ವಿವೋ-ಇಂಡಿಯಾದ ಮೂವರಿಗೆ ಜಾಮೀನು ನೀಡಿದ ದೆಹಲಿ ನ್ಯಾಯಾಲಯ; ಆದೇಶ ಪ್ರಶ್ನಿಸಲು ಮುಂದಾದ ಇ.ಡಿ

ಈ ತಿಂಗಳ ಆರಂಭದಲ್ಲಿ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿದ್ದ ಮೂವರು ವಿವೋ-ಇಂಡಿಯಾದ ಕಾರ್ಯನಿರ್ವಾಹಕರಿಗೆ ದೆಹಲಿ ನ್ಯಾಯಾಲಯವು ಶನಿವಾರ ಜಾಮೀನು ಮಂಜೂರು ಮಾಡಿದೆ.
ವಿವೋ ಇಂಡಿಯಾ
ವಿವೋ ಇಂಡಿಯಾ

ನವದೆಹಲಿ: ಈ ತಿಂಗಳ ಆರಂಭದಲ್ಲಿ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿದ್ದ ಮೂವರು ವಿವೋ-ಇಂಡಿಯಾದ ಕಾರ್ಯನಿರ್ವಾಹಕರಿಗೆ ದೆಹಲಿ ನ್ಯಾಯಾಲಯವು ಶನಿವಾರ ಜಾಮೀನು ಮಂಜೂರು ಮಾಡಿದೆ.

ಆರೋಪಿಗಳನ್ನು ಬಂಧಿಸಿದ 24 ಗಂಟೆಗಳಲ್ಲಿ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿಲ್ಲ. ಆದ್ದರಿಂದ ಅವರ "ಕಸ್ಟಡಿ ಕಾನೂನುಬಾಹಿರ" ಎಂದು ಗಮನಿಸಿದ ನ್ಯಾಯಾಲಯ ಜಾಮೀನು ನೀಡಿದೆ.

ಡಿಸೆಂಬರ್ 21ರಂದು ತಮ್ಮನ್ನು ಬಂಧಿಸಲಾಯಿತು ಮತ್ತು ಇ.ಡಿ ದಾಖಲಿಸಿರುವಂತೆ  ಡಿಸೆಂಬರ್ 22 ರಂದು ಅಲ್ಲ ಎಂದು ಮೂವರು ಹೇಳಿಕೊಂಡಿದ್ದರು.

ಆದಾಗ್ಯೂ, ಪಟಿಯಾಲ ಹೌಸ್‌ನ ರಜಾಕಾಲದ ನ್ಯಾಯಾಧೀಶರಾದ ಡಾ. ಶಿರೀಶ್ ಅಗರ್ವಾಲ್ ಅವರು ಷರತ್ತನ್ನು ವಿಧಿಸಿದ್ದು, ಚೀನಾದ ಪ್ರಜೆ ಮತ್ತು ವಿವೋ-ಇಂಡಿಯಾದ ಹಂಗಾಮಿ ಸಿಇಒ ಹಾಂಗ್ ಕ್ಸುಕ್ವಾನ್ ಅಲಿಯಾಸ್ ಟೆರ್ರಿ, ಮುಖ್ಯ ಹಣಕಾಸು ಅಧಿಕಾರಿ (ಸಿಎಫ್‌ಒ) ಹರಿಂದರ್ ದಹಿಯಾ ಮತ್ತು ಸಲಹೆಗಾರ ಹೇಮಂತ್ ಮುಂಜಾಲ್ ಅವರು ಜನವರಿ 3ರವರೆಗೆ ಪ್ರತಿದಿನ ತನಿಖಾ ಸಂಸ್ಥೆಯ ಕಚೇರಿಗೆ ಹಾಜರಾಗಬೇಕು ಎಂದಿದ್ದಾರೆ.

