'ರಾಹುಲ್‌ ಗಾಂಧಿಗೆ ಗರ್ವವಿತ್ತು, ಚಾಣಾಕ್ಷತೆ ಇರಲಿಲ್ಲ.. ಹೇಗೆ ಪ್ರಧಾನಮಂತ್ರಿ ಕಚೇರಿ ನಡೆಸಲು ಸಾಧ್ಯ': ಮಗಳ ಪುಸ್ತಕದಲ್ಲಿ ಪ್ರಣಬ್ ಹೇಳಿಕೆ

'ರಾಹುಲ್‌ ಗಾಂಧಿಗೆ ಅಹಂಕಾರ, ಗರ್ವವಿತ್ತು, ಚಾಣಾಕ್ಷತೆ ಇರಲಿಲ್ಲ.. ಇವನು ಹೇಗೆ ಪ್ರಧಾನಮಂತ್ರಿ ಕಚೇರಿ ನಡೆಸಲು ಸಾಧ್ಯ ಎಂದು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದ್ದರು ಎಂಬ ಹೇಳಿಕೆ ಇದೀಗ ವ್ಯಾಪಕ ಚರ್ಚೆಗೆ ಕಾರಣವಾಗುತ್ತಿದೆ.
ಪ್ರಣಬ್ ಮುಖರ್ಜಿ ಮತ್ತು ರಾಹುಲ್ ಗಾಂಧಿ
ಪ್ರಣಬ್ ಮುಖರ್ಜಿ ಮತ್ತು ರಾಹುಲ್ ಗಾಂಧಿ

ನವದೆಹಲಿ: 'ರಾಹುಲ್‌ ಗಾಂಧಿಗೆ ಅಹಂಕಾರವಿತ್ತು, ಚಾಣಾಕ್ಷತೆ ಇರಲಿಲ್ಲ.. ಇವನು ಹೇಗೆ ಪ್ರಧಾನಮಂತ್ರಿ ಕಚೇರಿ ನಡೆಸಲು ಸಾಧ್ಯ ಎಂದು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದ್ದರು ಎಂಬ ಹೇಳಿಕೆ ಇದೀಗ ವ್ಯಾಪಕ ಚರ್ಚೆಗೆ ಕಾರಣವಾಗುತ್ತಿದೆ.

ಹೌದು.. ಭಾರತರತ್ನ (Bharat Ratna), ಮಾಜಿ ರಾಷ್ಟ್ರಪತಿ (former President) ದಿ. ಪ್ರಣಬ್ ಮುಖರ್ಜಿ (Pranab Mukherjee) ಅವರ ಪುತ್ರಿ ಶರ್ಮಿಷ್ಠಾ ಮುಖರ್ಜಿ (Sharmishtha Mukherjee) ಬರೆದಿರುವ ಪುಸ್ತಕ (Book) ಇದೀಗ ದೇಶದ ರಾಜಕೀಯದಲ್ಲಿ ಕೋಲಾಹಲ ಎಬ್ಬಿಸುತ್ತಿದೆ. ‘ಪ್ರಣಬ್ ಮೈ ಫಾದರ್ - ಎ ಡಾಟರ್ ರಿಮೆಂಬರ್ಸ್’ (Pranab My Father - A Daughter Remembers) ಪುಸ್ತಕದಲ್ಲಿ ಸೋನಿಯಾ ಗಾಂಧಿ (Sonia Gandhi), ರಾಹುಲ್ ಗಾಂಧಿ (Rahul Gandhi) ಸೇರಿದಂತೆ ಹಿರಿಯ ಕಾಂಗ್ರೆಸ್ ನಾಯಕರ (Congress Leaders) ಬಗ್ಗೆ ಅನೇಕ ವಿಚಾರಗಳನ್ನು ಉಲ್ಲೇಖಿಸಲಾಗಿದೆ.

