ಗುಜರಾತ್ ಕಾರ್ಖಾನೆಯಲ್ಲಿ ಸ್ಫೋಟ
ಗುಜರಾತ್ ಕಾರ್ಖಾನೆಯಲ್ಲಿ ಸ್ಫೋಟ

ಗುಜರಾತ್: ಫ್ಯಾಕ್ಟರಿಯಲ್ಲಿ ಸ್ಫೋಟ, ಕುದಿಯುತ್ತಿದ್ದ ಕಬ್ಬಿಣದ ರಸ ಬಿದ್ದು ಇಬ್ಬರು ಕಾರ್ಮಿಕರ ಸಾವು, ಹಲವರಿಗೆ ಗಾಯ

ಗುಜರಾತ್‌ನ ಭಾವನಗರದ ಸಿಹೋರ್‌ನಲ್ಲಿ ಬುಧವಾರ ರಾತ್ರಿ ಕಾರ್ಖಾನೆಯೊಂದರಲ್ಲಿ ಸಂಭವಿಸಿದ ಸ್ಫೋಟದಲ್ಲಿ ಕಬ್ಬಿಣದ ರಸ ಬಿದ್ದು ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಅಹ್ಮದಾಬಾದ್: ಗುಜರಾತ್‌ನ ಭಾವನಗರದ ಸಿಹೋರ್‌ನಲ್ಲಿ ಬುಧವಾರ ರಾತ್ರಿ ಕಾರ್ಖಾನೆಯೊಂದರಲ್ಲಿ ಸಂಭವಿಸಿದ ಸ್ಫೋಟದಲ್ಲಿ ಕಬ್ಬಿಣದ ರಸ ಬಿದ್ದು ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಗುಜರಾತ್‌ನ ಭಾವನಗರದ ಸಿಹೋರ್‌ನಲ್ಲಿರುವ ರುದ್ರಾ ಗ್ಲೋಬಲ್ ಇನ್‌ಫ್ರಾ ಲಿಮಿಟೆಡ್‌ನಲ್ಲಿರುವ ಫರ್ನೇಸ್ ಪ್ಲಾಂಟ್‌ನಲ್ಲಿ ಕಬ್ಬಿಣ ಕರಗಿಸುವಾಗ ಈ ಸ್ಫೋಟ ಸಂಭವಿಸಿದೆ. ಈ ವೇಳೆ ಸ್ಫೋಟದಿಂದ ಕಾರ್ಮಿಕರ ಮೇಲೆ ಕುಲುಮೆಯಿಂದ ಕರಗಿದ ಕಬ್ಬಿಣದ ಕುದಿಯುತ್ತಿದ್ದ ರಸದಮಳೆ ಸುರಿದಿದ್ದು, ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಮತ್ತು ಹವರ ಗಾಯಗೊಂಡಿದ್ದಾರೆ. ಅವಗಡದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮೂವರು ಕಾರ್ಮಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಒಬ್ಬ ಕಾರ್ಮಿಕ ಸ್ಥಳದಲ್ಲೇ ಸಾವನ್ನಪ್ಪಿದರೆ, ನಾಲ್ವರನ್ನು ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಇನ್ನೂ ಒಬ್ಬರು ಸಾವನ್ನಪ್ಪಿದರು ಎಂದು ಹೇಳಲಾಗಿದೆ.

"ಮೂವರು ಉದ್ಯೋಗಿಗಳು ಈಗ ಭಾವನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ" ಎಂದು ಕಾರ್ಖಾನೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಘಟನೆ ಕುರಿತು ಮಾಹಿತಿ ನೀಡಿರುವ ಸಿಹೋರ್ ತಾಲೂಕಿನ ಕಂದಾಯ ಅಧಿಕಾರಿ (ಮಾಮಲದಾರ್) ಆರ್.ಜಿ. ಪ್ರಜಾಪತಿ, 'ಸುದ್ದಿ ತಿಳಿದ ತಕ್ಷಣ, ಕಂಪನಿಯ ಉದ್ಯೋಗಿಗಳು ಗಾಯಾಳುಗಳನ್ನು ಆಸ್ಪತ್ರೆಗಳಿಗೆ ದಾಖಲಿಸಿದ್ದಾರೆ. ಮೃತ ದೇಹಗಳನ್ನು ಅವರ ಊರಿಗೆ ಹಿಂದಿರುಗಿಸಲು ನಿರ್ಧರಿಸಲಾಗಿದೆ. ದುರಂತ ಹೇಗೆ ಸಂಭವಿಸಿತು ಮತ್ತು ಕಂಪನಿಯ ಉದ್ಯೋಗಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಯಾವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗಿದೆ ಎಂಬುದನ್ನು ನಿರ್ಧರಿಸಲು ತನಿಖೆ ನಡೆಯುತ್ತಿದೆ. ತನಿಖೆಯುದ್ದಕ್ಕೂ ಕಂಪನಿ ನಿರ್ಲಕ್ಷ್ಯ ತೋರಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು,'' ಎಂದು ಹೇಳಿದರು.

