ಮುಜಾಫರ್‌ನಗರ: 'ಅವಧಿ ಮುಗಿದ' 10 ವರ್ಷ ಹಳೆಯ ಟ್ರ್ಯಾಕ್ಟರ್‌ಗಳಲ್ಲಿ ಫೆಬ್ರುವರಿ 10ರಂದು ಮಹಾ ಪಂಚಾಯತ್‌ಗಾಗಿ ಮುಜಾಫರ್‌ನಗರಕ್ಕೆ ತಲುಪಲು ಭಾರತೀಯ ಕಿಸಾನ್ ಒಕ್ಕೂಟದ (ಬಿಕೆಯು) ರಾಷ್ಟ್ರೀಯ ವಕ್ತಾರ ರಾಕೇಶ್ ಟಿಕಾಯತ್ ಅವರು ರೈತರನ್ನು ಕೇಳಿಕೊಂಡಿದ್ದಾರೆ.
ಇದು 10 ವರ್ಷ ಹಳೆಯದಾದ ಟ್ರ್ಯಾಕ್ಟರ್ ಸೇರಿದಂತೆ ಡೀಸೆಲ್ ವಾಹನಗಳ ನಿಷೇಧದ ಬಗ್ಗೆ ರೈತ ಸಮುದಾಯದ ಅನೇಕರು ಅಸಮಾಧಾನಗೊಂಡಿದ್ದಾರೆ ಎಂಬ ಸಂದೇಶವನ್ನು ರವಾನಿಸುತ್ತದೆ ಎಂದು ಅವರು ಹೇಳಿದರು.
ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯ ಬಗ್ಗೆ ಕೇಂದ್ರವು ಜನರನ್ನು ದಾರಿ ತಪ್ಪಿಸುತ್ತಿದೆ ಮತ್ತು ಅದಕ್ಕಾಗಿ ಹೋರಾಟ ಮುಂದುವರಿಯುತ್ತದೆ ಎಂದು ಹೇಳಿದರು.
ಬಿಕೆಯುಗೆ ಸಂಯೋಜಿತವಾಗಿರುವ ರೈತರು ತಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಕೋರಿ ಮುಜಾಫರ್‌ನಗರ ಜಿಲ್ಲೆಯಲ್ಲಿ ಕಳೆದ ವಾರ ರಾಕೇಶ್ ಟಿಕಾಯತ್ ನೇತೃತ್ವದಲ್ಲಿ ಅನಿರ್ದಿಷ್ಟಾವಧಿ ಮುಷ್ಕರವನ್ನು ಪ್ರಾರಂಭಿಸಿದರು.
'ಬಾಕಿ ಉಳಿದಿರುವ ಕಬ್ಬಿನ ಸಮಸ್ಯೆಗಳು, ಹೊಸ ಕಬ್ಬಿಗೆ ರಾಜ್ಯ ಸಲಹಾ ಬೆಲೆ (ಎಸ್‌ಎಪಿ), ಕೊಳವೆ ಬಾವಿಗೆ ಅಳವಡಿಸಲಾದ ವಿದ್ಯುತ್ ಮೀಟರ್ ಮತ್ತು ಮುಖ್ಯವಾಗಿ ಎಂಎಸ್‌ಪಿ (ಕನಿಷ್ಠ ಬೆಂಬಲ ಬೆಲೆ) ಕುರಿತು ನಾವು ಸರ್ಕಾರದಿಂದ ಈಡೇರದ ಭರವಸೆಗಳ ಬಗ್ಗೆ ಚರ್ಚಿಸಲಿದ್ದೇವೆ' ಎಂದು ಟಿಕಾಯತ್ ಮಹಾ ಪಂಚಾಯತ್‌ನ ಕಾರ್ಯಸೂಚಿಯ ಕುರಿತು ಹೇಳಿದರು.
ಇದೇ ವೇಳೆ, ಬಿಕೆಯು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯುಧ್ವೀರ್ ಸಿಂಗ್ ಮಾತನಾಡಿ, ಬಜೆಟ್‌ನಲ್ಲಿ ರೈತರಿಗೆ ಏನೂ ಸಿಕ್ಕಿಲ್ಲ. ಕಬ್ಬಿನ ಬೆಲೆ ಮತ್ತು ಕಬ್ಬಿನ ಬಾಕಿ ಹಣ ಪಾವತಿಯ ಬಗ್ಗೆ ಸರ್ಕಾರ ಮಾತನಾಡುತ್ತಿಲ್ಲ. ಅವರು ರೈತರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದರು.
ಸಂಯುಕ್ತ ಕಿಸಾನ್ ಮೋರ್ಚಾಗೆ (ಎಸ್‌ಕೆಎಂ) ಸಂಬಂಧಿಸಿದ ಶಾಮ್ಲಿ, ಬಾಗ್‌ಪತ್, ಮೀರತ್, ಸಹರಾನ್‌ಪುರ್ ಮುಂತಾದ ಕಡೆಗಳಿಂದ ಹಲವಾರು ರೈತ ಮುಖಂಡರು ಸಹ ಮಹಾ ಪಂಚಾಯತ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಬಿಕೆಯು ಮೂಲಗಳು ತಿಳಿಸಿವೆ.
Advertisement