ಮಧುರೈ: ಶನಿವಾರ ಮುಂಜಾನೆ ಮಧುರೈ ರೈಲ್ವೆ ಜಂಕ್ಷನ್ ಬಳಿ ನಿಂತಿದ್ದ ಪ್ರವಾಸಿ ಕೋಚ್‌ನಲ್ಲಿ (ಪಾರ್ಟಿ ಕೋಚ್) ಸಂಭವಿಸಿದ ಬೆಂಕಿ ಅವಘಡದಲ್ಲಿ ಮೂವರು ಮಹಿಳೆಯರು ಸೇರಿದಂತೆ ಕನಿಷ್ಠ ಹತ್ತು ಪ್ರಯಾಣಿಕರು ಸಜೀವ ದಹನಗೊಂಡಿದ್ದಾರೆ.
ಬೆಳಗಿನ ಜಾವ 5.15ರ ಸುಮಾರಿಗೆ ಕೋಚ್‌ನಲ್ಲಿದ್ದ ಪ್ರಯಾಣಿಕರೊಬ್ಬರು ಎಲ್‌ಪಿಜಿ ಸಿಲಿಂಡರ್ ಬಳಸಿ ಟೀ ಮಾಡುತ್ತಿದ್ದಾಗ ಈ ಅವಘಡ ಸಂಭವಿಸಿದ್ದು, ಎಲ್ಲೆಡೆ ಬೆಂಕಿ ಹೊತ್ತಿಕೊಂಡಿದೆ.
ರೈಲ್ವೆ ಅಧಿಕಾರಿಗಳ ಪ್ರಕಾರ, ಈ ಸಮಯದಲ್ಲಿ ಮಲಗಿದ್ದರು ಎಂದು ನಂಬಲಾದ ಐವರು ಪುರುಷರು ಮತ್ತು ಮೂವರು ಮಹಿಳೆಯರು ಸುಟ್ಟು ಕರಕಲಾಗಿದ್ದಾರೆ. ಇನ್ನೂ ಇಬ್ಬರು ಮೃತ ವ್ಯಕ್ತಿಗಳ ಲಿಂಗ ಯಾವುದೆಂದು ತಿಳಿದಿಲ್ಲ.
ಮದುರೈ ಜಿಲ್ಲಾಧಿಕಾರಿ ಎಂ.ಎಸ್. ಸಂಗೀತಾ ಅವರು ಸ್ಥಳಕ್ಕೆ ಧಾವಿಸಿ ವಿಚಾರಣೆ ನಡೆಸಿದ್ದಾರೆ. ರೈಲು ಕಂಪಾರ್ಟ್‌ಮೆಂಟ್‌ನಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ 10 ಮಂದಿ ಸಾವಿಗೀಡಾಗಿದ್ದು, 20 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೋಚ್‌ನಿಂದ 55 ಜನರನ್ನು ರಕ್ಷಿಸಲಾಗಿದೆ ಎಂದು ತಿಳಿಸಿದ್ದಾರೆ.
ಪ್ರವಾಸಿ ಕೋಚ್ ಅನ್ನು ನಗರ್‌ಕೋಯಿಲ್‌ನಲ್ಲಿ ರೈಲಿಗೆ (16730- ಪುನಲೂರ್-ಮಧುರೈ ಎಕ್ಸ್‌ಪ್ರೆಸ್) ಎಕ್ಸ್‌ಪ್ರೆಸ್ ರೈಲಿನಿಂದ ಬೇರ್ಪಡಿಸಲಾಗಿತ್ತು. ಕೋಚ್‌ನಲ್ಲಿ ಸುಮಾರು 70 ಪ್ರಯಾಣಿಕರಿದ್ದರು ಎಂದು ಹೇಳಲಾಗಿದೆ. ನಂತರ ಈ ಬೇರ್ಪಟ್ಟ ಕೋಚ್ ಅನ್ನು ಮಧುರೈ ಸ್ಟೇಬ್ಲಿಂಗ್ ಲೈನ್ ಟ್ರ್ಯಾಕ್‌ನಲ್ಲಿ ನಿಲ್ಲಿಸಲಾಗಿತ್ತು. ಈ ವೇಳೆ ದುರದೃಷ್ಟವಶಾತ್, ಈ ಕೋಚ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಐಆರ್‌ಸಿಟಿಸಿ ಪೋರ್ಟಲ್ ಬಳಸಿ ಯಾರು ಬೇಕಾದರೂ ಪಾರ್ಟಿ ಕೋಚ್ ಅನ್ನು ಬುಕ್ ಮಾಡಬಹುದಾಗಿದೆ. ಆದರೆ, ಯಾವುದೇ ದಹನಕಾರಿ ವಸ್ತುಗಳನ್ನು ಸಾಗಿಸಲು ಪ್ರಯಾಣಿಕರಿಗೆ ಅನುಮತಿ ಇಲ್ಲ ಎಂದು ಗಣೇಶನ್ ಹೇಳಿದರು. ಈ ಕೋಚ್ ಅನ್ನು ಸಾರಿಗೆ ಉದ್ದೇಶಗಳಿಗಾಗಿ ಮಾತ್ರ ಬಳಸಬೇಕು. ಆದರೆ, ಈ ಗುಂಪು ಅಕ್ರಮವಾಗಿ ಗ್ಯಾಸ್ ಸಿಲಿಂಡರ್ ಸಾಗಣೆ ಮಾಡಿದೆ ಎನ್ನಲಾಗಿದೆ.
ಅವಘಡದ ನಂತರ ಸ್ಥಳದಲ್ಲಿ ಚದುರಿದ ವಸ್ತುಗಳ ಪೈಕಿ ಸಿಲಿಂಡರ್ ಮತ್ತು ಆಲೂಗಡ್ಡೆಯ ಚೀಲ ಸೇರಿದ್ದು, ಆಹಾರ ಬೇಯಿಸಲು ಪ್ರಯತ್ನಗಳು ನಡೆದಿವೆ ಎಂಬುದನ್ನು ಸೂಚಿಸುತ್ತದೆ.
ರಾಜ್ಯ ಕಂದಾಯ ಸಚಿವ ಪಿ. ಮೂರ್ತಿ ಹಾಗೂ ಮಧುರೈ ಪೊಲೀಸ್ ಆಯುಕ್ತ ಡಾ.ಜೆ. ಲೋಕನಾಥನ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಲಾಗಿದೆ. ಅಗ್ನಿ ಅವಘಡ ಮತ್ತು ದುರಂತಗಳಿಗೆ ಸಂಬಂಧಿಸಿದ ಮಾಹಿತಿಗಾಗಿ ದಕ್ಷಿಣ ರೈಲ್ವೆ ಎರಡು ಸಹಾಯವಾಣಿ ಸಂಖ್ಯೆಗಳನ್ನು ಪ್ರಕಟಿಸಿದೆ. ಅವುಗಳೆಂದರೆ, 9360552608, ಮತ್ತು 8015681915.
ಬೆಂಕಿ ಅವಘಡದಿಂದಾಗಿ ಮಧುರೈನಲ್ಲಿ ಇತರ ರೈಲುಗಳ ಸಂಚಾರದ ಮೇಲೆ ಪರಿಣಾಮ ಬೀರಿದೆ ಕಾರ್ಯಾಚರಣೆ ವಿಳಂಬವಾಗಿದೆ. ಹೆಚ್ಚಿನ ತನಿಖೆಗಳು ನಡೆಯುತ್ತಿವೆ.
Advertisement