ಸರಕು ಸಾಗಾಣಿಕಾ ಟ್ರಕ್-ಕೋಳಿ ಸಾಗಣೆ ವಾಹನ ಅಪಘಾತ; ಚಾಲಕನ ರಕ್ಷಿಸುವ ಬದಲು ಕೋಳಿ ಲೂಟಿ

ದಟ್ಟ ಮಂಜಿನ ಪರಿಣಾಮ ಹಾದಿ ಕಾಣದೇ ಸರಕು ಸಾಗಾಣಿಕಾ ಟ್ರಕ್-ಕೋಳಿ ಸಾಗಣೆ ವಾಹನಗಳು ಅಪಘಾತಕ್ಕೀಡಾಗಿದ್ದು, ಈ ವೇಳೆ ಸ್ಥಳೀಯರು ಚಾಲಕನ ರಕ್ಷಿಸುವ ಬದಲು ವಾಹನದಲ್ಲಿದ್ದ ಕೋಳಿಗಳನ್ನು ಲೂಟಿ ಮಾಡಿದ್ದಾರೆ.
ಅಪಘಾತಕ್ಕೀಡಾದ ವಾಹನದಿಂದ ಕೋಳಿ ಕದ್ದ ಸ್ಥಳೀಯರು
ಅಪಘಾತಕ್ಕೀಡಾದ ವಾಹನದಿಂದ ಕೋಳಿ ಕದ್ದ ಸ್ಥಳೀಯರು
Updated on

ಆಗ್ರಾ: ದಟ್ಟ ಮಂಜಿನ ಪರಿಣಾಮ ಹಾದಿ ಕಾಣದೇ ಸರಕು ಸಾಗಾಣಿಕಾ ಟ್ರಕ್-ಕೋಳಿ ಸಾಗಣೆ ವಾಹನಗಳು ಅಪಘಾತಕ್ಕೀಡಾಗಿದ್ದು, ಈ ವೇಳೆ ಸ್ಥಳೀಯರು ಚಾಲಕನ ರಕ್ಷಿಸುವ ಬದಲು ವಾಹನದಲ್ಲಿದ್ದ ಕೋಳಿಗಳನ್ನು ಲೂಟಿ ಮಾಡಿದ್ದಾರೆ.

ದೆಹಲಿ-ಆಗ್ರಾ ನಡುವಿನ ಯಮುನಾ ಎಕ್ಸ್ ಪ್ರೆಸ್ ವೇನಲ್ಲಿ ಈ ಘಟನೆ ನಡೆದಿದ್ದು, ಕೋಳಿಗಳು ತುಂಬಿದ್ದ ವಾಹನವೊಂದು ಬೃಹತ್ ಗಾತ್ರದ ಸರಕು ಸಾಗಾಣಿಕಾ ಟ್ರಕ್ ಗೆ ಢಿಕ್ಕಿ ಹೊಡೆದಿದೆ. ಈ ವೇಳೆ ಚಾಲಕ ಮತ್ತು ಕ್ಲೀನರ್ ಗಂಭೀರವಾಗಿ ಗಾಯಗೊಂಡಿದ್ದು, ಕೂಡಲೇ ಸ್ಥಳಕ್ಕಾಗಮಿಸಿದ ಸ್ಥಳೀಯರು ಅವರನ್ನು ರಕ್ಷಿಸುವ ಬದಲು ವಾಹನದಲ್ಲಿದ್ದ ಕೋಳಿಗಳನ್ನು ಕದ್ದು ಪರಾರಿಯಾಗಿದ್ದಾರೆ.

ಉರುಳಿ ಬಿದ್ದಿದ್ದ ವಾಹನದಿಂದ ಕೋಳಿಗಳನ್ನು ಕದಿಯಲು ಭಾರೀ ನೂಕು ನುಗ್ಗಲು ಏರ್ಪಟ್ಟಿತ್ತು. ಹೆದ್ದಾರಿ ಅಕ್ಕ ಪಕ್ಕದ ಗ್ರಾಮಗಳ ಜನರು ಅಪಘಾತಕ್ಕೆ ಈಡಾಗಿದ್ದ ಲಾರಿಯಿಂದ ಸಾವಿರಾರು ಕೋಳಿಗಳನ್ನು ಹೊತ್ತೊಯ್ದರು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸಹಾಯಕ್ಕಾಗಿ ಅಂಗಲಾಚಿದ್ದ ಗಾಯಾಳು ಚಾಲಕ
ಕೋಳಿ ತುಂಬಿದ್ದ ಲಾರಿಯು ಆಗ್ರಾದಿಂದ ಕಸಗಂಜ್‌ಗೆ ಹೋಗುತ್ತಿತ್ತು. ಈ ವೇಳೆ ಅಪಘಾತ ಸಂಭವಿಸಿತ್ತು. ವಾಹನ ಚಾಲಕ ಸುನಿಲ್ ಕುಮಾರ್, ಆರಂಭದಲ್ಲಿ ಜನರನ್ನು ತಡೆಯಲು ಯತ್ನಿಸಿದರು. ಆದರೆ, ಜನರು ಗಾಯಾಳು ಚಾಲಕನಿಗೆ ನೆರವು ನೀಡುವ ಬದಲು ಕೋಳಿ ಕದಿಯುವುದಲ್ಲೇ ವ್ಯಸ್ತರಾಗಿದ್ದರು ಎಂದು ಚಾಲಕ ತಿಳಿಸಿದ್ದಾನೆ. ಸುಮಾರು ಎರಡೂವರೆ ಲಕ್ಷ ರೂ. ಮೌಲ್ಯದ ಕೋಳಿಗಳು ಕಳ್ಳತನ ಆಗಿವೆ ಎಂದು ತಿಳಿದು ಬಂದಿದೆ. ಇದರಿಂದ ಕೋಳಿ ಪೌಲ್ಟ್ರಿ ಮಾಲೀಕರಿಗೆ ಅಪಾರ ನಷ್ಟ ಸಂಭವಿಸಿದೆ.