ಅವಘಡ ಇದೇ ಮೊದಲಲ್ಲ
ಕಾರ್ಖಾನೆಗಳಲ್ಲಿ ಅಪಘಾತ ಸಂಭವಿಸುತ್ತಿರುವುದು ಇದೇ ಮೊದಲಲ್ಲ. ಗುಜರಾತ್‌ನಲ್ಲಿ ಇಂತಹ ಘಟನೆಗಳು ಕಳೆದ ಎರಡು ತಿಂಗಳಲ್ಲಿ ಹಲವಾರು ಬಡ ಕಾರ್ಮಿಕರ ಜೀವವನ್ನು ತೆಗೆದುಕೊಂಡಿವೆ. ಡಿಸೆಂಬರ್ 5 ರಂದು ಗುಜರಾತ್‌ನ ವಲ್ಸಾದ್ ಜಿಲ್ಲೆಯಲ್ಲಿ ಬಿಹಾರ ಮೂಲದ ಇಬ್ಬರು ಕಾರ್ಮಿಕರು ರಾಸಾಯನಿಕ ಸೋರಿಕೆಯಿಂದ ಉಸಿರುಗಟ್ಟಿ ಸಾವನ್ನಪ್ಪಿದ್ದರು. ನವೆಂಬರ್ 28 ರಂದು, ಸೂರತ್‌ನ ಸಚಿನ್ ಜಿಐಡಿಸಿಯಲ್ಲಿರುವ ಈಥರ್ ಕೆಮಿಕಲ್ ಇಂಡಸ್ಟ್ರಿಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಹತ್ತು ಜನರು ಸಾವನ್ನಪ್ಪಿ, 24 ಕಾರ್ಮಿಕರು ಸುಟ್ಟ ಗಾಯಗಳಿಗೆ ಒಳಗಾಗಿದ್ದರು.

ಗುಜರಾತ್ ವಿಧಾನಸಭೆಯ ಮಾನ್ಸೂನ್ ಅಧಿವೇಶನದಲ್ಲಿ ಕಾಂಗ್ರೆಸ್ ಶಾಸಕ ಜಿಗ್ನೇಶ್ ಮೇವಾನಿ ಅವರು ಕೇಳಿದ ಪ್ರಶ್ನೆಗೆ ಉತ್ತರವಾಗಿ ಗುಜರಾತ್ ಸರ್ಕಾರವು ಪ್ರಸ್ತುತಪಡಿಸಿದ ಮಾಹಿತಿಯ ಪ್ರಕಾರ, 2020-21 ಮತ್ತು 2022-23 ರ ನಡುವೆ ಕೈಗಾರಿಕಾ ಅಪಘಾತಗಳ ಸಂಖ್ಯೆ 17% ರಷ್ಟು ಹೆಚ್ಚಾಗಿದೆ. 2022-23 ರಲ್ಲಿ, ಗುಜರಾತ್‌ನಲ್ಲಿ ಕೈಗಾರಿಕಾ ಅಪಘಾತಗಳ ಸಂಖ್ಯೆಯು 2020-21 ರಲ್ಲಿ 179 ರಿಂದ 210 ಕ್ಕೆ ಏರಿತು.

ಸಾವಿನ ಸಂಖ್ಯೆಯು 15% ರಷ್ಟು ಹೆಚ್ಚಾಗಿದೆ, 2020-21 ರಲ್ಲಿ 217 ರಿಂದ 2022-23 ರಲ್ಲಿ 249 ಕ್ಕೆ ಏರಿಕೆಯಾಗಿದೆ ಎಂದು ಸರ್ಕಾರವೇ ಮಾಹಿತಿ ನೀಡಿದೆ.
 

Related Stories

No stories found.

Advertisement

X
Kannada Prabha
www.kannadaprabha.com