“ಇದು ನನ್ನ ಅಭಿಪ್ರಾಯ ಅಲ್ಲ, ಪ್ರಣಬ್ ಮುಖರ್ಜಿ ಅವರು ಜುಲೈ 28, 2020 ರಂದು ತಮ್ಮ ನೋಟ್​ ಬುಕ್​ನಲ್ಲಿ ತಮ್ಮ ನಿಧನದ ಒಂದು ತಿಂಗಳ ಮೊದಲು ಬರೆದ ಸಂದೇಶ ಈ ಪುಸ್ತಕದಲ್ಲಿದೆ” ಅಂತ ಶರ್ಮಿಷ್ಠಾ ಮುಖರ್ಜಿ ಹೇಳಿಕೊಂಡಿದ್ದಾರೆ. ಈ ಪುಸ್ತಕದಲ್ಲಿ ರಾಹುಲ್ ಗಾಂಧಿ ಕುರಿತಾಗಿ ಅನೇಕ ವಿಚಾರಗಳ ಪ್ರಸ್ತಾಪವಾಗಿದೆ. “ರಾಹುಲ್ ಗಾಂಧಿಗೆ ನೆಹರೂ-ಗಾಂಧಿ ಕುಟುಂಬದ ಅಹಂಕಾರವಿತ್ತು, ಆದರೆ ಅವರಿಗಿರುವ ಚಾಣಾಕ್ಷತೆ ಇರಲಿಲ್ಲ” ಅಂತ ಪ್ರಣಬ್ ಮುಖರ್ಜಿ ಅಭಿಪ್ರಾಯಪಟ್ಟಿದ್ದರು ಅಂತ ಪುಸ್ತಕದಲ್ಲಿದೆ ಎನ್ನುವುದನ್ನು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ರಾಹುಲ್ ಗಾಂಧಿಗೆ ಚಾಣಾಕ್ಷತೆ ಇಲ್ಲ!
ಹೀಗಂತ ಪ್ರಣಬ್ ಮುಖರ್ಜಿ ಅಭಿಪ್ರಾಯಪಟ್ಟಿದ್ದಾಗಿ ಪುಸ್ತಕದಲ್ಲಿ ಬರೆಯಲಾಗಿದೆ. 2013ರಲ್ಲಿ ರಾಹುಲ್ ಗಾಂಧಿಯವರ ಸುಗ್ರೀವಾಜ್ಞೆ ಪ್ರತಿಯನ್ನು ರಾಹುಲ್ ಗಾಂಧಿ ಹರಿದು ಹಾಕಿದ್ದರು. ಈ ವೇಳೆ ಪ್ರಣಬ್ ಮುಖರ್ಜಿ ವಿಚಲಿತಗೊಂಡಿದ್ದರು. ರಾಹುಲ್ ಗಾಂಧಿ ಅವರು ಗಾಂಧಿ ಹಾಗೂ ನೆಹರೂ ವಂಶಾವಳಿಯ ಎಲ್ಲಾ ಅಹಂಕಾರವನ್ನು ಹೊಂದಿದ್ದಾರೆ. ಆದರೆ ಅವರಿಗಿದ್ದ ಚಾಣಾಕ್ಷತೆ ರಾಹುಲ್ ಗಾಂಧಿಗೆ ಇಲ್ಲ ಅಂತ ಪ್ರಣಬ್ ಮುಖರ್ಜಿ ಅಭಿಪ್ರಾಯ ಪಟ್ಟಿದ್ದರಂತೆ.

