ಜಮ್ಮು-ಕಾಶ್ಮೀರ: ಮಸೀದಿಯಲ್ಲಿ ಉಗ್ರರಿಂದ ಗುಂಡಿನ ದಾಳಿ, ಪ್ರಾರ್ಥನೆ ಸಲ್ಲಿಸುತ್ತಿದ್ದ ನಿವೃತ್ತ ಪೊಲೀಸ್​ ಅಧಿಕಾರಿ ಸಾವು!

ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದ ವೇಳೆ ಉಗ್ರರು ಗುಂಡಿನ ದಾಳಿ ನಡೆಸಿದ್ದು, ದಾಳಿಯಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಸಾವನ್ನಪ್ಪಿದ್ದಾರೆಂದು ಭಾನುವಾರ ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದ ವೇಳೆ ಉಗ್ರರು ಗುಂಡಿನ ದಾಳಿ ನಡೆಸಿದ್ದು, ದಾಳಿಯಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಸಾವನ್ನಪ್ಪಿದ್ದಾರೆಂದು ಭಾನುವಾರ ತಿಳಿದುಬಂದಿದೆ.

ಶೀರಿ ಬಾರಾಮುಲ್ಲಾದ  ಗಂಟ್ಮುಲ್ಲಾ ಎಂಬಲ್ಲಿರುವ ಮಸೀದಿಯಲ್ಲಿ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಪ್ರಾರ್ಥನೆ ಸಲ್ಲಿಸುತ್ತಿದ್ದ ನಿವೃತ್ತ ಪೊಲೀಸ್ ಅಧಿಕಾರಿ ಮೊಹಮ್ಮದ್ ಶಫಿ ಅವರು ಗಂಭೀರವಾಗಿ ಗಾಯಗೊಂಡು, ಮೃತಪಟ್ಟಿದ್ದಾರೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ನಡುವೆ ದಾಳಿ ನಡೆಸಿದ ಉಗ್ರರು ಸ್ಥಳದಿಂದ ಕಾಲ್ಕಿತ್ತು, ಉಗ್ರರ ಸದೆಬಡಿಯು ಭದ್ರತಾ ಪಡೆಗಳು ಸ್ಥಳದಲ್ಲಿ ಕಾರ್ಯಾಚರಣೆ ಆರಂಭಿಸಿದ್ದಾರೆ.

68 ವರ್ಷದ ಮಿರ್​ ಅವರು ಪೊಲೀಸ್ ಸೇವೆಯಿಂದ ನಿವೃತ್ತರಾಗಿದ್ದರು. ಅವರು ಸಬ್ ಇನ್ಸ್‌ಪೆಕ್ಟರ್ ಆಗಿ ಇಲಾಖೆಗೆ ಸೇರಿದ್ದರು. ಪೊಲೀಸ್ ಸೂಪರಿಂಟೆಂಡೆಂಟ್ (ಎಸ್​ಪಿ) ಆಗಿ ಬಡ್ತಿ ಪಡೆದಿದ್ದರು. ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಶಫಿ ಮಿರ್​ ಅವರು ಪೊಲೀಸ್​ ಸೇವೆಯಿಂದ ನಿವೃತ್ತರಾದ ನಂತರ, ಇಲ್ಲಿನ ಮಸೀದಿಯಲ್ಲಿ ದಿನಕ್ಕೆ ಐದು ಬಾರಿ ಆಜಾನ್ ನೀಡುತ್ತಿದ್ದರು. ಇಂದು ಮುಂಜಾನೆ ಅವರು ಮಸೀದಿಯೊಳಗೆ ಹೋಗಿ ಆಜಾನ್ ಅರ್ಧದಷ್ಟು ಓದಿದ್ದರು. ಈ ವೇಳೆ ಅಪರಿಚಿತ ಉಗ್ರರು ಮಸೀದಿಯೊಳಗೆ ನುಗ್ಗಿ ಮಿರ್​ ಮೇಲೆ ಗುಂಡಿನ ದಾಳಿ ನಡೆಸಿದರು ಎಂದು ಅಧಿಕಾರಿಯ ಸಂಬಂಧಿಕರು ಮಾಹಿತಿ ನೀಡಿದರು. ಸದ್ಯ ಮೃತದೇಹವನ್ನು ವೈದ್ಯಕೀಯ, ಕಾನೂನು ಪಾಲನೆಗೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಿ ಇಂದು ಅಂತ್ಯಕ್ರಿಯೆ ಮಾಡಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com