ಪ್ರಧಾನಿ ಮೋದಿಯತ್ತ ಪುಷ್ಪವೃಷ್ಟಿ ಮಾಡಿದ ರಾಮಜನ್ಮಭೂಮಿ ವಿವಾದದ ಪ್ರಮುಖ ಅರ್ಜಿದಾರ ಇಕ್ಬಾಲ್ ಅನ್ಸಾರಿ

ಪ್ರಧಾನಿ ನರೇಂದ್ರ ಮೋದಿ ಅವರ ಅಯೋಧ್ಯಾ ರೋಡ್ ಶೋ ವೇಳೆ ಅಚ್ಚರಿ ಘಟನೆಯೊಂದು ನಡೆದಿದ್ದು, ಈ ಹಿಂದೆ ಬಾಬರಿ ಮಸೀದಿ ಪರ ಕೋರ್ಟ್ ನಲ್ಲಿ ಅರ್ಜಿ ಹಾಕಿದ್ದ ಇಕ್ಬಾಲ್ ಅನ್ಸಾರಿ ಇದೀಗ ಪ್ರಧಾನಿ ಮೋದಿ ಮೇಲೆ ಪುಷ್ಪವೃಷ್ಟಿ ಮಾಡಿ ಅಚ್ಚರಿ ಮೂಡಿಸಿದ್ದಾರೆ.
ರೋಡ್ ಶೋನಲ್ಲಿ ಪಾಲ್ಗೊಂಡಿದ್ದ ಇಕ್ಬಾಲ್ ಅನ್ಸಾರಿ
ರೋಡ್ ಶೋನಲ್ಲಿ ಪಾಲ್ಗೊಂಡಿದ್ದ ಇಕ್ಬಾಲ್ ಅನ್ಸಾರಿ

ಅಯೋಧ್ಯಾ: ಪ್ರಧಾನಿ ನರೇಂದ್ರ ಮೋದಿ ಅವರ ಅಯೋಧ್ಯಾ ರೋಡ್ ಶೋ ವೇಳೆ ಅಚ್ಚರಿ ಘಟನೆಯೊಂದು ನಡೆದಿದ್ದು, ಈ ಹಿಂದೆ ಬಾಬರಿ ಮಸೀದಿ ಪರ ಕೋರ್ಟ್ ನಲ್ಲಿ ಅರ್ಜಿ ಹಾಕಿದ್ದ ಇಕ್ಬಾಲ್ ಅನ್ಸಾರಿ ಇದೀಗ ಪ್ರಧಾನಿ ಮೋದಿ ಮೇಲೆ ಪುಷ್ಪವೃಷ್ಟಿ ಮಾಡಿ ಅಚ್ಚರಿ ಮೂಡಿಸಿದ್ದಾರೆ.

ಹೌದು.. ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಅಯೋಧ್ಯಾದಲ್ಲಿ ಶನಿವಾರ ರೋಡ್‌ ಶೋದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ, ರಾಮ ಜನ್ಮಭೂಮಿ ವಿವಾದ ಪ್ರಕರಣದ ಪ್ರಮುಖ ಅರ್ಜಿದಾರರಲ್ಲಿ ಒಬ್ಬರಾಗಿದ್ದ ಇಕ್ಬಾಲ್ ಅನ್ಸಾರಿ ಅವರು ಪುಷ್ಪವೃಷ್ಟಿ ಮಾಡಿದ ಅಚ್ಚರಿಯ ಘಟನೆ ನಡೆದಿದೆ. ಇಕ್ಬಾಲ್ ಅನ್ಸಾರಿ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಕಡೆ ಹೂಗಳ ಮಳೆ ಸುರಿಸಿದ್ದಾರೆ. ಈ ಕುರಿತ ವಿಡಿಯೋ ಮತ್ತು ಫೋಟೋಗಳು ವ್ಯಾಪಕ ವೈರಲ್ ಆಗುತ್ತಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದೆ.