ರಾಹುಲ್‌ರಿಂದ ಕಾಂಗ್ರೆಸ್‌ಗೆ ಪೆಟ್ಟು
‘ರಾಜಕೀಯ ಎಂಬುದು ದಿನದ 24 ಗಂಟೆಗಳ ಹಾಗೂ ವರ್ಷದ 365 ದಿನಗಳ ಉದ್ಯೋಗವಾಗಿದೆ. ಆದರೆ, ರಾಹುಲ್‌ ಆಗಿಂದಾಗ್ಗೆ ರಾಜಕೀಯದಿಂದ ಬಿಡುವು ಪಡೆಯುತ್ತಿದ್ದರು. ರಾಜಕೀಯದ ಬಗ್ಗೆ ಅವರಲ್ಲಿದ್ದ ಗ್ರಹಿಕೆಯ ಕೊರತೆಯಿಂದಾಗಿ 2014ರ ಲೋಕಸಭಾ ಚುನಾವಣೆಯಲ್ಲಿ ಅವರಿಗೆ ಸೋಲು ಬೆನ್ನತ್ತಿತ್ತು. ರಾಹುಲ್  ಗಾಂಧಿಯಿಂದ ಕಾಂಗ್ರೆಸ್ ಸಾಕಷ್ಟು ಪೆಟ್ಟು ತಿಂದಿತ್ತು ಎಂದು ಪ್ರಣಬ್ ಹೇಳಿದ್ದರು ಎನ್ನಲಾಗಿದೆ.

ಅಂತೆಯೇ ಪ್ರಧಾನಿಯಾಗಿದ್ದ ಡಾ.ಮನಮೋಹನ್‌ ಸಿಂಗ್‌ ಅವರು ತಪ್ಪಿತಸ್ಥ ಶಾಸಕರಿಗೂ ಶಿಕ್ಷೆ ವಿಧಿಸುವುದಕ್ಕೆ ಸಂಬಂಧಿಸಿದಂತೆ ಸುಗ್ರೀವಾಜ್ಞೆಯನ್ನು ಜಾರಿಗೊಳಿಸಿದ್ದರು. ಆದರೆ, ಪ್ರಚಾರಕ್ಕಾಗಿ ರಾಹುಲ್‌ ಇದನ್ನು ವಿರೋಧಿಸಿದ್ದರು. ಆಗ ರಾಹುಲ್‌ ಬಗ್ಗೆ ಪ್ರಣಬ್‌ ಕೋಪಗೊಂಡಿದ್ದ ಬಗ್ಗೆಯೂ ಪುಸ್ತಕದಲ್ಲಿ ವಿವರಿಸಲಾಗಿದೆ. ‌ ಪ್ರಣಬ್‌ ಅವರಿಗೆ ದೇಶದ ಪ್ರಧಾನಿಯಾಗುವ ಹೆಬ್ಬಯಕೆ ಇತ್ತು. ಆದರೆ, ಅದು ಕೈಗೂಡಲಿಲ್ಲ. ಅಪ್ಪನ ಡೈರಿ, ತನಗೆ ಹೇಳಿದ್ದ ರಾಜಕೀಯ ಕಥನಗಳು ಸೇರಿದಂತೆ ವೈಯಕ್ತಿಕ ನೆಲೆಗಟ್ಟಿನಲ್ಲಿ ಸಂಶೋಧನೆ ನಡೆಸಿ ಶರ್ಮಿಷ್ಟಾ ಅವರು ಈ ಪುಸ್ತಕ ಬರೆದಿದ್ದಾರೆ.  ದೇಶಕ್ಕೆ ನೆಹರೂ ಹಾಗೂ ಇಂದಿರಾಗಾಂಧಿ ನೀಡಿರುವ ಕೊಡುಗೆಗಳನ್ನು ಪರಿಗಣಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರಣಬ್‌ ನೀಡಿದ್ದ ಸಲಹೆ ಬಗ್ಗೆಯೂ ಇದರಲ್ಲಿ ಪ್ರಸ್ತಾಪಿಸಲಾಗಿದೆ.

