ತಿರುಮಲ: ಖ್ಯಾತ ಪವಿತ್ರ ಯಾತ್ರಾತಾಣ ತಿರುಮಲದಲ್ಲಿ ಸಂಭವಿಸಿದ್ದ ಚಿರತೆ ದಾಳಿಗೆ ಬಾಲಕಿ ಸಾವು ಪ್ರಕರಣದ ಬೆನ್ನಲ್ಲೇ ತಿರುಮಲ ಅರಣ್ಯದಲ್ಲಿ ಚಿರತೆ ಸೆರೆ ಕಾರ್ಯಾಚರಣೆ ತೀವ್ರಗೊಂಡಿದ್ದು ಸೋಮವಾರ 4ನೇ ಚಿರತೆಯನ್ನು ಅರಣ್ಯಾಧಿಕಾರಿಗಳು ಸೆರೆ ಹಿಡಿದ್ದಾರೆ.
ತಿರುಪತಿ ತಿರುಮಲದ ಪಾದಯಾತ್ರೆ ವೇಳೆ ದಾಳಿ ಮಾಡಿ ಬಾಲಕಿಯನ್ನು ಕೊಂದಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದಿದ್ದಾರೆ. ಸೋಮವಾರ ಬೆಳಗಿನ ಜಾವ ತಿರುಮಲದಲ್ಲಿ 4ನೇ ಚಿರತೆಯನ್ನು ಸೆರೆ ಹಿಡಿಯಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ಧಾರೆ.
ಸುಮಾರು 5 ವರ್ಷ ಪ್ರಾಯದ ಗಂಡು ಚಿರತೆಯನ್ನು ಆಂಜನೇಯ ಸ್ವಾಮಿ ವಿಗ್ರಹವಿರುವ ಏಳನೇ ಮೈಲಿ ಬಳಿ ಹಿಡಿಯಲಾಗಿದೆ ಎಂದು ಅವರು ತಿಳಿಸಿದ್ದಾರೆ. ಬಳಿಕ, ಚಿರತೆಯನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಶ್ರೀ ವೆಂಕಟೇಶ್ವರ ಮೃಗಾಲಯಕ್ಕೆ (ತಿರುಪತಿ ಮೃಗಾಲಯ) ಸ್ಥಳಾಂತರಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ತಿರುಪತಿ ಜಿಲ್ಲಾ ಅರಣ್ಯಾಧಿಕಾರಿ (ಡಿಎಫ್‌ಒ) ಎ ಶ್ರೀನಿವಾಸುಲು ಅವರು, 'ಈ ಚಿರತೆಯನ್ನು ಆಗಸ್ಟ್ 17ರಿಂದ ಸೆರೆಹಿಡಿಯಲು ಪ್ರಯತ್ನಿಸುತ್ತಿದ್ದೇವೆ. ಆಗಿನಿಂದ ತಪ್ಪಿಸಿಕೊಳ್ಳುತ್ತಿತ್ತು. ಬೋನಿನ ಬಳಿಗೆ ಬರುತ್ತಿದ್ದ ಚಿರತೆ ಈ ಮೊದಲು ಬೋನಿಗೆ ಬಿದ್ದಿದ್ದ ಚಿರತೆಗಳನ್ನು ನೋಡಿ ಓಡಿಹೋಗುತ್ತಿತ್ತು. ಹಾಗಾಗಿ, ಬೇರೆ ಮಾರ್ಗಗಳನ್ನು ಅನುಸರಿಸಿ ಈ ಚಿರತೆಯನ್ನು ಸೆರೆ ಹಿಡಿದಿದ್ದೇವೆ’ ಎಂದು ತಿಳಿಸಿದರು.
ಇದನ್ನೂ ಓದಿ: ತಿರುಮಲ ಬೆನ್ನಲ್ಲೇ ಶ್ರೀಶೈಲಂನಲ್ಲೂ ಚಿರತೆ ಭೀತಿ
ಕ್ಯಾಮೆರಾಗಳ ಫ್ಲ್ಯಾಶ್‌ಗಳನ್ನು ನಿಷ್ಕ್ರಿಯಗೊಳಿಸಿ, ಟ್ರ್ಯಾಪ್ ಸೈಟ್ ಬಳಿ ಮನುಷ್ಯರ ಸಂಚಾರದ ವಾಸನೆಯನ್ನು ಹೋಗಲಾಡಿಸಲು ಪ್ರಾಣಿಗಳ ಸಂಚಾರದ ವಾಸನೆ ಬರುವಂತಹ ದ್ರಾವಣವನ್ನು ಸಿಂಪಡಿಸಲಾಗಿತ್ತು. ಈ ಹಿಂದೆ ಸೆರೆ ಹಿಡಿದ ಮೂರೂ ಚಿರತೆಗಳು ಒಂದೇ ವಯೋಮಾನದವುಗಳಾಗಿದ್ದು, ಒಂದೇ ಚಿರತೆಯ ಮರಿಗಳಿರಬಹುದು ಎಂದು ಅರಣ್ಯಾಧಿಕಾರಿಗಳು ಶಂಕಿಸಿದ್ದಾರೆ.
ಈ ಮಧ್ಯೆ, ಇತ್ತೀಚೆಗೆ ತಿರುಮಲದಲ್ಲಿ ಬಾಲಕಿಯನ್ನು ಕೊಂದಿದ್ದು ಇದೇ ಚಿರತೆ ಎಂದು ಶ್ರೀನಿವಾಸಲು ಖಚಿತಪಡಿಸಿದ್ದಾರೆ.
Advertisement