ಮುಂದಿನ ತಿಂಗಳು ಭವ್ಯ ರಾಮಮಂದಿರ ಉದ್ಘಾಟನೆ ಕಾಣಲಿರುವ ಅಯೋಧ್ಯೆಯಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಕಾಮಗಾರಿಗಳಿಗೆ ಶಂಕು ಸ್ಥಾಪನೆ ನೆರವೇರಿಸುವ ಸಲುವಾಗಿ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅದ್ದೂರಿ ಸ್ವಾಗತ ದೊರಕಿತು. ವಿಮಾನ ನಿಲ್ದಾಣದಿಂದ ರೈಲ್ವೆ ನಿಲ್ದಾಣದವರೆಗೆ ರೋಡ್ ಶೋ ಮೂಲಕ ತೆರಳಿದ ಮೋದಿ ಅವರಿಗೆ ಜನರು ಪುಷ್ಪ ವೃಷ್ಟಿ ಮಾಡಿ, ಘೋಷಣೆಗಳನ್ನು ಕೂಗಿ ಹರ್ಷ ವ್ಯಕ್ತಪಡಿಸಿದರು. ಈ ವೇಳೆ ಇಕ್ಬಾಲ್ ಅನ್ಸಾರಿ ಕೂಡ ರೋಡ್ ಶೋನಲ್ಲಿ ಹಾಜರಿದ್ದದ್ದು ಕಂಡುಬಂದಿತು.

'ಅಯೋಧ್ಯೆ ಬದಲಾಗಿದ್ದು, ಸಾಕಷ್ಟು ಅಭಿವೃದ್ಧಿಯಾಗಿದೆ'
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಇಕ್ಬಾಲ್ ಅನ್ಸಾರಿ ಅವರು, ಅಯೋಧ್ಯಾ ನಗರ ಸಾಕಷ್ಟು ಬದಲಾಗಿದೆ. ಅಯೋಧ್ಯಾ ನೆಲಕ್ಕೆ ಸಮನಾಗಿರುವುದು ಬೇರೆ ಇಲ್ಲ. ಇಂದು ಪ್ರಧಾನಿ ಮೋದಿ ಅವರು ನಮ್ಮ ಸ್ಥಳಕ್ಕೆ ಬಂದಿದ್ದಾರೆ. ಅತಿಥಿಗಳನ್ನು ಸ್ವಾಗತಿಸುವುದು ಮತ್ತು ಶುಭ ಕೋರುವುದು ನಮ್ಮ ಧರ್ಮ ಹಾಗೂ ಸಂಪ್ರದಾಯ. ಇಲ್ಲಿರುವ ಹಿಂದೂಗಳು, ಮುಸ್ಲಿಮರು, ಸಿಖ್ಖರು, ಕ್ರೈಸ್ತರು ಹಾಗೂ ಎಲ್ಲರೂ ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಲು ಹಾಜರಿದ್ದರು.

ನರೇಂದ್ರ ಮೋದಿ ಅವರು ದೇಶದ ಪ್ರತಿಯೊಬ್ಬರಿಗೂ ಪ್ರಧಾನಿ. ಅವರ ನಾಯಕತ್ವದಲ್ಲಿ ಅಯೋಧ್ಯಾದಲ್ಲಿ ಸಾಕಷ್ಟು ಅಭಿವೃದ್ಧಿಗಳು ನಡೆದಿವೆ. ಹಿಂದೆ ಇಲ್ಲಿ ಒಂದು ಸಣ್ಣ ರೈಲು ನಿಲ್ದಾಣ ಇತ್ತು. ಅದೀಗ ಹೊಸ ರೂಪ ಪಡೆದಿದೆ. ಇಲ್ಲಿಗೆ ವಿಮಾನ ನಿಲ್ದಾಣ ಬಂದಿದೆ. ಅಯೋಧ್ಯೆ ಸಾಕಷ್ಟು ಬದಲಾಗಿದ್ದು, ಸಾಕಷ್ಟು ಅಭವೃದ್ದಿ ನಡೆದಿದೆ. ರಾಮ ಮಂದಿರ ಉದ್ಘಾಟನೆಗೆ ಜನರಿಗೆ ಆಹ್ವಾನ ನೀಡಲಾಗುತ್ತಿದೆ. ನನಗೂ ಆಹ್ವಾನ ದೊರಕಿದರೆ ನಾನು ಭಾಗವಹಿಸುತ್ತೇನೆ" ಎಂದು ಅವರು ಹೇಳಿದರು. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com