ರಾಹುಲ್ ಗಾಂಧಿ ವಿದೇಶ ಪ್ರವಾಸದ ಬಗ್ಗೆ ಪ್ರಣಬ್ ಉಲ್ಲೇಖ
ರಾಹುಲ್ ಗಾಂಧಿ ಆಗಾಗ ವಿದೇಶಕ್ಕೆ ಹೋಗುವುದು ಅಥವಾ ರಾಜಕೀಯದಿಂದ ಬ್ರೇಕ್ ತೆಗೆದುಕೊಳ್ಳುವುದರ ಬಗ್ಗೆಯೂ ಪ್ರಣಬ್ ಮುಖರ್ಜಿ ಉಲ್ಲೇಖಿಸಿದ್ದಾರೆ. ಬಹುಶಃ ರಾಜಕೀಯವು ರಾಹುಲ್ ಅವರ ಪ್ರಧಾನತೆ ಅಲ್ಲ ಅಥವಾ ಆಗಾಗ್ಗೆ ಕಣ್ಮರೆಯಾಗುವುದರ ಹಿಂದೆ ಅವರ ವರ್ಚಸ್ಸಿನ ಕೊರತೆ ಮತ್ತು ರಾಜಕೀಯ ತಿಳುವಳಿಕೆಯ ಕೊರತೆಯು ಸಮಸ್ಯೆಯನ್ನು ಸೃಷ್ಟಿಸುತ್ತಿದೆ ಎಂದು ತಮ್ಮ ತಂದೆ ಹೇಳಿದ್ದರು ಎಂದು ಶರ್ಮಿಷ್ಟ ತಮ್ಮ ಪುಸ್ತಕಗಲ್ಲಿ ಉಲ್ಲೇಖಿಸಿದ್ದಾರೆ.

ರಾಹುಲ್ ಗಾಂಧಿ ಕಚೇರಿಗೆ ಎಎಂ, ಪಿಎಂ ನಡುವಿನ ವ್ಯತ್ಯಾಸವೇ ಗೊತ್ತಿಲ್ಲ!
ಹೀಗಂತ ಪ್ರಣಬ್ ಮುಖರ್ಜಿ ಹೇಳಿದ್ದರಂತೆ. ಒಮ್ಮೆ ಬೆಳಗ್ಗಿನ ಸಮಯದಲ್ಲಿ ರಾಹುಲ್ ಗಾಂಧಿ ಪ್ರಣಬ್ ಮುಖರ್ಜಿಯವರನ್ನು ಭೇಟಿಯಾಗಲು ಅವರ ಮನೆಗೆ ಬಂದಿದ್ರಂತೆ. ಬೆಳಗ್ಗಿನ ವಾಕಿಂಗ್ ಹಾಗೂ ಪೂಜೆಯಲ್ಲಿ ಬ್ಯುಸಿ ಇದ್ದ ಪ್ರಣಬ್, ಸಮಯ ತೆಗೆದುಕೊಂಡು ರಾಹುಲ್ ಗಾಂಧಿಯವರನ್ನು ಭೇಟಿಯಾದ್ರಂತೆ. ಅಷ್ಟಕ್ಕೂ ರಾಹುಲ್ ಗಾಂಧಿಗೆ ಸಂಜೆಯ ವೇಳೆ ಪ್ರಣಬ್ ಮುಖರ್ಜಿ ಅಪಾಯಿಂಟ್ ಮೆಂಟ್ ಕೊಟ್ಟಿದ್ರಂತೆ. ಆದರೆ ಅವರ ಕಚೇರಿ ಸಿಬ್ಬಂದಿ ಪಿಎಂ ಬದಲು ಎಎಂ ಎಂದು ತಿಳಿಸಿದ್ದು, ಗೊಂದಲಕ್ಕೆ ಕಾರಣವಾಗಿತ್ತಂತೆ. ಆಗ ಈ ಘಟನೆ ಬಗ್ಗೆ ಮಗಳೊಂದಿಗೆ ಮಾತನಾಡಿದ್ದ ಪ್ರಣಬ್, ಎಎಂ ಮತ್ತು ಪಿಎಂ ನಡುವೆ ವ್ಯತ್ಯಾಸ ಗೊತ್ತಾಗದಿದ್ದರೆ ಮುಂದೊಂದು ದಿನ ಅವರು ಪಿಎಂಒವನ್ನು (ಪ್ರಧಾನಿ ಕಚೇರಿ) ಹೇಗೆ ನಡೆಸುತ್ತಾರೆ? ಅಂತ ಪ್ರಶ್ನಿಸಿದ್ದರಂತೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com