ಅಸಹಾಯಕರಾಗಿದ್ದ ಪೊಲೀಸರು
ಅಪಘಾತಕ್ಕೆ ತುತ್ತಾಗಿದ್ದ ಲಾರಿಯ ಚಾಲಕ ಹಾಗೂ ಕ್ಲೀನರ್‌ ತೀವ್ರವಾಗಿ ಗಾಯಗೊಂಡು ಸಹಾಯಕ್ಕಾಗಿ ಅಂಗಲಾಚುತ್ತಿದ್ದರೂ ಕೂಡಾ ಗ್ರಾಮದ ಜನರ ಕೋಳಿ ಬೇಟೆ ನಿರಾತಂಕವಾಗಿತ್ತು. ಪೊಲೀಸ್, ಆಂಬುಲೆನ್ಸ್ ಸೇರಿದಂತೆ ರಕ್ಷಣಾ ಸಿಬ್ಬಂದಿಗೆ ತುರ್ತು ಕರೆ ಮಾಡೋದು ಬಿಟ್ಟು ಕೋಳಿಗಳ ಕಳ್ಳತನದಲ್ಲೇ ಜನರು ಬ್ಯುಸಿಯಾಗಿದ್ದರು. ಇನ್ನು ಕೋಳಿಗಳನ್ನು ಲೂಟಿ ಮಾಡಿದ ಬಳಿಕವೂ ಜನರು ಪೊಲೀಸರನ್ನು ಸಂಪರ್ಕಿಸುವ ಪ್ರಯತ್ನ ಮಾಡಲಿಲ್ಲ. ಗಾಯಾಳುಗಳ ಆರೋಗ್ಯ ಸ್ಥಿತಿ ಹೇಗಿದೆ? ಅವರ ರಕ್ಷಣೆ ಹೇಗೆ ಎಂದು ಯಾರೂ ಚಿಂತಿಸಲೂ ಇಲ್ಲ. ಕ್ಷಣಾರ್ಧದಲ್ಲಿ ಲಾರಿಯಲ್ಲಿದ್ದ ಎಲ್ಲ ಕೋಳಿಗಳನ್ನು ಕಳ್ಳತನ ಮಾಡಿಕೊಂಡು ಗ್ರಾಮಸ್ಥರು ಕಾಲ್ಕಿತ್ತಿದ್ದರು.

ಸರಣಿ ಅಪಘಾತ
ಈ ಅಪಘಾತ ಹಾಗೂ ನೂಕುನುಗ್ಗಲಿನ ವೇಳೆ 10ಕ್ಕೂ ಹೆಚ್ಚು ವಾಹನಗಳು ಜಖಂಗೊಂಡಿವೆ. ರಾಷ್ಟ್ರೀಯ ಹೆದ್ದಾರಿ 19ರಲ್ಲಿ ಈ ಘಟನೆ ನಡೆದಿದ್ದು, ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ. ಹಲವರು ಗಾಯಗೊಂಡಿದ್ದಾರೆ. ಅತಿಯಾಗಿ ಮಂಜು ಕವಿದಿದ್ದ ಕಾರಣ ವಾಹನಗಳ ಚಾಲಕರಿಗೆ ಮುಂದೆ ಏನೂ ಕಾಣದಂತಾಗಿತ್ತು. ಇದೇ ಕಾರಣದಿಂದ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಭಾರಿ ಆಕ್ರೋಶ
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಗ್ರಾಮಸ್ಥರ ಕೃತ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕನಿಷ್ಟ ಮಾನವೀಯತೆ ಬೇಡವೇ ಎಂದು ಪ್ರಶ್ನಿಸಿದ್ದಾರೆ. ಮದ್ಯ, ದಿನಸಿ, ಸೇರಿದಂತೆ ಯಾವುದೇ ವಸ್ತುಗಳು ತುಂಬಿದ್ದ ಲಾರಿಗಳು ಉರುಳಿ ಬಿದ್ದಾಗಲೂ ಹೆದ್ದಾರಿ ಪಕ್ಕದ ಜನತೆ ಇದೇ ರೀತಿ ವರ್ತಿಸುತ್ತಾರೆ. ಕರ್ನಾಟಕದಲ್ಲೂ ಮದ್ಯದ ವಾಹನ ಲೂಟಿಯಾದ ಹಲವು ಪ್ರಕರಣಗಳು ಈ ಹಿಂದೆ ವರದಿಯಾಗಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com