ತಮಿಳುನಾಡು: ರಸಗೊಬ್ಬರ ಕಾರ್ಖಾನೆಯಲ್ಲಿ ವಿಷಾನಿಲ ಸೋರಿಕೆ; ಹಲವರು ಅಸ್ವಸ್ಥ, ಆತಂಕ ಸೃಷ್ಟಿ

ತಮಿಳುನಾಡಿನ ರಸಗೊಬ್ಬರ ತಯಾರಿಕಾ ಕಾರ್ಖಾನೆಯೊಂದರಲ್ಲಿ ವಿಷಾನಿಲ ಸೋರಿಕೆಯಾಗಿದ್ದು, ಹಲವರು ಅಸ್ವಸ್ಥರಾಗಿದ್ದಾರೆಂದು ಬುಧವಾರ ತಿಳಿದುಬಂದಿದೆ.
ಸ್ಥಳದಲ್ಲಿ ಆತಂಕದ ವಾತಾವರಣ ಸೃಷ್ಟಿ.
ಸ್ಥಳದಲ್ಲಿ ಆತಂಕದ ವಾತಾವರಣ ಸೃಷ್ಟಿ.

ಚೆನ್ನೈ: ತಮಿಳುನಾಡಿನ ರಸಗೊಬ್ಬರ ತಯಾರಿಕಾ ಕಾರ್ಖಾನೆಯೊಂದರಲ್ಲಿ ವಿಷಾನಿಲ ಸೋರಿಕೆಯಾಗಿದ್ದು, ಹಲವರು ಅಸ್ವಸ್ಥರಾಗಿದ್ದಾರೆಂದು ಬುಧವಾರ ತಿಳಿದುಬಂದಿದೆ.

ಚೆನ್ನೈ ಸಮೀಪದ ಎನ್ನೋರ್‌ನಲ್ಲಿರುವ ರಸಗೊಬ್ಬರ ತಯಾರಿಕಾ ಕೇಂದ್ರವಾದ ಕೋರಮಂಡಲ್ ಇಂಟರ್‌ನ್ಯಾಶನಲ್ ಲಿಮಿಟೆಡ್'ನಲ್ಲಿ ಅಮೋನಿಯಾ ಅನಿಲ ಸೋರಿಕೆಯಾಗಿದ್ದು, ಹಲವರಲ್ಲಿ ಉಸಿರಾಟ ಸಮಸ್ಯೆ ಎದುರಾಗಿದೆ ಎಂದು ವರದಿಗಳು ತಿಳಿಸಿವೆ. ಸ್ಥಳದಲ್ಲಿ ಇದೀಗ ಆತಂಕದ ವಾತಾವರಣ ಸೃಷ್ಟಿಯಾಗಿದ್ದು, ಹಲವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಪೆರಿಯಕುಪ್ಪಂನಲ್ಲಿರುವ ಕಾರ್ಖಾನೆಯು ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿರುತ್ತದೆ, ಮಂಗಳವಾರ ಮಧ್ಯರಾತ್ರಿ ಅನಿಲ ಸೋರಿಕೆಯಾಗಿದ್ದು, ಇದನ್ನು ಸಿಬ್ಬಂದಿ ಗ್ರಹಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸ್ಥಳದಲ್ಲಿ ಇದೀಗ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಪಿ.ವಿಜಯಕುಮಾರ್ ಅವರು ತಿಳಿಸಿದ್ದಾರೆ.

ಏತನ್ಮಧ್ಯೆ, ಸ್ಥಳೀಯ ನಿವಾಸಿಗಳು ಮನೆಯ ಬಾಗಿಲು ಮತ್ತು ಕಿಟಕಿಗಳನ್ನು ಮುಚ್ಚುವಂತೆ ಮತ್ತು ಮಾಸ್ಕ್ ಧರಿಸಿ ಮತ್ತು ನೀರಿನಲ್ಲಿ ಅದ್ದಿದ ಕರವಸ್ತ್ರಗಳೊಂದಿಗೆ ಮನೆಗಳಿಂದ ಹೊರ ಬರುವಂತೆ ಮನವಿ ಮಾಡಿಕೊಳ್ಳಲಾಗಿದೆ.

ಅಮೋನಿಯಾವನ್ನು ದ್ರವ ರೂಪದಲ್ಲಿ ಪಂಪ್ ಮಾಡಲು ಪೈಪ್‌ಲೈನ್‌ನಲ್ಲಿ ತಂಪಾಗಿಸುವ ಪ್ರಕ್ರಿಯೆ ನಡೆಯುತ್ತಿತ್ತು. ಈ ವೇಳೆ ಅನಿಲ ಸೋರಿಕೆಯಾಗಿರಬಹುದು ಎಂದು ಹೇಳಲಾಗುತ್ತಿದೆ.

ಅಮೋನಿಯಾ ಸೋರಿಕೆಯಾಗಿರುವ ಕುರಿತು ಘಟಕದಿಂದ ಮಧ್ಯರಾತ್ರಿ 12:45 ಕ್ಕೆ ಸಂದೇಶ ಬಂದಿದ್ದು, ತಕ್ಷಣವೇ ಜಂಟಿ ಮುಖ್ಯ ಪರಿಸರ ಎಂಜಿನಿಯರ್ (ಎಂ) ಚೆನ್ನೈ, ಜಿಲ್ಲಾ ಪರಿಸರ ಎಂಜಿನಿಯರ್ (ಅಂಬತ್ತೂರು) ಮತ್ತು ಎಇಇ (ಮನಾಲಿ) 2:15 ಕ್ಕೆ ಸ್ಥಳಕ್ಕೆ ಭೇಟಿ ನೀಡಿ ಪೈಪ್‌ಲೈನ್ ಸ್ಥಳಗಳನ್ನು ಪರಿಶೀಲಿಸಿದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ನಡುವೆ ಸ್ಥಳೀಯರು ಪ್ರತಿಭಟನೆ ನಡೆಸುತ್ತಿದ್ದು, ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com