಶೇ 40ರಷ್ಟು ಕಮಿಷನ್ ಸಂಗ್ರಹಿಸುತ್ತಿತ್ತು. ಮಧ್ಯ ಪ್ರದೇಶದಲ್ಲಿನ ಬಿಜೆಪಿ ಭ್ರಷ್ಟಾಚಾರದ ತನ್ನದೇ ದಾಖಲೆಯನ್ನು ಮುರಿದು ಮುನ್ನಡೆದಿದೆ. 40 ಪರ್ಸೆಂಟ್ ಕಮಿಷನ್ ಸರ್ಕಾರವನ್ನು ಕರ್ನಾಟಕದ ಜನರು ಕಿತ್ತೊಗೆದರು. ಈಗ ಮಧ್ಯಪ್ರದೇಶದ ಜನರು ಶೇ 50 ಕಮಿಷನ್ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸುತ್ತಾರೆ' ಎಂದು ಅವರು ಪೋಸ್ಟ್‌ನಲ್ಲಿ ಆರೋಪಿಸಿದ್ದಾರೆ.

ಕಮಲ್ ನಾಥ್ ಮತ್ತು ಅರುಣ್ ಯಾದವ್ ಕೂಡ ಇದೇ ರೀತಿಯ ಪೋಸ್ಟ್‌ಗಳನ್ನು ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com