ತೆಲಂಗಾಣ ಮುಖ್ಯಮಂತ್ರಿಯಾಗಿ ರೇವಂತ್ ರೆಡ್ಡಿ, ಉಪ ಮುಖ್ಯಮಂತ್ರಿಯಾಗಿ ಭಟ್ಟಿ ವಿಕ್ರಮಾರ್ಕ ಪ್ರಮಾಣ ವಚನ ಸ್ವೀಕಾರ

ತೆಲಂಗಾಣ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ರೇವಂತ್ ರೆಡ್ಡಿ ಮತ್ತು ಉಪ ಮುಖ್ಯಮಂತ್ರಿಯಾಗಿ ಭಟ್ಟಿ ವಿಕ್ರಮಾರ್ಕ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಹೈದರಾಬಾದ್‌ನ ಲಾಲ್ ಬಹದ್ದೂರ್ ಶಾಸ್ತ್ರಿ ಸ್ಟೇಡಿಯಂನಲ್ಲಿ ತೆಲಂಗಾಣ ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್ ಅವರು ನೂತನ ಮುಖ್ಯಮಂತ್ರಿಗಳಿಗೆ ಪ್ರಮಾಣ ವಚನ ಬೋಧಿಸಿದರು. 
ತೆಲಂಗಾಣ ನೂತನ ಮುಖ್ಯಮಂತ್ರಿ ರೇವಂತ್ ರೆಡ್ಡಿ
ತೆಲಂಗಾಣ ನೂತನ ಮುಖ್ಯಮಂತ್ರಿ ರೇವಂತ್ ರೆಡ್ಡಿ
Updated on

ಹೈದರಾಬಾದ್: ತೆಲಂಗಾಣದ ಎರಡನೇ ಮುಖ್ಯಮಂತ್ರಿಯಾಗಿ ಅನುಮಲಾ ರೇವಂತ್ ರೆಡ್ಡಿ ಅವರು ಗುರುವಾರ ಹೈದರಾಬಾದ್‌ನ ಎಲ್‌ಬಿ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಅಪಾರ ಸಂಖ್ಯೆಯ ಜನರು ಮತ್ತು ಕಾಂಗ್ರೆಸ್ ಕಾರ್ಯಕರ್ತರ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ತೆಲಂಗಾಣ ರಾಜ್ಯದ ಕಾಂಗ್ರೆಸ್‌ನ ಮೊದಲ ಮುಖ್ಯಮಂತ್ರಿಯಾಗಿ ರೇವಂತ್ ರೆಡ್ಡಿ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಉಪ ಮುಖ್ಯಮಂತ್ರಿಯಾಗಿ ಭಟ್ಟಿ ವಿಕ್ರಮಾರ್ಕ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್ ಅವರು ರೇವಂತ್ ರೆಡ್ಡಿ ಅವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು.

ಕಾಂಗ್ರೆಸ್‌ನ ಪ್ರಮುಖ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತಿತರರು ಉಪಸ್ಥಿತರಿದ್ದರು. ಇಡೀ ಎಲ್‌ಬಿ ಸ್ಟೇಡಿಯಂ ಮತ್ತು ಕ್ರೀಡಾಂಗಣಕ್ಕೆ ಹೋಗುವ ಎಲ್ಲಾ ರಸ್ತೆಗಳು ಕಾಂಗ್ರೆಸ್ ಕಾರ್ಯಕರ್ತರು ಮತ್ತು ರೇವಂತ್ ರೆಡ್ಡಿ ಅವರ ಅನುಯಾಯಿಗಳಿಂದ ತುಂಬಿದ್ದವು.ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೊಂದಿಗೆ ಕಾಂಗ್ರೆಸ್ ಶಾಸಕರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಸಂಪುಟಕ್ಕೆ ಸಚಿವರ ಸೇರ್ಪಡೆ: ರೇವತ್ ರೆಡ್ಡಿ ಅಲ್ಲದೆ ಅವರ ಸಂಪುಟದ 11 ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದರು. ಕೊಂಡ ಸುರೇಖಾ, ಡಿ ಅನಸೂಯಾ ಸೀತಕ್ಕ, ತುಮ್ಮಲ ನಾಗೇಶ್ವರ ರಾವ್ ಮತ್ತು ಜೂಪಲ್ಲಿ ಕೃಷ್ಣ ರಾವ್. ಬಹುತೇಕ ಸಚಿವರು ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಆದಾಗ್ಯೂ, ಅನಸೂಯಾ "ಪವಿತ್ರ ಹೃದಯಂ" (ಪವಿತ್ರ ಹೃದಯ) ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಈ ಮೂಲಕ 2014ರಲ್ಲಿ ಅಸ್ತಿತ್ವಕ್ಕೆ ಬಂದ ತೆಲಂಗಾಣ ರಾಜ್ಯದ ಮೊದಲ ಕಾಂಗ್ರೆಸ್ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ರೇವಂತ್ ರೆಡ್ಡಿ ಪಾತ್ರರಾಗಿದ್ದಾರೆ. ಇತ್ತೀಚಿನ ನಡೆದ ವಿಧಾನಸಭೆ ಚುನಾವಣೆಯಲ್ಲಿ ರೇವಂತ್ ರೆಡ್ಡಿ ಅವರು ಪ್ರಬಲ ಪ್ರತಿಸ್ಪರ್ಧಿ ಭಾರತ್ ರಾಷ್ಟ್ರ ಸಮಿತಿ (BRS)ಯನ್ನು ಮಣಿಸಿ ಕಾಂಗ್ರೆಸ್ ನ್ನು ಗೆಲುವಿನತ್ತ ಮುನ್ನಡೆಸಿದರು, ಚುನಾವಣೆಯಲ್ಲಿ ಕಾಂಗ್ರೆಸ್ 119 ಕ್ಷೇತ್ರಗಳಲ್ಲಿ 64 ಸ್ಥಾನಗಳನ್ನು ಗೆದ್ದಿತು. ಬಿಆರ್ ಎಸ್ 39 ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. 

ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಎಲ್ಲ ಸಚಿವರು ಸೋನಿಯಾ ಗಾಂಧಿ ಅವರಿಗೆ ಧನ್ಯವಾದ ಅರ್ಪಿಸಿದರು. ಸೋನಿಯಾ ಗಾಂಧಿ ಕೂಡ ಕೊಂಡ ಸುರೇಖಾ ಅವರನ್ನು ಅಪ್ಪಿಕೊಂಡರು. ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಜೂಪಲ್ಲಿ ಕೃಷ್ಣ ಅವರು ಸೋನಿಯಾ ಗಾಂಧಿ ಅವರ ಪಾದ ಮುಟ್ಟಿ ನಮಸ್ಕರಿಸಿದರು. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸೇರಿದಂತೆ ಸಂಪುಟದ ಒಟ್ಟು ಬಲ 18. ಉಳಿದ ಆರು ಸಚಿವರನ್ನು ಸೂಕ್ತ ಸಮಯದಲ್ಲಿ ಸಂಪುಟಕ್ಕೆ ಸೇರಿಸಿಕೊಳ್ಳಲಾಗುವುದು.

ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ ಅವರು ಅಧಿಕಾರ ವಹಿಸಿಕೊಂಡ ಕೂಡಲೇ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನೀಡಿದ್ದ ಆರು ಭರವಸೆಗಳನ್ನು ಜಾರಿಗೊಳಿಸುವ ಹೊಸ ಅಭಯ ಹಸ್ತಮ ಕಾಯ್ದೆಗೆ ಸಂಬಂಧಿಸಿದ ಎರಡು ಕಡತಗಳಿಗೆ ಸಹಿ ಹಾಕಿದರು ಮತ್ತು ಕುಬ್ಜ ಮಹಿಳೆ ರಜನಿ ಅವರಿಗೆ ಉದ್ಯೋಗ ಒದಗಿಸುವ ಮತ್ತೊಂದು ಕಡತಕ್ಕೆ ಸಹಿ ಹಾಕಿದರು.

ಇದೇ ವೇಳೆ ಮಾತನಾಡಿದ ರೇವಂತ್ ರೆಡ್ಡಿ, ಮಾಜಿ ಸಿಎಂ ಅಧಿಕೃತ ನಿವಾಸ ಪ್ರಗತಿ ಭವನದ ಬ್ಯಾರಿಕೇಡ್‌ಗಳನ್ನು ಇಂದು ತೆಗೆದುಹಾಕಲಾಗಿದ್ದು, ಶುಕ್ರವಾರ 10.30ಕ್ಕೆ ಪ್ರಗತಿ ಭವನದಲ್ಲಿ ಸರ್ಕಾರ ಪ್ರಜಾ ದರ್ಬಾರ್ ನಡೆಸಲಿದೆ ಎಂದು ಹೇಳಿದರು. ಪ್ರಜಾ ದರ್ಬಾರ್ ನಲ್ಲಿ ಪಾಲ್ಗೊಳ್ಳುವಂತೆ ಅವರು ಜನತೆಗೆ ಕರೆ ನೀಡಿದರು.ಪ್ರಗಾಹಿ ಭವನಕ್ಕೆ ಜ್ಯೋತಿರಾವ್ ಫುಲೆ ಹೆಸರಿಡಲಾಗುವುದು ಎಂದರು. 

ಸ್ಪೀಕರ್ ಪ್ರಸಾದ್:   ಗದ್ದಂ ಪ್ರಸಾದ್ ಕುಮಾರ್ ಅವರು ರಾಜ್ಯ ವಿಧಾನಸಭೆಯ ಸ್ಪೀಕರ್ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಸಂಚಾರ ನಿರ್ಬಂಧ ತೆರವು: ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಅಧಿಕೃತ ನಿವಾಸ ಪ್ರಗತಿ ಭವನದ ಬಳಿಯ ಬ್ಯಾರಿಕೇಡ್‌ಗಳನ್ನು ನಗರ ಪೊಲೀಸರು ತೆಗೆದುಹಾಕಿದರು. ಪ್ರಗತಿ ಭವನವನ್ನು ತಮ್ಮ ಅಧಿಕೃತ ನಿವಾಸವನ್ನಾಗಿ ಬಳಸುವುದಿಲ್ಲ ಮತ್ತು ಅದನ್ನು ಸಾರ್ವಜನಿಕರಿಗೆ ಬಳಸುವುದಾಗಿ ರೇವಂತ್ ರೆಡ್ಡಿ ಈಗಾಗಲೇ ಘೋಷಿಸಿದ್ದಾರೆ.

ರೇವಂತ್ ರೆಡ್ಡಿ ಸದ್ಯಕ್ಕೆ ಜುಬಿಲಿ ಹಿಲ್ಸ್‌ನಲ್ಲಿರುವ ತಮ್ಮ ನಿವಾಸದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com