
ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಸೋಲಿಸಲು ರಣತಂತ್ರ ಹೆಣೆಯುತ್ತಿರುವ 28 ವಿರೋಧ ಪಕ್ಷಗಳ ಒಕ್ಕೂಟ ‘ಇಂಡಿಯಾ’ದ (ಭಾರತೀಯ ರಾಷ್ಟ್ರೀಯ ಅಭಿವೃದ್ಧಿಶೀಲ ಎಲ್ಲರನ್ನೂ ಒಳಗೊಳ್ಳುವ ಮೈತ್ರಿಕೂಟ) ಮೂರನೇ ಸಭೆ ಮುಂಬೈನಲ್ಲಿ ನಡೆಯುತ್ತಿದ್ದು, ಮೈತ್ರಿಕೂಟದ ನಾಯಕರಿಗೆ ಶಿವಸೇನೆ ಉದ್ಧವ್ ಠಾಕ್ರೆ ಬಣ ಕೇಸರಿ ಬಾವುಟಗಳ ಸ್ವಾಗತ ಕೋರಿದೆ.
ಇಂದು ಮತ್ತು ನಾಳೆ ಮುಂಬೈನಲ್ಲಿ ಇಂಡಿಯಾ ಮೈತ್ರಿಕೂಟದ ಸಭೆ ನಡೆಯುತ್ತಿದ್ದು ಇದೇ ಸಭೆಯಲ್ಲಿ ಮೈತ್ರಿಕೂಟದ ಲೋಗೋ ಅನಾವರಣವಾಗಲಿದೆ ಎಂದು ಹೇಳಲಾಗಿದೆ.
ಕೇಸರಿ ಬಾವುಟಗಳ ಸ್ವಾಗತ
‘ಇಂಡಿಯಾ’ ಸಭೆ ನಿಮಿತ್ತ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ವಿಪಕ್ಷ ನಾಯಕರನ್ನು ಕೇಸರಿ ಧ್ವಜಗಳು ಸ್ವಾಗತಿಸುತ್ತಿವೆ. ಇಂಡಿಯಾ ಸಭೆಗೂ ಮುನ್ನ ಶಿವಸೇನಾ ಉದ್ಧವ್ ಠಾಕ್ರೆ ಬಣದ (ಯುಬಿಟಿ) ಕಾರ್ಯಕರ್ತರು ಮುಂಬೈ ವಿಮಾನ ನಿಲ್ದಾಣದ ಹೊರಗೆ ಉದ್ಧವ್ ಠಾಕ್ರೆ ಅವರನ್ನು ಒಳಗೊಂಡ ಬ್ಯಾನರ್, ಕೇಸರಿ ಧ್ವಜಗಳನ್ನು ಅಳವಡಿಸಿದ್ದಾರೆ. ‘ಹಿಂದುತ್ವವೇ ನಮ್ಮ ಅಸ್ಮಿತೆಯಾಗಿದ್ದು, ಭಾರತದಲ್ಲಿ ವಾಸಿಸುವವರೆಲ್ಲರೂ ಹಿಂದೂಗಳೇ ಆಗಿದ್ದಾರೆ. ಇಂಡಿಯಾ ಮೈತ್ರಿಕೂಟದ ಪಾಲುದಾರರೂ ಇದಕ್ಕೆ ಒಪ್ಪಿಗೆ ನೀಡಲಿದ್ದಾರೆ’ ಎಂದು ಯುಬಿಟಿ ಮುಖಂಡರು ತಿಳಿಸಿದ್ದಾರೆ.
ಸಭೆಯಲ್ಲಿ ಭಾಗವಹಿಸಲಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ರಾಹುಲ್ ಗಾಂಧಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್, ಸಿಪಿಐ(ಎಂ)ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಸೀತಾರಾಂ ಯೆಚೂರಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಸೇರಿದಂತೆ ಹಲವು ನಾಯಕರ ಪೋಸ್ಟರ್‌ಗಳನ್ನು ರಸ್ತೆಯುದ್ದಕ್ಕೂ ಹಾಕಲಾಗಿದೆ.
ಎನ್‌ಸಿಪಿ (ಶರದ್ ಪವಾರ್ ಬಣ), ಶಿವಸೇನಾ ಉದ್ಧವ್ ಠಾಕ್ರೆ ಬಣ (ಯುಬಿಟಿ) ಮತ್ತು ಕಾಂಗ್ರೆಸ್ ಜತೆಗೂಡಿ ಸಂಘಟಿಸುತ್ತಿರುವ ಸಭೆಯಲ್ಲಿ ‘ಇಂಡಿಯಾ’ದ ಸಮನ್ವಯ ಸಮಿತಿ ಸೇರಿದಂತೆ ಇತರ ಸಮಿತಿಗಳಿಗೆ ಪದಾಧಿಕಾರಿಗಳು ಹಾಗೂ ಸದಸ್ಯರ ನೇಮಕವಾಗುವ ಸಾಧ್ಯತೆ ಇದೆ. ಇದೇ ವೇಳೆ, ಮೈತ್ರಿಕೂಟದ ನಾಯಕರು ‘ಇಂಡಿಯಾ’ದ ಲೋಗೊ ಬಿಡುಗಡೆಗೊಳಿಸಲಿದ್ದಾರೆ. ಜತೆಗೆ, ‘ಬಿಜೆಪಿ ಚಲೇ ಜಾವ್’ ಆಂದೋಲನಕ್ಕೆ ಚಾಲನೆ ನೀಡಲಿದ್ದಾರೆ ಎನ್ನಲಾಗಿದೆ.
ಪಂಚರಾಜ್ಯಗಳ ಚುನಾವಣೆಗೂ ತಂತ್ರಗಾರಿಕೆ
ಲೋಕಸಭಾ ಚುನಾವಣೆಗೆ ಸೀಟು ಹಂಚಿಕೆ, ಬಿಜೆಪಿ ವಿರುದ್ಧ ‘ಸಾಮಾನ್ಯ ಅಭ್ಯರ್ಥಿ’ ಸೂತ್ರದ ರೂಪುರೇಷೆ, ಸಂಪನ್ಮೂಲಗಳ ಕ್ರೋಡೀಕರಣ ಮತ್ತು ಪ್ರಚಾರ ತಂತ್ರಗಳ ಕುರಿತು ಸಮಾಲೋಚನೆಗಳು ನಡೆಯಲಿವೆ. ವರ್ಷಾಂತ್ಯದಲ್ಲಿ ನಡೆಯಲಿರುವ ಮಧ್ಯ ಪ್ರದೇಶ, ರಾಜಸ್ಥಾನ, ತೆಲಂಗಾಣ, ಛತ್ತೀಸಗಢ ಹಾಗೂ ಮಿಜೋರಾಂ ವಿಧಾನಸಭಾ ಚುನಾವಣೆಗಳಿಗೆ ವಿಪಕ್ಷ ಗಳ ಕಾರ್ಯತಂತ್ರದ ಬಗ್ಗೆಯೂ ಚರ್ಚೆ ನಡೆಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
Advertisement