ಆರೋಪಿಗಳು 'ಸಾಕ್ಷ್ಯಗಳನ್ನು ಹಾಳುಮಾಡಬಹುದು ಮತ್ತು ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದು' ಎಂಬ ಭಯವಿದೆ ಮತ್ತು ಚಳಿಗಾಲದ ರಜೆಯ ನಂತರ ಜನವರಿ 3ರಂದು ದೆಹಲಿ ಹೈಕೋರ್ಟ್‌ನಲ್ಲಿ ಈ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಬಯಸುತ್ತದೆ ಎಂದು ಇ.ಡಿ ನ್ಯಾಯಾಲಯಕ್ಕೆ ಮನವಿ ಮಾಡಿತು. 

ಇ.ಡಿಯ ಈ ಆತಂಕಗಳನ್ನು ನ್ಯಾಯಾಲಯವು ಇದೊಂದು 'ಔಪಚಾರಿಕ ಹೇಳಿಕೆಯಷ್ಟೆ' ಎಂದು ಕರೆದಿದೆ.

ಮೂವರು ಆರೋಪಿಗಳು ತಮ್ಮನ್ನು ಡಿಸೆಂಬರ್ 21 ರಂದು ಬಂಧಿಸಲಾಗಿದೆ ಮತ್ತು ಇ.ಡಿ ದಾಖಲಿಸಿರುವಂತೆ ಡಿಸೆಂಬರ್ 22 ರಂದು ಅಲ್ಲ. ಅಲ್ಲದೆ, ಬಂಧಿಸಿದ 24 ಗಂಟೆಗಳ ಒಳಗೆ ತಮ್ಮನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿಲ್ಲ. ಹೀಗಾಗಿ, ಈ ಬಂಧನವು ಕಾನೂನುಬಾಹಿರ ಮತ್ತು ಕಾನೂನಿನಲ್ಲಿ ಸಮರ್ಥನೀಯವಲ್ಲ ಎಂದು ದೂರಿ ಮೂವರು ಆರೋಪಿಗಳು ಜಾಮೀನು ಕೋರಿ ಸ್ಥಳೀಯ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. 

ಆದಾಗ್ಯೂ, ಇ.ಡಿ ಪರ ವಕೀಲರು ಈ ಆರೋಪವನ್ನು ನಿಕಾಕರಿಸಿದರು. ಮೂವರನ್ನು 'ಔಪಚಾರಿಕವಾಗಿ ಬಂಧಿಸಿದ ನಂತರ, ಅವರ ಬಂಧನದ ಕಾರಣಗಳನ್ನು ಒದಗಿಸಲಾಗಿದೆ ಮತ್ತು ಬಂಧಿಸಿದ 24 ಗಂಟೆಗಳ ಒಳಗೆ ಸಂಬಂಧಪಟ್ಟ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ' ಎಂದು ಹೇಳಿದರು.

ಡಿಸೆಂಬರ್ 21 ರಂದು ಮೂವರು ಆರೋಪಿಗಳಿಗೆ ಸಂಬಂಧಿಸಿದ ಸ್ಥಳಗಳನ್ನು ಶೋಧಿಸಲಾಯಿತು. ನಂತರ ವಿಚಾರಣೆಗಾಗಿ ಇ.ಡಿ ಕಚೇರಿಗೆ ಕರೆದೊಯ್ಯಲಾಯಿತು ಮತ್ತು ಅವರ ಫೋನ್‌ಗಳ ಫೋರೆನ್ಸಿಕ್ ವಿಶ್ಲೇಷಣೆಗಾಗಿ ಕಳುಹಿಸಲಾಯಿತು. ಮರುದಿನ ಡಿಸೆಂಬರ್ 22 ರಂದು ಅವರನ್ನು ಅಧಿಕೃತವಾಗಿ ಬಂಧಿಸಲಾಯಿತು ಎಂದು ಇ.ಡಿ ನ್ಯಾಯಾಲಯಕ್ಕೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com